More

    ಮುರುಘಾ ಮಠಕ್ಕೆ ಇಂದು ರಾಹುಲ್‌ಗಾಂಧಿ ಭೇಟಿ; ಮಠಾಧೀಶರ ಜತೆ ಸಮಾಲೋಚನೆ, ಭಕ್ತರ ಪ್ರವೇಶಕ್ಕೆ ನಿರ್ಬಂಧ

    ಚಿತ್ರದುರ್ಗ: ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ಗಾಂಧಿ ಮುರುಘಾ ಮಠಕ್ಕೆ ಬುಧವಾರ ಬೆಳಗ್ಗೆ 11ಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆಯಲಿದ್ದು, 30ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

    ಎಐಸಿಸಿ ನಾಯಕರಾದ ರಣದೀಪ್ ಸುರ್ಜಿವಾಲ, ಕೆ.ಸಿ.ವೇಣುಗೋಪಾಲ್ ಸೇರಿ ಎಐಸಿಸಿ, ಕೆಪಿಸಿಸಿ ಪ್ರಮುಖರು ರಾಹುಲ್‌ಗೆ ಸಾಥ್ ನೀಡಲಿದ್ದಾರೆ. ಕಾರ್ಯಕರ್ತರು ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಮುರುಘಾಮಠದ ಬಳಿ, ರಾ.ಹೆ.48ರಲ್ಲಿ ಫ್ಲೆಕ್ಸ್, ಬಾವುಟಗಳು ರಾರಾಜಿಸುತ್ತಿವೆ.

    ಹುಬ್ಬಳ್ಳಿಯಿಂದ ದುರ್ಗಕ್ಕೆ ರಸ್ತೆ ಮಾರ್ಗದಲ್ಲಿ ಬೆಳಗ್ಗೆ 11ಕ್ಕೆ ಆಗಮಿಸಿ ರಾಹುಲ್, ನೇರ ಮಠಕ್ಕೆ ಆಗಮಿಸಿ ಶರಣರು ಹಾಗೂ ನಾನಾ ಮಠಾಧೀಶರ ಭೇಟಿಯ ಬಳಿಕ 11.50ಕ್ಕೆ ದಾವಣಗೆರೆಗೆ ತೆರಳಲಿದ್ದಾರೆ.

    ಝೆಡ್ ಪ್ಲಸ್ ಭದ್ರತೆ ಹೊಂದಿರುವ ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಕಳೆದ ಎರಡು ದಿನಗಳಿಂದ ಮಠಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ದಲ್ಲದೆ, ಸಿಆರ್‌ಪಿಎಫ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

    ಭದ್ರತೆಗೆ 4 ಡಿಎಆರ್ ತುಕಡಿ, ವಿದ್ವಂಸಕ ವಿರೋಧಿ ನಿಗ್ರಹ ಪೊಲೀಸರ ತಂಡ, ಕ್ಯೂಆರ್‌ಟಿ ಇತ್ಯಾದಿ ಪಡೆಗಳು ಸೇರಿ 200ಕ್ಕೂ ಹೆಚ್ಚು ಪೊಲೀಸರನ್ನು ಮಠಕ್ಕೆ ನಿಯೋಜಿಸಲಾಗಿದೆ. ಒಬ್ಬರು ಡಿಎಸ್ಪಿ, 6 ಸಿಪಿಐಗಳು ಉಸ್ತುವಾರಿ ವಹಿಸಲಿದ್ದಾರೆ.

    ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಶ್ರೀಮಠಕ್ಕೆ, ಮುರುಘಾ ವನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ.

    ಪ್ರತಿ ಕ್ಷೇತ್ರದಿಂದ 100 ಬಸ್: ದಾವಣಗೆರೆಯಲ್ಲಿ ಬುಧವಾರ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವಕ್ಕೆ ಕೋಟೆ ನಾಡಿನಿಂದಲೂ ಪಕ್ಷದ ಕಾರ್ಯಕರ್ತರು, ಸಿದ್ದು ಅಭಿಮಾನಿಗಳು ತೆರಳುತ್ತಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ನೂರು ಬಸ್‌ಗಳನ್ನು ಬಿಡಲಾಗಿದೆ.

    ನೂರಾರು ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ದಾವಣಗೆರೆಗೆ ತೆರಳುತ್ತಿರುವುದರಿಂದ, ಬಸ್‌ಗಳ ಎಂದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಟ್ಯಾಕ್ಸಿ, ಕಾರು, ಕ್ರೂಸರ್ ಸೇರಿ ನಾನಾ ವಾಹನಗಳಲ್ಲೂ ಕಾರ್ಯಕರ್ತರು, ಮುಖಂಡರು ದಾವಣಗೆರೆಗೆ ತೆರಳುತ್ತಿದ್ದಾರೆ.

    ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಪಕ್ಷದ ಶಾಸಕರು, ಮಾಜಿ ಶಾಸಕರು, ವಿಧಾನಸಭೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಹಿತ ಹಲವು ಮುಖಂಡರು, ಪಕ್ಷದ ಪ್ರಮುಖರು ಮುಂದಾಗಿದ್ದಾರೆ. ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲೂ ಲಾಡ್ಜ್‌ಗಳು ಭರ್ತಿಯಾಗಿವೆ.

    ಸಿದ್ದರಾಮಯ್ಯ ಭೇಟಿ:
    ಬುಧವಾರ ಸಂಜೆ ಜಿಲ್ಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಸಂಜೆ 6.30ಕ್ಕೆ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಅವರು ರಾತ್ರಿ 7.30ಕ್ಕೆ ಚಿತ್ರದುರ್ಗದ ಮುರುಘಾ ಮಠಕ್ಕೆ ಬಂದು ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದು 8 ಗಂಟೆಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳಲಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts