More

    ದುರ್ಗದ ನಗರಸಭೆಗೆ 40 ಕೋಟಿ ರೂ. ಸಾಲ

    ಚಿತ್ರದುರ್ಗ: ಕರ್ನಾಟಕ ನಗರ ಮೂಲ ಸೌಕರ್ಯಾಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ಚಿತ್ರದುರ್ಗ ನಗರಸಭೆಗೆ 40 ಕೋಟಿ ರೂ. ಸಾಲ ಮಂಜೂರು ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

    ನಗರಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮಠದ ಕುರುಬರಹಟ್ಟಿ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆಗೆ ಸೂಚಿಸಿದ್ದೇನೆ ಎಂದರು.

    ರಾ.ಹೆ.48ರಿಂದ ಕೋಟೆವರೆಗೆ ರಸ್ತೆ ನಿರ್ಮಾಣಕ್ಕಾಗಿ 46 ಕೋಟಿ ರೂ. ಬಿಡುಗಡೆ ಸೇರಿ ಇಲ್ಲಿಯ ಬೇಡಿಕೆಗಳ ಈಡೇರಿಕೆ ನಿಟ್ಟಿನಲ್ಲಿ ಬೆಂಗಳೂರಲ್ಲಿ ಶೀಘ್ರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.ಕಾಲಮಿತಿಯೊಳಗೆ ಚಿತ್ರದುರ್ಗದ ಒಳಚರಂಡಿ ಜಾಗೂ ಕುಡಿವ ನೀರು ಪೂರೈಕೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿರುವುದಾಗಿ ತಿಳಿಸಿದರು.

    ದಾವಣಗೆರೆ ಜಿಲ್ಲೆ ಉಸ್ತುವಾರಿ ಹೊತ್ತ ಬಳಿಕ ಅಲ್ಲಿಗೆ ಪ್ರತಿ ವಾರ ಭೇಟಿ ಕೊಡಬೇಕಿದ್ದು, ಈ ಸಮಯದಲ್ಲಿ ದುರ್ಗದ ಪ್ರತಿ ಬೀದಿ, ಬೀದಿಗೂ ಭೇಟಿ ಕೊಟ್ಟು ಸಮಸ್ಯೆ ಆಲಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.

    ಲಾಕ್‌ಡೌನ್ ವೇಳೆ ತೆರಿಗೆ ಪಾವತಿ ಕಷ್ಟ ಎಂಬುದು ಗೊತ್ತಿದೆ. ಆದರೆ, ಆನಂತರದ ದಿನಗಳಲ್ಲಿ ಆಸ್ತಿ ಮಾಲೀಕರು ತೆರಿಗೆ ಪಾವತಿಸಬೇಕಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಬಲಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇದ್ದರು.

    ಮೊಸರಲ್ಲಿ ಕಲ್ಲು ಹುಡುಕುವುದು ಬೇಡ: ಅಕ್ಕಿ ದುರ್ಬಳಕೆ ಆಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಅಲ್ಲಗಳೆದ ಸಚಿವರು, ಕೇಂದ್ರದ ಸೌಲಭ್ಯಗಳನ್ನು ರಾಜ್ಯದ ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪಾದಾರಾಯನಪುರ ಗಲಭೆ ಕೋರರನ್ನು ಹಜ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ, ಪ್ರತಿಪಕ್ಷ ನಾಯಕರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ ಎಂದರು.

    ಆಹಾರ ಧಾನ್ಯ ಕಿಟ್ ವಿತರಣೆ: ಮುರುಘಾ ಮಠದಲ್ಲಿ ಸೋಮವಾರ ಮಂಗಳಮುಖಿಯರು, ಬುಡ್ಗ ಸಮುದಾಯ, ಹಗಲುವೇಷ, ಕಾಡಸಿದ್ಧರು ಮತ್ತಿತರರ ಬಡವರಿಗೆ ಆಹಾರ ಧಾನ್ಯಗಳನ್ನು ಶ್ರೀ ಶಿವಮೂರ್ತಿ ಮುರುಘಾ ಶರಣರು ವಿತರಿಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಎ.ಜೆ.ಪರಮಶಿವಯ್ಯ,ಎಂ.ಜಿ.ದೊರೆಸ್ವಾಮಿ,ಚಂದ್ರಕಲಾ, ವಕೀಲ ಪ್ರತಾಪ್ ಜೋಗಿ, ಪತ್ರಕರ್ತರಾದ ಟಿ.ತಿಪ್ಪೇಸ್ವಾಮಿ ಸಂಪಿಗೆ,ಎಚ್.ಲಕ್ಷ್ಮಣ್,ಅಲೆಮಾರಿ ಸಂಘದ ಅಧ್ಯಕ್ಷ ನಾಗರಾಜ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts