More

    ಲಾಕ್‌ಡೌನ್ ಸಡಿಲತೆ ಕರೊನಾ ಮಾಡಿಲ್ಲ

    ಚಿತ್ರದುರ್ಗ: ಲಾಕ್‌ಡೌನ್ ನಿಯಮ ಸಡಿಲಗೊಳಿಸಿರುವುದು ಸರ್ಕಾರ. ಇನ್ನೂ ಕರೊನಾ ವೈರಸ್ ಈ ನಿರ್ಧಾರ ಮಾಡಿಲ್ಲ. ಈ ಅರಿವು ಜನತೆಯಲ್ಲಿ ಸದಾ ಇರಬೇಕು. ಇಲ್ಲದಿದ್ದರೆ ಜೀವಕ್ಕೆ ಕಂಟಕ ಖಚಿತ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಎಚ್ಚರಿಸಿದರು.

    ನಗರದಲ್ಲಿ ಕರೊನಾ ಸೋಂಕಿನ ವಿರುದ್ಧ ಪೊಲೀಸರು ಗುರುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ವೇಳೆ ಮಾತನಾಡಿ, ಕರೊನಾ ವೈರಾಣು ಮುಕ್ತ ನಾಡು ಆಗುವವರೆಗೂ ಜನತೆ ಜಾಗ್ರತೆ ವಹಿಸಬೇಕು ಎಂದರು.

    ಕೇಂದ್ರ ಗೃಹ ಸಚಿವಾಲಯ ಪ್ರತಿ ವಾರ ಎಲ್ಲ ಜಿಲ್ಲೆಗಳಿಗೆ ಹಸಿರು, ಕಿತ್ತಳೆ, ಕೆಂಪು ವಲಯಗಳನ್ನು ಪರಿಷ್ಕರಿಸುತ್ತದೆ. ಅದೃಷ್ಟವಶಾತ್ ಚಿತ್ರದುರ್ಗ ಜಿಲ್ಲೆ ಹಸಿರು ವಲಯದಲ್ಲಿದೆ. ಆದ್ದರಿಂದ ಸೋಂಕು ಸಂಪೂರ್ಣ ನಿವಾರಣೆ ಆಗುವವರೆಗೂ ಹಸಿರು ವಲಯವನ್ನಾಗಿಯೇ ಕಾಪಾಡಿಕೊಂಡು ಬರುವ ಹೊಣೆ, ಸವಾಲು ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

    ಆರ್ಥಿಕ ಚಟುವಟಿಕೆಗಳ ಕಾರಣಕ್ಕಾಗಿ ಲಾಕ್‌ಡೌನ್ ಸಡಿಲ ಗೊಳಿಸಿರುವುದನ್ನು ಜನರು ದುರ್ಬಳಕೆ ಮಾಡಿಕೊಳ್ಳಬಾರದು, ಅನಗತ್ಯವಾಗಿ ಓಡಾಡಬಾರದು ಎಂದು ಮನವಿ ಮಾಡಿದರು.

    ಕೆಲವರು ದ್ವಿಚಕ್ರ ವಾಹನಗಳಲ್ಲಿ ದೈಹಿಕ ಅಂತರವನ್ನೂ ಮರೆತು ತ್ರಿಬಲ್ ರೈಡ್ ಹೋಗುತ್ತಿರುವುದು ಕಂಡು ಬಂದಿದ್ದು, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.

    ನಗರದಲ್ಲಿ ನಡೆದಿರುವ ಸೈಕಲ್ ಜಾಥಾ ಜಿಲ್ಲೆಯ ಉಳಿದೆಲ್ಲ ತಾಲೂಕು ಕೇಂದ್ರಗಳಲ್ಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮೆಲ್ಲ ಅಧಿಕಾರಿ, ಸಿಬ್ಬಂದಿ ಶ್ರಮಿಸಲಿದ್ದಾರೆ ಎಂದ ಅವರು, ಜಾಥಾ ಸಾಗಿದ ಮಾರ್ಗದುದ್ದಕ್ಕೂ ಅಲ್ಲಲ್ಲಿ ನಾಗರಿಕರಲ್ಲಿ ಸೋಂಕಿನ ವಿರುದ್ಧ ಖುದ್ದು ತಿಳಿವಳಿಕೆಗೆ ಪ್ರಯತ್ನಿಸಿದರು.

    50ಕ್ಕೂ ಪೊಲೀಸ್ ಅಧಿಕಾರಿ, ಕಾನ್‌ಸ್ಟೇಬಲ್‌ಗಳು ಭಾಗವಹಿಸಿದ್ದ ಜಾಥಾಕ್ಕೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಎಸ್ಪಿ ಚಾಲನೆ ನೀಡಿದರು.

    ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗ, ತಿಪ್ಪೇಸ್ವಾಮಿ, ಸಿಪಿಐಗಳಾದ ಬಿ.ವಿ.ಗಿರೀಶ್, ಟಿ.ಆರ್.ನಯೀಂ ಅಹಮದ್, ಪ್ರಕಾಶ್ ಮತ್ತಿತರ ಅಧಿಕಾರಿಗಳಿದ್ದರು.

    ಜಾಥಾ ಸಾಗುವ ಮಾರ್ಗದಲ್ಲಿ ಪೊಲೀಸರ ಮೇಲೆ ನಾಗರಿಕರು ಹೂ ಮಳೆ ಸುರಿಸುವ ಹಾಗೂ ಚಪ್ಪಾಳೆ ಮೂಲಕ ಸ್ವಾಗತಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ, ಡಿಸಿ ಕಚೇರಿ ಬಳಿ ಮುಕ್ತಾಯಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts