More

    ಕರೊನಾ 3ನೇ ಹಂತದ ಭೀತಿಗೂ ಡೋಂಟ್‌ಕೇರ್

    ಚಿತ್ರದುರ್ಗ: ಕರೊನಾ ಸೋಂಕು ಮೂರನೇ ಹಂತ ತಲುಪುತ್ತದೆ ಎಂಬ ಭೀತಿ ಎದುರಾಗಿದ್ದರೂ, ಜಿಲ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಅನುಷ್ಟಾನಗೊಳಿಸುವ ಜಿಲ್ಲಾಡಳಿತದ ಕಾರ್ಯಕ್ಕೆ ಜನರ ಅಸಹಕಾರ ಆತಂಕಕ್ಕೆ ಕಾರಣವಾಗಿದೆ.

    ಯುಗಾದಿ ಹಬ್ಬ ಮುಗಿದರೂ ಜನ ಮನಸೋ ಇಚ್ಛೆ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಬೀದಿಗಿಳಿಯುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಕರಣವೊಂದು ಪತ್ತೆ ಆಗಿದ್ದರೂ ಜಿಲ್ಲಾಡಳಿತ ಲಾಕ್‌ಡೌನ್ ಅನುಷ್ಟಾನದಲ್ಲಿ ಎಡವಿದೆ ಎಂಬ ಅಸಮಾಧಾನ ಕೇಳಿ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೊಲೀಸರು ಇನ್ನಷ್ಟು ಕಠಿಣ ಕ್ರಮ ಕೈಗೊಂಡು ಜನರು ಬೀದಿಗೆ ಬರದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

    ಸೋಂಕಿನ ಭೀತಿಗೆ ಅಂಜದೆ ಭಾನುವಾರ ಬೆಳಗ್ಗೆ ನಗರದ ಮುರುಘ ರಾಜೇಂದ್ರ ಕ್ರೀಡಾಂಗಣ, ತ್ಯಾಗರಾಜ ಬೀದಿ ಮೊದಲಾದೆಡೆ ತರಕಾರಿ, ಮಾಂಸ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ಖಾಕಿ ಪಡೆ ಲಾಠಿ ರುಚಿ ತೋರಿಸುವುದು ನಿರಂತರವಾಗಿದ್ದರೂ, ಪೊಲೀಸರ ಕಣ್ಣು ತಪ್ಪಿಸಿ ಓಡಾಡುವುದು ಕೆಲ ಯುವಕರಿಗೆ ಫ್ಯಾಷನ್ ಆಗಿದೆ. ಹೀಗೆ ಸಿಕ್ಕು ಬಿದ್ದ ಕೆಲ ಬೈಕ್ ಸವಾರರಿಗೆ ಪೊಲೀಸರು ಬಸ್ಕಿ ಹೊಡೆಸಿ ಬುದ್ಧಿ ಮಾತು ಹೇಳಿ ಕಳುಹಿಸಿದರು.

    ಮನಸೋ ಇಚ್ಛೆ ನಗರದಲ್ಲಿ ವಾಹನ ಓಡಾಟ ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದ್ದು, ಅನಗತ್ಯವಾಗಿ ಸಂಚರಿಸುತ್ತಿದ್ದ 35ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಪಾಂಡುರಂಗಪ್ಪ ತಿಳಿಸಿದ್ದಾರೆ.

    ಪಾಸ್ ಗೊಂದಲ: ಶಿವಮೊಗ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯಬೇಕಿದ್ದು, ಅಗತ್ಯ ಪಾಸ್‌ಗಾಗಿ ಡಿವೈಎಸ್ಪಿ, ತಹಸೀಲ್ದಾರ್ ಕಚೇರಿ ಎಂದೆಲ್ಲ ವ್ಯಕ್ತಿಯೊಬ್ಬರು ಆಸ್ಪತ್ರೆ ದಾಖಲೆ ಹಿಡಿದು ಓಡಾಡುತ್ತಿದ್ದರು. ಇನ್ನು ಅಗತ್ಯ ವಸ್ತು, ಔಷಧ ಸರಕು, ತರಕಾರಿ ಸಾಗಾಟಕ್ಕಾಗಿ ಪಾಸ್ ಪಡೆಯಲು ಕಚೇರಿಗಳಿಗೆ ಓಡಾಡುವುದು ಸಾಮಾನ್ಯವಾಗಿತ್ತು. ಜಿಲ್ಲಾಸ್ಪತ್ರೆ ಐಸೋಲೇಶನ್ ವಾರ್ಡಿನಲ್ಲಿರುವ ರೋಗಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲವೆಂಬ ದೂರು ಕೇಳಿ ಬಂದಿದೆ.

    ಇಂದಿರಾ ಕ್ಯಾಂಟಿನ್‌ಗಳೇ ಆಸರೆ: ಲಾಕ್‌ಡೌನ್ ಆದ ದಿನದಿಂದ ಕರೊನಾ ಹತೋಟಿ ಕರ್ತವ್ಯದಲ್ಲಿ ನಿರರತರಾಗಿರುವ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಕಾರ್ಮಿಕರು ಹಾಗೂ ಆಸ್ಪತ್ರೆಗಳಿಗೆ ಬರುವಂಥವರಿಗೆ ಜಿಲ್ಲೆಯಲ್ಲಿರುವ ಐದು ಇಂದಿರಾ ಕ್ಯಾಂಟಿನ್‌ಗಳು ಆಸರೆಯಾಗಿವೆ. ಸಾಮಾನ್ಯ ದಿನಗಳ ರೀತಿಯಲ್ಲೇ ಉಪಹಾರ, ಊಟ ಖರ್ಚಾಗುತ್ತಿದೆ. ಎಂದಿನಂತೆಯೇ ಬೆಳಗ್ಗೆ 7ರಿಂದ 9.30, ಮಧ್ಯಾಹ್ನ 12-2 ಹಾಗೂ ಸಂಜೆ 6ರಿಂದ 8.30ರ ವರೆಗೆ ಕ್ಯಾಂಟಿನಗಳಲ್ಲಿ ಉಪಹಾರ ಊಟ ಒದಗಿಸಲಾಗುತ್ತಿದೆ ಎಂದು ಇಂದಿರಾ ಕ್ಯಾಂಟಿನ್ ಜಿಲ್ಲಾ ವ್ಯವಸ್ಥಾಪಕ ಎಸ್.ಎಚ್.ಸತ್ಯನಾರಾಯಣ ತಿಳಿಸಿದ್ದಾರೆ.

    ಶಾಲಾ ಆವರಣದಲ್ಲೂ ಮಾರುಕಟ್ಟೆ: ಮುರುಘ ರಾಜೇಂದ್ರ ಮೈದಾನದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ದಟ್ಟಣೆ ತಪ್ಪಿಸಲು ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲೂ ಸೋಮವಾರದಿಂದ ತರಕಾರಿ ಮಾರುಕಟ್ಟೆ ಆರಂಭವಾಗಲಿದೆ ಎಂದು ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts