More

    ಚಿಕ್ಕೋಡಿ ಮುಂದೆ ಬೆಳಗಾವಿ ಹಿಂದೆ!

    ಚಿಕ್ಕೋಡಿ: ರಾಜ್ಯದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಚಿಕ್ಕೋಡಿ ಶೈಕ್ಷಣಿ ಜಿಲ್ಲೆ 16 ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆ 24ನೇ ಸ್ಥಾನ ಪಡೆದಿವೆ.

    ಕಳೆದ ವರ್ಷ ಬೆಳಗಾವಿ ಶೇ. 87.8 ಫಲಿತಾಂಶ (18ನೇ ಸ್ಥಾನ) ಹಾಗೂ ಚಿಕ್ಕೋಡಿ ಶೇ.89.99 ಫಲಿತಾಂಶ (17ನೇ ಸ್ಥಾನ)ದಾಖಲಿಸಿತ್ತು. ಈ ಬಾರಿ ಬೆಳಗಾವಿ ಶೇ.85.85 (26ನೇ ಸ್ಥಾನ) ಹಾಗೂ ಚಿಕ್ಕೋಡಿ ಶೇ.91.7 (12ನೇ ಸ್ಥಾನ) ಫಲಿತಾಂಶ ದಾಖಲಿಸಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಇತ್ತ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಫಲಿತಾಂಶದಲ್ಲಿ 26ನೇ ಸ್ಥಾನಕ್ಕೆ ಏರಿಕೆಯಾಗುವ ಮೂಲಕ ಫಲಿತಾಂಶದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

    ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿನ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಶಾಲೆಯ ಮಕ್ಕಳು ಎಸ್‌ಎಸ್‌ಎಲ್‌ಸಿ ಸರಾಸರಿ ಶೇ.90 ಫಲಿತಾಂಶ ಸಾಧನೆ ಮಾಡಿದ್ದಾರೆ. ನಗರದಲ್ಲಿ ಪ್ರದೇಶದಲ್ಲಿ ಸರಾಸರಿ ಶೇ.79 ಫಲಿತಾಂಶ ಬಂದಿದೆ. ಸವದತ್ತಿಯ ಅನುಪಮಾ ಹಿರೇಹೊಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನಗಳಿಸುವ ಮೂಲಕ ಗ್ರಾಮೀಣ ಮಕ್ಕಳು ಹಿಂದೆ ಎಂಬ ಮಿಥ್ಯವನ್ನು ದೂರ ಮಾಡಿದ್ದಾಳೆ.

    ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಮೂಡಲಗಿ,ರಾಯಬಾಗ, ಚಿಕ್ಕೋಡಿ ಉತ್ತರ, ಚಿಕ್ಕೋಡಿ ದಕ್ಷಿಣ, ಅಥಣಿ, ಕಾಗವಾಡ, ಹುಕ್ಕೇರಿ ಹಾಗೂ ಗೋಕಾಕ ತಾಲೂಕಿನ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಪಿ ಪರೀಕ್ಷೆಗೆ 22,178 ಬಾಲಕರು, 21,007 ಬಾಲಕಿಯರು ಸೇರಿ ಒಟ್ಟು 43,185 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 19,393 ಬಾಲಕರು, 19,644 ಬಾಲಕಿಯರು ಸೇರಿ ಒಟ್ಟು 39,037 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸುಮಾರು 4,148 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

    ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಖಾನಾಪುರ, ಸವದತ್ತಿ, ರಾಮದುರ್ಗ ಹಾಗೂ ಕಿತ್ತೂರು ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 15,821 ಬಾಲಕರು, 15,857 ಬಾಲಕಿಯರು ಸೇರಿದಂತೆ ಒಟ್ಟು 31,678 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 12,895 ಬಾಲಕರು, 14,153 ಬಾಲಕಿಯರು ಸೇರಿದಂತೆ ಒಟ್ಟು 27,048 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸುಮಾರು 4,630 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

    ಶೈಕ್ಷಣಿಕ ಜಿಲ್ಲೆಗೆ ಪೂಜಾ ಗಂಗನವರ ಪ್ರಥಮ

    ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೂಜಾ ಗಂಗನವರ 625ಕ್ಕೆ 622 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ, ಅಥಣಿಯ ಋತು ಪತ್ತಾರ, ಕಾಗವಾಡದ ವಿಜಯಲಕ್ಷ್ಮೀ ಬೆಳಂಕಿ, ರಾಯಬಾಗದ ಸೌರಭ ಕಡಬಿ, ವಿನಾಯಕ ನಾಯಿಕ ಇವರು 625ಕ್ಕೆ 621 ಅಂಕ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ 11 ವಿದ್ಯಾರ್ಥಿಗಳು 625ಕ್ಕೆ 620 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆ 26ನೇ ಸ್ಥಾನ ಗಳಿಸಿದೆ. ಕಳೆದ ಬಾರಿ ಸಿ ಗ್ರೇಡ್ ಬಂದಿತ್ತು. ಈ ಬಾರಿ ಫಲಿತಾಂಶದಲ್ಲಿ ಸುಧಾರಣೆಯಾಗಿದ್ದು, ಬಿ ಗ್ರೇಡ್ ಬಂದಿದೆ. ಗ್ರಾಮೀಣ ಪ್ರದೇಶ ಶಾಲೆಯ ಮಕ್ಕಳು ಹೆಚ್ಚು ರ‌್ಯಾಂಕ್ ಪಡೆದಿರುವುದು ಖುಷಿ ತಂದಿದೆ. ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಶೂನ್ಯ ಫಲಿತಾಂಶ ಬಂದಿದೆ.
    | ಬಸವರಾಜ ನಾಲತವಾಡ, ಡಿಡಿಪಿಐ ಬೆಳಗಾವಿ

    ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಪ್ರೌಢ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ರ‌್ಯಾಂಕ್ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದ್ದೇವೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಫಲಿತಾಂಶ ಉತ್ತಮವಾಗಿದೆ.
    | ಮೋಹನಕುಮಾರ ಹಂಚಾಟೆ, ಡಿಡಿಪಿಐ ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts