More

    ಹಾಸ್ಟೆಲ್ ಅಸಮರ್ಪಕ ನಿರ್ವಹಣೆ, ಕಾಮಗಾರಿ ವಿಳಂಬಕ್ಕೆ ಕಿಡಿ

    ಚಿತ್ರದುರ್ಗ: ಹಾಸ್ಟೆಲ್‌ಗಳ ಅಸಮರ್ಪಕ ನಿರ್ವಹಣೆ, ಕಾಮಗಾರಿಯಲ್ಲಿನ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ಸಿಇಒ ಸಿ.ಸತ್ಯಭಾಮಾ ಕೆಂಡಾಮಂಡಲವಾದರು.

    ಮಂಗಳವಾರ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಬಿಸಿಎಂ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳ ನಿರ್ವಹಣೆ ನಿರ್ಲಕ್ಷಿಸಲಾಗಿದೆ. ಸ್ನಾನಗೃಹ, ಶೌಚಗೃಹಗಳು ಸ್ವಚ್ಛವಾಗಿಲ್ಲ. ವಿದ್ಯುತ್ ದೀಪಗಳಿಲ್ಲ. ವಿಷಜಂತುಗಳು ಕಚ್ಚಿದರೆ ಯಾರು ಹೊಣೆ ಎಂದು ಪ್ರಶ್ನೆಗಳ ಸುರಿಮಳೆಗರೆದರು.

    ಸೋಲಾರ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ತಣ್ಣೀರಲ್ಲಿ ಸ್ನಾನ ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ವಾಚ್‌ಮೆನ್/ವುಮೆನ್‌ಗಳು, ವಾರ್ಡನ್‌ಗಳಿರುವುದಿಲ್ಲ. ಆಹಾರ ಕುರಿತ ದೂರುಗಳಿವೆ. ನೀವು ಸರ್‌ಪ್ರೈಸ್ ವಿಸಿಟ್ ಕೊಡುವುದಿಲ್ಲ. ನಗರದ ಜೋಗಿಮಟ್ಟಿ ರಸ್ತೆ ಹೆಣ್ಣು ಮಕ್ಕಳ ಹಾಸ್ಟೆಲ್‌ನಲ್ಲಿ ನಾಲ್ವರು ವಾರ್ಡನ್‌ಗಳಿದ್ದರೂ ನಾನು ಭೇಟಿ ನೀಡಿದಾಗ ಒಬ್ಬರೂ ಇರಲಿಲ್ಲ ಎಂದು ಪ್ರಶ್ನಿಸಿದರು.

    ಯಾಕೆ ಕೆಲಸದಿಂದ ತೆಗೆದಿಲ್ಲ?: ಮಂಜೂರು ಹುದ್ದೆಗಳು ಭರ್ತಿಯಾದ ಬಳಿಕವೂ ಹೊರಗುತ್ತಿಗೆ ನೌಕರರನ್ನು ಕೆಲಸದಲ್ಲಿ ಮುಂದುವರಿಸಿರುವುದಕ್ಕೆ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಸಿಇಒ ಉತ್ತರ ಬಯಸಿದರು.

    ಹೊರಗುತ್ತಿಗೆ ನೌಕರರಿಗೆ ವೇತನ ಕೊಡುತ್ತಿಲ್ಲವೆಂದು ಬಿಸಿಎಂ ಅಧಿಕಾರಿ ಆವಿನ್ ಉತ್ತರಿಸಿದಾಗ, ಕೋಪಗೊಂಡ ಸಿಇಒ, ಇಂಥ ನೆಪ ಹೇಳದೇ ಸರ್ಕಾರಿ ಆದೇಶ ಪಾಲಿಸಿ. ಹೊರಗುತ್ತಿಗೆ ನೌಕರರ ನೇಮಕದ ವೇಳೆ ಸ್ವಜನಪಕ್ಷಪಾತವಾಗಿದೆ. ಈಗ ಬಂದಿರುವ ಕಾಯಂ ನೌಕರರು ಹೊರಗುತ್ತಿಗೆಯವರಿಂದ ಕೆಲಸ ಮಾಡಿಸುತ್ತಿದ್ದಾರೆ. ಸಂಬಳ ಕೇಳುವಂತೆ ನನ್ನ ಬಳಿಗೆ ಕಳಿಸುತ್ತೀರಾ? ಹಾಸ್ಟೆಲ್‌ಗಳ ದುಸ್ಥಿತಿ ಸರಿಯಾಗದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್, ಅಲ್ಪಸಂಖ್ಯಾತರ ಇಲಾಖೆ ರೇಖಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಮ್ಮ ಹಾಗೂ ಆವಿನ್‌ಗೆ ಸೂಚಿಸಿದರು.

    ಇದಕ್ಕೆ ದನಿಗೂಡಿಸಿದ ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಆಹಾರ ವಿತರಣೆ ಲೋಪಗಳನ್ನು ಸಭೆ ಗಮನಕ್ಕೆ ತಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಮಾತನಾಡಿ, ಖಾಲಿ ಇರುವ ಬೇರೆ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಅವಕಾಶ ಮಾಡಿಕೊಡಿ ಎಂದು ಕೋರಿದರು. ಜಿಪಂದಲ್ಲಿ ಹೆಚ್ಚುವರಿ 15 ಡಿ ಗ್ರೂಪ್ ನೌಕರರ ಕುರಿತು ಸರ್ಕಾರಕ್ಕೆ ಬರೆಯಲಾಗಿದೆ ಎಂದು ಸಿಇಒ ಪ್ರತಿಕ್ರಿಯಿಸಿದರು.

    ಮೊಕದ್ದಮೆ ದಾಖಲಿಸುವ ಎಚ್ಚರಿಕೆ: ಆಯುಷ್ ಇಲಾಖೆ ಕಾಮಗಾರಿಗಳು ಆಗದ್ದಕ್ಕೆ ಮತ್ತೆ ಸಿಟ್ಟಾದ ಸಿಇಒ, ನಿರ್ಮಿತಿ ಹಾಗೂ ಕೆಆರ್‌ಐಡಿಎಲ್ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.

    2015-16ನೇ ಸಾಲಿನಿಂದಲೂ ಕೆಲಸಗಳನ್ನು ನಿರ್ಲಕ್ಷಿಸಿದ್ದೀರಿ. ಕಟ್ಟಡ ನಿರ್ಮಾಣ ವೆಚ್ಚ ಅಧಿಕವಾದರೆ ನೀವೇ ಹೊಣೆ. ಈ ಮಾರ್ಚ್ ಅಂತ್ಯದೊಳಗೆ ಆಯುಷ್ ಇಲಾಖೆ ಕಾಮಗಾರಿಗಳು ಪೂರ್ಣವಾಗದಿದ್ದರೆ ಮೊಕದ್ದಮೆ ದಾಖಲಿಸಿ, ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ನಿರ್ಮಿತಿ, ಕೆಆರ್‌ಐಡಿಎಲ್ ಎಇಇಗಳಾದ ರಾಜಣ್ಣ, ಉಮೇಶ್ ಎನ್.ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಅವರಿಗೆ ಎಚ್ಚರಿಸಿದರು.

    ಡೆಡ್ಲಿ ಹಂಪ್ಸ್: ರಸ್ತೆ ಅಪಘಾತ, ಹೊಳಲ್ಕೆರೆ ರಸ್ತೆಯಲ್ಲಿರುವ ಹಂಪ್ಸ್‌ಗಳ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಅನಂತ್ ಹಾಗೂ ಶಿವಮೂರ್ತಿ ಆತಂಕ ವ್ಯಕ್ತಪಡಿಸಿದರು.

    ಹೊಳಲ್ಕೆರೆ ರಸ್ತೆಯಲ್ಲಿ ಡೆಡ್ಲಿ ಹಂಪ್ಸ್‌ಗಳಿವೆ ಎಂದು ಸಿಇಒ ಹೇಳಿದರು. ಕ್ರಮ ತೆಗೆದುಕೊಳ್ಳುವುದಾಗಿ ಲೋಕೊಪಯೋಗಿ ಇಲಾಖೆ ಇಇ ಸತೀಶ್‌ಬಾಬು ಹೇಳಿದರು.

    ಹೊಳಲ್ಕೆರೆ ತಾಲೂಕಲ್ಲಿ ಹೊಸ ಆರೋಗ್ಯ ಕೇಂದ್ರ ನಿರ್ಮಾಣವಾದರೂ ಎಚ್‌ಡಿಪುರದ ಆಸ್ಪತ್ರೆ ಸ್ಥಳಾಂತರಿಸದ ಆರೋಗ್ಯ ಇಲಾಖೆ ನಡೆಗೆ ಶಿವಮೂರ್ತಿ ಬೇಸರಿಸಿದರು. ಶಾಸಕರ ಸಮಯ ಪಡೆದು ಕಟ್ಟಡ ಉದ್ಘಾಟಿಸುವುದಾಗಿ ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.

    ಹೋಬಳಿಗಳಲ್ಲಿ ಕ್ರೀಡಾ ಮೈದಾನ ಸ್ಥಾಪನೆ ಸಂಬಂಧ ಅನಂತ್ ಹಾಗೂ ಸಿಎಎ ಓಂಕಾರಪ್ಪ ನಡುವೆ ಬಿರುಸಿನ ಚರ್ಚೆ ನಡೆಯಿತು.

    ಇದಕ್ಕೆ ಸಂಬಂಧಿಸಿದಂತೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಜಿಪಂ ಅಧ್ಯಕ್ಷರು ಸೂಚಿಸಿದರು. ಕೃಷಿ, ತೋಟಗಾರಿಕೆ, ಪಶುಪಾಲನೆ, ಸಾಮಾಜಿಕ ಅರಣ್ಯ ಮೊದಲಾದ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

    ತನಿಖಾ ವರದಿಗೆ ಸೂಚನೆ: ಜಿಲ್ಲೆ ಖಾಸಗಿ ನರ್ಸಿಂಗ್ ಹೋಂಗಳ ಅಲ್ಟ್ರಾ ಸ್ಕಾ ್ಯನಿಂಗ್ ಕೇಂದ್ರಗಳ ಕುರಿತ ತನಿಖಾ ವರದಿ ಸಲ್ಲಿಕೆಗೆ ಜಿಪಂ ಅಧ್ಯಕ್ಷರು ಡಿಎಚ್‌ಒಗೆ ಸೂಚಿಸಿದರು.

    ಕೆಲವು ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ದೂರುಗಳು ಕೇಳಿ ಬರುತ್ತಿದ್ದು, ಪ್ರತಿ ತಿಂಗಳು ಕನಿಷ್ಠ 10 ನರ್ಸಿಂಗ್ ಹೋಂಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕೆಂದರು.

    ಕಳೆದ ತಿಂಗಳು 7 ನರ್ಸಿಂಗ್ ಹೋಂಗಳಿಗೆ ಭೇಟಿ ನೀಡಿದ್ದು, ವರದಿ ಸಲ್ಲಿಸಬೇಕಿದೆ. ದೂರುಗಳಿದ್ದರೆ ನಾಗರಿಕರು 104 ಆರೋಗ್ಯ ಸಹಾಯವಾಣಿ ಸಂಪರ್ಕಿಸಬಹುದು. ಜನರಿಕ್ ಔಷಧ ಗುಣಮಟ್ಟದ ಕುರಿತು ಪ್ರಯೋಗಾಲಯ ವರದಿ ಬರಬೇಕಿದೆ ಎಂದು ಡಿಎಚ್‌ಒ ಹೇಳಿದರು.

    ಹೋಟೆಲ್, ಬೇಕರಿ ಹಾಗೂ ರಸ್ತೆ ಬದಿ ಕ್ಯಾಂಟಿನ್‌ಗಳ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟದ ಪರೀಕ್ಷೆ ನಡೆಸಬೇಕು. ಪ್ರತಿ ತಿಂಗಳು ಕನಿಷ್ಠ 6 ಮಾದರಿ ಪ್ರಯೋಗಾಲಯಕ್ಕೆ ಕಳಿಸಬೇಕು ಎಮದರು. ಸಮರ್ಪಕ ಮಾಹಿತಿ ನೀಡದ ಆಹಾರ ಸುರಕ್ಷತಾ ಅಧಿಕಾರಿ ಕಾಂತರಾಜ್ ವಿರುದ್ಧ ಸಿಇಒ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts