More

    ನೆಡುತೋಪು ಅಭಿವೃದ್ಧಿಗೆ ಅರಣ್ಯ ಇಲಾಖೆ ಸಜ್ಜು

    ಚಿತ್ರದುರ್ಗ: ಜೂನ್ ಮೊದಲ ವಾರದಿಂದ ಜಿಲ್ಲೆಯ 1943 ಹೆ.ವಿಸ್ತೀರ್ಣ ನೆಡುತೋಪು ಅಭಿವೃದ್ಧಿ ಹಾಗೂ ರೈತರಿಗೆ ಸಸಿ ವಿತರಿಸಲು ಅರಣ್ಯ ಇಲಾಖೆ ಸಜ್ಜಾಗಿದೆ.

    ನೆಡುತೋಪು ಅಭಿವೃದ್ಧಿ ಹಾಗೂ ಸಸಿ ವಿತರಿಸಲು ಜಿಲ್ಲೆಯಲ್ಲಿರುವ ಇಲಾಖೆಯ 8 ನರ್ಸರಿಗಳಲ್ಲಿ 14.94 ಲಕ್ಷ ಸಸಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

    10 ವರ್ಷಗಳಿಂದ ಈಚೆಗೆ ಜಿಲ್ಲೆಯಲ್ಲಿ ಶ್ರೀಗಂಧ ಮತ್ತು ರಕ್ತಚಂದನ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ 40 ಸಾವಿರ ಶ್ರೀಗಂಧ ಹಾಗೂ 25 ಸಾವಿರ ರಕ್ತಚಂದನದೊಂದಿಗೆ ಜೀವ ವೈವಿಧ್ಯತೆಗೆ ಒತ್ತು ಕೊಡಲು ಈ ಬಾರಿ 30 ಕ್ಕೂ ಅಧಿಕ ವಿಧದ ಸಸಿಗಳನ್ನು ಬೆಳೆಸಲು ಪ್ರಾಶಸ್ತ್ಯ ಕೊಡಲಾಗಿದೆ.

    ಶ್ರೀಗಂಧ ಬೆಳೆಗಿದ್ದ ಹಲವು ಕಠಿಣ ನಿಯಮ ಸಡಿಲಗೊಳಿಸಿದ ಬಳಿಕ ಶ್ರೀಗಂಧ ಕೃಷಿಗೆ ಹಲವು ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ರಕ್ತಚಂದನದ ಬಗ್ಗೆ ರೈತರಲ್ಲಿ ಕುತೂಹಲ ಹೆಚ್ಚುತ್ತಿದೆ. ಹಿರಿಯೂರು-2, ಹೊಸದುರ್ಗ-2 ನರ್ಸರಿಗಳ ಸಹಿತ ಉಳಿದ ತಾಲೂಕುಗಳ ತಲಾ ಒಂದೊಂದು ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ.

    ದಿಂಡಗ, ಕಮರ, ಉದೇದು, ಹೊಂಗೆ, ಬಸರಿ, ಆಲ, ಸೀಮೆತಂಗಡಿ, ಬೇವು, ಶ್ರೀಗಂಧ, ಸಾಗುವಾನಿ, ತಪಸಿ, ಸಿಲ್ವರ ಓಕ್, ಸೀತಾಫಲ, ಚೆರಿ, ಹುಣಸೆ, ನೆಲ್ಲಿ, ಬಿಲ್ವಪತ್ರೆ, ಬೀಟೆ, ನಿಂಬೆ, ಕರಿಬೇವು, ಹೊನ್ನೆ, ಹೆಬ್ಬೇವು, ಅರಳಿ, ನುಗ್ಗೆ, ಹಲಸು, ಕಕ್ಕೆ ಸಸಿಗಳು ಇದರಲ್ಲಿ ಸೇರಿವೆ.

    ನೇರ ಮಾರಾಟಕ್ಕೆ ಅವಕಾಶ: ಶ್ರೀಗಂಧ ಮಾರಾಟಕ್ಕೆ ಈಗ ನೇರ ಅವಕಾಶವಿದೆ. ರೈತರು ಎಂಐಎಸ್‌ಎಲ್‌ನೊಂದಿಗೆ ಒಪ್ಪಂದ ಅಥವಾ ಸಂಸ್ಥೆಗೆ ಶ್ರೀಗಂಧವನ್ನು ನೇರ ಮಾರಾಟ ಮಾಡಬಹುದು. ಇತರೆ ಬೆಳೆಗಳೊಂದಿಗೆ ಉತ್ತಮ ಲಾಭ ತಂದುಕೊಡುವ ಶ್ರೀಗಂಧ ಕೃಷಿಗೆ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts