More

    ಮಕ್ಕಳನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿ  -ಪಾಲಕರಿಗೆ ಬಸವ ಜಯಮೃತ್ಯುಂಜಯ ಶ್ರೀ ಕಿವಿಮಾತು 

    ದಾವಣಗೆರೆ: ಮಕ್ಕಳನ್ನು ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆಸಿ. ಅವರ ಮೇಲೆ ಬಂಡವಾಳ ಹೇರುವ ಕಡೆ ಗಮನ ನೀಡದಿರಿ ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಾಲಕರಿಗೆ ಕಿವಿಮಾತು ಹೇಳಿದರು.
    ವಿನೋಬನಗರದ ಎಸ್‌ಜೆಜೆಎಂ ಶಾಲೆಯಲ್ಲಿ ಭಾನುವಾರ, ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ 60ರ ಸಂಭ್ರಮದ ಸಮಾರೋಪ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
    ಮಕ್ಕಳಿಗೆ ಸಂಸ್ಕಾರ ಕಲಿಸಿ. ಅದರ ಬದಲಾಗಿ ಭವಿಷ್ಯದಲ್ಲಿ ಸಂಪಾದನೆ ಹಣ ತರುತ್ತಾರೆಂಬ ಕಾರಣಕ್ಕೆ ಅವರ ಮೇಲೆ ಬಂಡವಾಳ ಹೇರುವ ಕೆಲಸ ಮಾಡಬೇಡಿ. ಹಾಗೆ ಮಾಡಿದರೆ ನಿಮ್ಮ ವೃದ್ಧಾಪ್ಯದಲ್ಲಿ ಹಳೆಯ ಸ್ಟೋರ್ ರೂಂನಲ್ಲಿ ಕೂರಿಸಬಹುದು. ಅದು ಶರಣ ಶಿಕ್ಷಣವಲ್ಲ. ಮಕ್ಕಳಿಗೆ ಬಹಿರಂಗ ಲೋಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡಿ. ಈ ದಿಸೆಯಲ್ಲಿ ಪ್ರತಿ ಮನೆಯೂ ಗುರುಕುಲ ಆಗಬೇಕು ಎಂದು ಆಶಿಸಿದರು.
    ಮಕ್ಕಳು ಕೇವಲ ನೂರಕ್ಕೆ ನೂರರಷ್ಟು ಅಂಕ ಪಡೆದರಷ್ಟೆ ಜಾಣರು ಎಂಬ ಭ್ರಮೆ ಬೇಡ. ನಿರೀಕ್ಷಿತ ಅಂಕ ಪಡೆಯದಿದ್ದರೂ ಸರಿಯೆ, ಮಕ್ಕಳು ಸಾಮಾಜಿಕ ಕಳಂಕ (ರಿಮಾರ್ಕ್) ತರದಂತೆ ಗಮನ ನೀಡಿ ಎಂದ ಅವರು, ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ರಾಜ್ಯದ ಇತಿಹಾಸ ಮರೆತುಹೋಗುವ ಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
    ದಾವಣಗೆರೆಯಲ್ಲಿ ಕೈಗಾರಿಕೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಚಿಗಟೇರಿ ಮನೆತನ ನೀಡಿದ ಕೊಡುಗೆ ಅಪಾರ. ಇಂದಿನ ಶಿಕ್ಷಣ ವ್ಯಾಪಾರೀಕರಣ ಆಗಿದೆ. ಆದರೆ ಅರವತ್ತು ವರ್ಷದ ಹಿಂದೆಯೇ ಶಿಕ್ಷಣಕ್ಕೆ ಆದ್ಯತೆ ನೀಡಿದ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದ ಚಿಗಟೇರಿ ಮನೆತನದ ಪರಂಪರೆಯನ್ನು ಅವರ ಕುಟುಂಬಸ್ಥರು ಉಳಿಸಿ ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.
    ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ ಪಾಲಕರು ವಿದ್ಯಾಸಂಸ್ಥೆಗಳ ಆಕರ್ಷಕ ಆಡಂಬರದ ಕಟ್ಟಡಕ್ಕೆ ಮಾರು ಹೋಗದೆ, ಸಂಸ್ಕಾರ ಸಂಸ್ಕೃತಿ ಕಲಿಸುವ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಆಸಕ್ತಿ ವಹಿಸಬೇಕು. ಹಾಗಾದಲ್ಲಿ ಮಕ್ಕಳು ಸಂಸ್ಕಾರವಂತರಾಗಬಲ್ಲರು ಎಂದರು.
    ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಚಿಗಟೇರಿ ಮುರಿಗೆಪ್ಪ ಅವರು ಭೂದಾನ ಮಾಡಿದ್ದು ಇತಿಹಾಸ. ಅದರಂತೆ ಮಿಲ್, ವಿದ್ಯಾಸಂಸ್ಥೆಗಳ ಆರಂಭಕ್ಕೂ ಅವರ ಕುಟುಂಬ ಹೆಸರಾಗಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್, ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಅಧ್ಯಕ್ಷ ಮುರುಗೇಂದ್ರ ವಿ. ಚಿಗಟೇರಿ, ಮನೋಹರ ಚಿಗಟೇರಿ ಇದ್ದರು. ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts