More

    ಆ ಕಡೆ ಹೋಗುವಾಗ ಹುಷಾರು ಕಣೆ…

    ಧನಂಜಯ ಎಸ್.ಹಕಾರಿ ಚಿತ್ರದುರ್ಗ
    ಏ, ಆ ಕಡೆ ಹೋಗುವಾಗ ಹುಷಾರು ಕಣೆ, ನೋಡಲ್ಲಿ.. ಮಣ್ಣು ಬೀಳುತ್ತಿದೆ… ಅಲ್ಲಿ ಹೋದರೆ ತಲೆ ಮೇಲೆ ಬೀಳುತ್ತೆ ಈ ಕಡೆ ಹೋಗೋಣ ಬಾರೆ… ಅಮ್ಮಾ… ನೋಡು ಅಲ್ಲಿ ಹೆಂಗೆ ಕಾಂಕ್ರಿಟ್ ಕಳಚಿ ಬೀಳುತ್ತಿದೆ… ಇದು ಕೋಟೆನಾಡು ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ಚಿತ್ರಣ.

    ಅಲ್ಲಲ್ಲಿ ಬಿರುಕು ಬಿಟ್ಟಿರುವ ಗೋಡೆ.. ಛಾವಣಿಯ ಸಿಮೆಂಟ್ ಚಕ್ಕೆಗಳು ಆಗಾಗ್ಗೆ ವಿದ್ಯಾರ್ಥಿಗಳ ಮೇಲೆ ಬೀಳುವುದು ಸಾಮಾನ್ಯ.. ಈ ಬಾರಿಯ ಮಳೆಗೆ ಗೋಡೆಗಳೆಲ್ಲ ನೆನೆದು ಹಸಿ ಮುದ್ದೆಯಾಗಿವೆ. ಇಂತಹ ಅಪಾಯದ ಸ್ಥಿತಿಯಲ್ಲೂ ವಿದ್ಯಾರ್ಥಿನಿಯರು ಜೀವ ಅಂಗೈಲಿ ಹಿಡಿದು ಪಾಠ ಕೇಲುತ್ತಾರೆ. 1866ರಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭವಾಯಿತು. ಐತಿಹಾಸಿಕ ನಗರಿ ಚಿತ್ರದುರ್ಗದ ಮೊದಲ ಬಾಲಕಿಯರ ಸರ್ಕಾರಿ ಶಾಲೆ ಎಂಬ ಹಣೆಪಟ್ಟಿ ಇದಕ್ಕಿದೆ. ಕ್ರಮೇಣ ಪದವಿಪೂರ್ವ ಕಾಲೇಜು ಮಂಜೂರಾಯಿತು. 8, 9 ಹಾಗೂ 10ನೇ ತರಗತಿಯ ಕನ್ನಡ, ಇಂಗ್ಲಿಷ್, ಸಂಸ್ಕೃತ ಹಾಗೂ ಉರ್ದು ಭಾಷೆಯ ಶೇ.90ರಷ್ಟು ಬಡ ಮಕ್ಕಳು ಈ ಶತಮಾನದ ಶಾಲೆಯಲ್ಲಿ ಓದುತ್ತಿದ್ದಾರೆ.

    ಕಟ್ಟಡ ಈಗಲೋ, ಆಗಲೋ ಬಿದ್ದು ಹೋಗುವ ಭೀತಿ ಸೃಷ್ಟಿಸುತ್ತಿದೆ. ಶಾಲೆಯಲ್ಲಿರುವ 13 ಕೊಠಡಿಗಳ ಪೈಕಿ 5 ಶಿಥಿಲಾವಸ್ಥೆಯಲ್ಲಿವೆ. ಈ ಕೊಠಡಿಗಳನ್ನು ಸಹ ಪಾಠ ಹೇಳಲು ಬಳಸಿಕೊಳ್ಳಲಾಗುತ್ತಿದೆ. ಯಾರ ಜೀವಕ್ಕಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ವಿದ್ಯಾರ್ಥಿನಿಯರು ಕೊಠಡಿಯ ಹೊರ ಭಾಗದಲ್ಲಿ ಮಧ್ಯಾಹ್ನದ ಊಟ ಮಾಡುತ್ತಾರೆ. ಪಕ್ಕದ ಮತ್ತೊಂದು ಕಟ್ಟಡದಲ್ಲಿ ಪಾಠ ಕೇಳುತ್ತಾರೆ. ಕಾರಿಡಾರ್‌ನ ಛಾವಣಿ ಇತ್ತೀಚೆಗಷ್ಟೇ ಕುಸಿದು ಬಿದ್ದಿತ್ತು. ಮಳೆ ಬರುವಾಗ ಕೊಠಡಿಯ ಗೋಡೆಗಳಿಂದ ಚಕ್ಕೆಗಳು ಉದುರುತ್ತವೆ. ಕಟ್ಟಡ ದುರಸ್ತಿ ಸಲುವಾಗಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಶಾಲೆ ಸಿಬ್ಬಂದಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.

    ಶಾಲೆ ಕಟ್ಟಡ ದುಸ್ಥಿತಿಯಲ್ಲಿದೆ. ದುರಸ್ತಿ ಕಾರ್ಯ ಕೈಗೊಳ್ಳಿ ಎಂದು ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಛಾವಣಿ ಚಕ್ಕೆಗಳು ಉದುರುತ್ತಿದ್ದು, ಕೊಠಡಿಯಲ್ಲಿ ಪಾಠ ಹೇಳುವುದು ಅಸಾಧ್ಯ ಎನಿಸಿದೆ.
    ಹೆಸರು ಹೇಳಲಿಚ್ಛಿಸದ ಶಾಲೆ ಸಿಬ್ಬಂದಿ

    ಶತಮಾನದ ಶಾಲೆಯ ಕೆಲ ಕೊಠಡಿಗಳು ಬೀಳುವ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮಳೆಯಿಂದಾಗಿ ಕಟ್ಟಡ ಹಾಳಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
    ಬಸವರಾಜಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರದುರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts