More

    ಎಂಥ ಪರಿಸ್ಥಿತಿಯೇ ಇರಲಿ, ಎದುರಿಸಲು ಸಜ್ಜಾಗೋಣ: ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

    ಚಿತ್ರದುರ್ಗ: ಮುಂದೆ ಎಂಥದ್ದೇ ಕೆಟ್ಟ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸಜ್ಜಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.

    ಜಿಪಂದಲ್ಲಿ ಶನಿವಾರ ಕೋವಿಡ್ ನಿಯಂತ್ರಣ ಹಾಗೂ ಪ್ರಗತಿ ಪರಿಶೀಲಿಸಿ ಮಾತನಾಡಿ, ಕೋವಿಡ್ ಸೋಂಕು ಇನ್ನಷ್ಟು ತೀವ್ರವಾಗುವ ಸಾಧ್ಯತೆಗಳಿವೆ. ಆದ್ದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎಂದು ಕೈಕಟ್ಟಿ ಕೂರದೇ ಅಗತ್ಯ ಹಾಸಿಗೆ, ಕೋವಿಡ್ ಕೇರ್‌ಸೆಂಟರ್‌ಗಳನ್ನು ತಕ್ಷಣ ಸಿದ್ಧಪಡಿಸಬೇಕು ಎಂದು ಡಿಎಚ್‌ಒ ಡಾ.ಸಿ.ಎಲ್.ಫಾಲಾಕ್ಷ ಅವರಿಗೆ ಸೂಚಿಸಿದರು.

    ನಿಯಂತ್ರಣ ಕ್ರಮಗಳ ಅನುಷ್ಠಾನ ಕುರಿತಂತೆ ಪರಿಶೀಲಿಸುವಂತೆ ಎಸ್ಪಿ ಜಿ.ರಾಧಿಕಾ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಜಿಪಂ ಸಿಇಒ ಡಾ.ಕೆ.ನಂದಿನಿದೇವಿ ಹಾಗೂ ವೈದ್ಯಾಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

    ತಮ್ಮ ಸೂಚನೆಗಳನ್ನು ಆಧರಿಸಿ, ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲೆಯ ಶಾಸಕರಿಂದ ಪ್ರತ್ಯೇಕ ಮಾಹಿತಿ ಪಡೆಯುವುದಾಗಿ ಹೇಳಿದರು.

    ಸ್ವಾಬ್‌ಟೆಸ್ಟ್ ವೇಳೆ ತಪ್ಪಾಗದಂತೆ ಎಚ್ಚರವಹಿಸಿ

    ಸ್ವಾಬ್ ಟೆಸ್ಟ್ ವೇಳೆ ತಪ್ಪು ಮಾಡದಂತೆ ಸಿಬ್ಬಂದಿಗೆ ತರಬೇತಿ ಕೊಡಬೇಕು. ಕಾಟಾಚಾರಕ್ಕೆ ಟೆಸ್ಟ್ ಟಾರ್ಗೆಟ್ ಪೂರ್ಣ ಮಾಡಬಾರದು. ಆರ್‌ಟಿಪಿಸಿಆರ್ ಪರೀಕ್ಷೆಯನ್ನು 48 ಗಂಟೆಗಳಿಂದ 6 ಗಂಟೆಗೆ ಇಳಿಸಿ ಜನರಿಗೆ ಫಲಿತಾಂಶ ತಿಳಿಸಿ. ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆ ಮಾಡಬೇಕು. ಕೇಂದ್ರ ಸರ್ಕಾರದ ಹೊಸ ಆದೇಶದಂತೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಆರೋಗ್ಯ ಸವಲತ್ತಿಗೆ ಬಳಸಬಹುದು. ಆದ್ದರಿಂದ ಗಣಿಗಾರಿಕೆ ಮತ್ತಿತರ ದೊಡ್ಡ,ದೊಡ್ಡ ಸಂಸ್ಥೆಗಳ ಪ್ರಮುಖರೊಂದಿಗೆ ಡಿಸಿ ಸಭೆ ನಡೆಸಲಿ ಎಂದರು.

    ನಯಾ ಪೈಸೆ ಕೊಡಲ್ಲ
    ಫ್ರಂಟ್ ವಾರಿಯರ್ಸ್‌ಗಳಾದ ಕಂದಾಯ ಮತ್ತಿತರ ಇಲಾಖೆಗಳ ಇನ್ನು ಕೆಲವರು ಲಸಿಕೆ ಪಡೆದಿಲ್ಲ ಎಂಬ ಮಾಹಿತಿಗೆ ಗರಂ ಆದ ಮಂಜುನಾಥ್, ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ನೌಕರರಿಗೆ ನಯಾ ಪೈಸೆ ಸಿಗದೆಂದು ಹೇಳಿದರು. 18 ವರ್ಷ ಮೇಲಿನವರಿಗೆ ಲಸಿಕೆ ಹಾಕಲು ಬೇಕಿರುವ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದರು.

    ಆಹಾರ ಧಾನ್ಯ
    ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜತೆಗೆ ರಾಜ್ಯ ಸರ್ಕಾರ ಮೇ ಹಾಗೂ ಜೂನ್‌ನಲ್ಲಿ ಅರ್ಹರಿಗೆ 10 ಕೆಜಿ ಆಹಾರ ಧಾನ್ಯ ವಿತರಿಸಲಿದೆ. ಇದು ವ್ಯರ್ಥವಾಗದಂತೆ ಬಯೋಮೆಟ್ರಿಕ್ ಮೂಲಕ ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಕಾರ್ಯದರ್ಶಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts