More

    ಸೇನಾ ಹುದ್ದೆಗೆ ನಕಲಿ ದಾಖಲೆ

    ಚಿತ್ರದುರ್ಗ: ಸೇನೆಗೆ ಸೇರಲು ನಕಲಿ ದಾಖಲೆ ಸೃಷ್ಟಿಸುವ ಅಂತಾರಾಜ್ಯ ಜಾಲವನ್ನು ಭೇದಿಸಿರುವ ನಗರ ಠಾಣೆ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳ ಪೈಕಿ, ಮಹಾರಾಷ್ಟ್ರ ಮೂಲದ ಇಬ್ಬರು ಉದ್ಯೋಗಾಂಕ್ಷಿಗಳನ್ನು ಬಂಧಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಜಿ.ರಾಧಿಕಾ, ಬಂಧಿತ ಅಭ್ಯರ್ಥಿಗಳಾದ ಸಚಿನ್ ಧನ್‌ಜಿ (21) ಹಾಗೂ ಸಂತೋಷ್ ಶಹಜಿ ಖಂಡೇಕರ್ (22) ಅವರ ವಿಚಾರಣೆ ಮುಂದುವರಿದಿದೆ ಎಂದರು.

    ಇವರು ಚಿತ್ರದುರ್ಗ ಕೋಟೆ ರಸ್ತೆ ವಿಳಾಸದ ವಾಸ ದೃಢೀಕರಣಕ್ಕಾಗಿ ವೋಟರ್ ಐಡಿ, ಆಧಾರ್, ರೇಷನ್ ಕಾರ್ಡ್, ಆದಾಯ ಹಾಗೂ ಜಾತಿ ಪ್ರಮಾಣ ಮತ್ತಿತರ ದಾಖಲೆಗಳನ್ನು ಸೃಷ್ಟಿಸಿ ಕೊಡಲು ವಂಚಕರಿಗೆ 3.70 ಲಕ್ಷ ರೂ. ಪಾವತಿಸಿದ್ದರು. ನಕಲಿ ದಾಖಲೆಗಳಿಗಾಗಿ ವಂಚಕರು ಉದ್ಯೋಗಾಂಕ್ಷಿಗಳಿಂದ 1-3 ಲಕ್ಷ ರೂ. ವರೆಗೆ ವಸೂಲಿ ಮಾಡುತ್ತಿದ್ದರು.

    ಬಂಧಿತ ಇಬ್ಬರು ಇನ್ನು ಸೇನೆ ಸೇವೆಗೆ ಸೇರ್ಪಡೆಯಾಗಿರಲಿಲ್ಲ, ದಾಖಲೆಗಳ ಪರಿಶೀಲನೆ ವೇಳೆ ಹಾಗೂ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಸಂದರ್ಭದಲ್ಲಿ ಜಾಲದ ಕರಾಮತ್ತು ಬೆಳಕಿಗೆ ಬಂದಿದೆ. ಸಿದ್ಧಪಡಿಸಿದ್ದ ನಕಲಿ ದಾಖಲೆಗಳನ್ನು ಬಂಧಿತರು ಮಡಿಕೇರಿಯಲ್ಲಿ ನಡೆದಿದ್ದ ರ‌್ಯಾಲಿಯಲ್ಲಿ ಸೇನೆಗೆ ಸಲ್ಲಿಸಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.

    ತಲೆ ಮರೆಸಿಕೊಂಡಿರುವ ಪ್ರಮುಖ ವಂಚಕ ಆರೋಪಿ ಸಾಂಗ್ಲಿಯ ಪ್ರಕಾಶ್ ಬಾಬಾಸುದೇವ್ ಯಾನೆ ಪಕ್ಕ, ಸಂತೋಷ್ ಅಶೋಕ್ ಅಕ್ಷಯ್ ಪಾಟೀಲ್, ಅಥಣಿಯ ಸಾವಂತ್, ಜಮಖಂಡಿಯ ಗೋವಿಂದ್ ಸಾಂಬಾಜಿ ನಿಂಬಾಳ್ಕರ್ ಹಾಗೂ ಮೂವರು ಅಭ್ಯರ್ಥಿಗಳಾದ ಸಾಂಗ್ಲಿಯ ಬಾಮ್ನೆ ರಜನಿಕಾಂತ್, ಗಡದೆ ಪ್ರಕಾಶ್, ಗಲಂಡೆ ತುಕಾರಾಮ್ ವಿಠಲ್ ಬಂಧನಕ್ಕೆ ಶೋಧ ನಡೆದಿದೆ ಎಂದರು.

    ನಗರ ಠಾಣೆ ಪಿಐ ಟಿ.ಆರ್.ನಯೀಮ್ ಅಹ್ಮದ್, ಎಎಸ್‌ಐ ಜಿ.ನಾಗರಾಜ್ ನಾಯ್ಕ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ ಎಂದು ತಿಳಿಸಿದರು.

    ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿ ಪಾಂಡುರಂಗ ಸುದ್ದಿಗೋಷ್ಠಿಯಲ್ಲಿದ್ದರು.

    ಏನಿದು ಪ್ರಕರಣ: ಕರ್ನಾಟಕದಲ್ಲಿ ಎಲ್ಲಿಯೇ ಸೇನಾ ಹುದ್ದೆಗೆ ನೇಮಕಾತಿ ರ‌್ಯಾಲಿ ನಡೆಯಲಿ, ಅಲ್ಲಿಗೆ ಬರುವಂಥ ಉದ್ಯೋಗಾಂಕ್ಷಿಗಳನ್ನು ವಂಚಕರು ಸಂಪರ್ಕಿಸಿ, ಆಯಾ ಜಿಲ್ಲೆಯ ವಾಸ ದೃಢೀಕರಣ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿದ್ದರು. ಮೊದಲು ವೋಟರ್ ಐಡಿ ಸಿದ್ಧಪಡಿಸಿದ ಬಳಿಕ ಉಳಿದ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ವಾಸದ ದಾಖಲೆಗಳ ನಕಲಾಗುತ್ತಿತ್ತೇ ವಿನಾ ಅಂಕಪಟಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಪಿ ರಾಧಿಕಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts