More

    ಸಹಜ ಸ್ಥಿತಿಯುತ್ತ ಚಿತ್ರದುರ್ಗ ನಗರ

    ಚಿತ್ರದುರ್ಗ: ನಗರದಲ್ಲಿ ಈಗಾಗಲೇ ಆರಂಭಗೊಂಡಿರುವ ಎಪಿಎಂಸಿ, ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳ ವಹಿವಾಟು ಜತೆಗೆ ಬುಧವಾರ ಬೆಳಗ್ಗೆಯಿಂದ ಇನ್ನಷ್ಟು ವಾಣಿಜ್ಯ ಚಟುವಟಿಕೆಗಳ ಆರಂಭಗೊಂಡವು.

    ಗ್ರೀನ್‌ರೆನ್‌ನಲ್ಲಿರುವ ನಗರ ಸಹಜ ಸ್ಥಿತಿಯತ್ತ ಮರುಳುತ್ತಿದ್ದು, ಜನರ ಓಡಾಟ ಹಾಗೂ ವಾಹನ ಸಂಚಾರ ಎಂದಿನಂತೆ ಕಾಣತೊಡಗಿದೆ.

    ಬೆಳಗ್ಗೆಯಿಂದಲೇ ನಗರದಲ್ಲಿ ಜನರ ನಿರಾಳ ಸಂಚಾರದ ದೃಶ್ಯ ಎಲ್ಲೆಡೆ ಕಂಡು ಬಂತು, ಅನೇಕ ಕಡೆ ಬ್ಯಾರಿಕೇಡ್ ತೆರವಿನಿಂದಾಗಿ ವಾಹನಗಳ ಸಂಚಾರಕ್ಕೆ ಅನುಕೂಲವಾಗಿತ್ತು. ಕ್ಷೌರಿಕ, ಚಪ್ಪಲಿ ಅಂಗಡಿ, ಬಟ್ಟೆ, ಚಿನ್ನಬೆಳ್ಳಿ ಅಂಗಡಿ, ಸಿನಿಮಾ ಮಂದಿರ, ಮದ್ಯ ಮಾರಾಟ ಇತ್ಯಾದಿ ವಹಿವಾಟು. ಆಟೋ, ಟ್ಯಾಕ್ಸಿ, ಬಸ್ಸುಗಳ ಮೇಲಿನ ಸಂಚಾರ ನಿಷೇಧ ಮುಂದುವರಿದಿದೆ.

    ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ, ಕೃಷಿ ಉಪಕರಣ ಸಹಿತ ಕೃಷಿ ಪೂರಕ ವಹಿವಾಟುಗಳು ಹಿಂದೆ ಆರಂಭವಾಗಿದ್ದು, ಈಗ ಹಾರ್ಡ್‌ವೇರ್ಸ್‌, ಮೊಬೈಲ್, ಬಣ್ಣದಂಗಡಿಗಳು, ಆಟೊಮೊಬೈಲ್ ಶಾಪ್, ಸ್ಟುಡಿಯೋ, ಇಂಟರ್‌ನೆಟ್, ಝೆರಾಕ್ಸ್, ಪ್ಲಾಸ್ಟಿಕ್, ಸೈಕಲ್, ಗ್ಯಾರೇಜ್ ಇತ್ಯಾದಿ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಗ್ರಾಹಕರ ದಟ್ಟಣೆ ಕಂಡು ಬಂತು.

    ಬಹುತೇಕ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಸ್ಥಳ ಗುರುತು ಮಾಡಿದ್ದರೇ, ಇನ್ನು ಕೆಲವೆಡೆ ಅಂಗಡಿ ಒಳಗೆ ಗ್ರಾಹಕರ ಬರದಂತೆ ಹಗ್ಗದ ನಿರ್ಬಂಧ ವಿಧಿಸಲಾಗಿತ್ತು.

    ಹೋಟೆಲ್‌ಗಳಲ್ಲಿ ಪಾರ್ಸೆಲ್ ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ಬಳಿಕ ನಗರದ ಕೆಲ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸರ್ವಿಸ್ ಆರಂಭಗೊಂಡಿದ್ದರೂ, ಗುರುವಾರದಿಂದ ನಗರದೆಲ್ಲ ಪ್ರಮುಖ ಹೋಟೆಲ್‌ಗಳಲ್ಲಿ ಈ ಸೇವೆ ಆರಂಭವಾಗಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

    ನಗರದ ಹೋಟೆಲ್‌ನಲ್ಲಿ ಪಾರ್ಸೆಲ್ ಸರ್ವಿಸ್ ಆರಂಭವಾಗಿದೆ. ಆದರೆ, ರಾ.ಹೆ.48ರಲ್ಲಿರುವ ಎರಡು ಹೋಟೆಲ್‌ಗಳಲ್ಲಿ ಆರಂಭಿಸಿಲ್ಲ. ಮೇ 3ರ ನಂತರ ಹೋಟೆಲ್ ತೆರೆಯಲಾಗುವುದು ಎಂದು ಉಪಾಧ್ಯ ಹೋಟೆಲ್ ಮಾಲೀಕ ದೀಪಾನಂದ ಹೇಳಿದ್ದಾರೆ.

    ರಾ.ಹೆ.ಗಳಲ್ಲಿ ಈಗ ನಿಧಾನವಾಗಿ ಕೆಲ ಡಾಬಾ, ಹೋಟೆಲ್‌ಗಳು ಹಂತ, ಹಂತವಾಗಿ ಆರಂಭವಾಗುತ್ತಿವೆ. ಪೆಟ್ರೋಲ್ ಬಂಕ್‌ಗಳ ವಹಿವಾಟಿಗೆ ಈವರೆಗೂ ಯಾವುದೇ ಅಡೆ ತಡೆ ಆಗಿಲ್ಲ. ಬೇಕರಿ ಉತ್ಪನ್ನಗಳ ಮಾರಾಟಕ್ಕೂ ಈಗಾಗಲೇ ಅನುಮತಿ ಸಿಕ್ಕಿದೆ.

    ದುರ್ಗದಲ್ಲಿ ಹೋಟೆಲ್‌ಗಳಲ್ಲಿ ಸರ್ವಿಸ್‌ಗೆ ಅವಕಾಶ ಮಾಡಿಕೊಟ್ಟಿದ್ದರೂ, ಚಳ್ಳಕೆರೆ ಮೊದಲಾಡೆ ಅವಕಾಶ ಸಿಕ್ಕಿಲ್ಲವೆನ್ನಲಾಗಿದೆ. ಯಾರೆಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು ಎಂಬುದರ ಕುರಿತಂತೆ ಜಿಲ್ಲಾಧಿಕಾರಿ ಸೂಕ್ತ ನಿರ್ದೇಶನ ನೀಡದೇ ಇರುವುದರಿಂದಾಗಿ ನಗರಸಭೆ, ಪುರಸಭೆ, ಪಪಂ, ಗ್ರಾಪಂ ಅಧಿಕಾರಿ, ಸಿಬ್ಬಂದಿ, ಪೊಲೀಸರು ಹಾಗೂ ಅಂಗಡಿ ಮುಂಗಟ್ಟು ಮಾಲೀಕರಲ್ಲಿ ಗೊಂದಲ ಇನ್ನು ಮುಂದುವರಿದಿದೆ.

    ಕೆಲವೇ ಸೇವೆಗಳಿಗೆ ಸೀಮಿತಗೊಂಡಂತೆ ಬ್ಯಾಂಕ್ ವಹಿವಾಟು ನಡೆಯುತ್ತಿದ್ದು, ಗ್ರೀನ್‌ರೆನ್ ಕಾರಣಕ್ಕೆ ಬ್ಯಾಂಕ್‌ಗಳಲ್ಲಿ ಸ್ಥಗಿತ ಗೊಂಡಿರುವ ಪಾಸ್‌ಬುಕ್ ಎಂಟ್ರಿ ಮತ್ತಿತರ ಸರ್ವಿಸ್‌ಗಳನ್ನು ಕೊಡಬೇಕಿದೆ. ಆದರೆ, ಪ್ರಮುಖ ಬ್ಯಾಂಕ್ ಅಧಿಕಾರಿಗಳು ಬುಧವಾರ ಗ್ರಾಹಕರಿಗೆ ಈ ಸರ್ವಿಸ್ ಇಲ್ಲ ಎಂದೇ ಹೇಳುತ್ತಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿದ ಲೀಡ್‌ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ.

    45 ದಾಖಲೆಗಳ ನೋಂದಣಿ: ಏ.24ರಿಂದ ಕಾರ್ಯಾರಂಭ ಮಾಡಿರುವ ದುರ್ಗದ ಉಪ ನೋಂದಣಿ ಕಚೇರಿಯಲ್ಲಿ ಏ.28 ಸಂಜೆ ವರೆಗೆ 45 ದಾಖಲೆಗಳನ್ನು ನೋಂದಾಯಿಸಲಾಗಿದೆ. ಪ್ರತಿ ಒಂದು ಗಂಟೆಗೆ 3 ದಾಖಲೆಗಳನ್ನು ಮಾತ್ರ ನೋಂದಾಯಿಸಲಾಗುತ್ತಿದೆ ಎಂದು ಸಬ್ ರಿಜಿಸ್ಟ್ರಾರ್ ಟಿ.ವೆಂಕಟೇಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts