More

    ಸಂಭ್ರಮದ ಉತ್ಸವಕ್ಕೆ ಅದ್ದೂರಿ ಚಾಲನೆ: ಉದ್ಘಾಟನೆ ನೆರವೇರಿಸಿದ ಸಿಎಂ ಬೊಮ್ಮಾಯಿ

    ಚಿಕ್ಕಬಳ್ಳಾಪುರ: ದಾಖಲೆ ಪ್ರಮಾಣದಲ್ಲಿ ಸ್ಪರ್ಧೆಗಳು, ಖ್ಯಾತ ಕಲಾವಿದರ ನೇತೃತ್ವದಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾನಾ ಬಗೆಯ ಪ್ರದರ್ಶನಗಳನ್ನು ಒಳಗೊಂಡ ಚಿಕ್ಕಬಳ್ಳಾಪುರ ಉತ್ಸವವು ಶನಿವಾರ ಅದ್ದೂರಿ ಚಾಲನೆ ಪಡೆದುಕೊಂಡಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಕೆ.ಸುಧಾಕರ್ ಫೌಂಡೇಷನ್‌ನಿಂದ ಜ.7ರಿಂದ ಜ.14 ರವರೆಗೆ ಹಮ್ಮಿಕೊಂಡಿರುವ ಸಂಕ್ರಾಂತಿ ಸೊಬಗು ಮತ್ತು ಕಲಾ ವೈಭವವನ್ನು ಸಾರುವ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡುವುದರೊಂದಿಗೆ ಪ್ರಾರಂಭಗೊಂಡಿತು. ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದ ವಿಶಾಲ ಮೈದಾನದಲ್ಲಿ ಕಲಾವಿದರಿಂದ ನಿರ್ಮಾಣವಾದ ನಂದಿ ಭೋಗನಂದೀಶ್ವರ ಸ್ವಾಮಿ ಮತ್ತು ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯದ ಕಲಾಕೃತಿಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

    ಅಭಿವೃದ್ಧಿಗೆ ವಿಶೇಷ ಆದ್ಯತೆ
    ರಾಜ್ಯ ಸರ್ಕಾರವು ರೈತರು ಮತ್ತು ಕಾರ್ಮಿಕರೂ ಸೇರಿದಂತೆ ಎಲ್ಲ ವರ್ಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚಿಕ್ಕಬಳ್ಳಾಪುರದ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದ ಪುಣ್ಯಭೂಮಿಯ ಜನರ ಬದುಕಿನ ಭವಿಷ್ಯ ಬರೆಯಲು ಚಿಕ್ಕಬಳ್ಳಾಪುರ ಉತ್ಸವ ಮುನ್ನುಡಿಯಾಗಲಿದೆ. ಇದು ಹುರುಪು ತುಂಬುವ ಜೀವನೋತ್ಸವ. ಇದು ಸಾಧನೆಗೆ ಶಕ್ತಿ ನೀಡುತ್ತದೆ ಎಂದರು.
    ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನರ ಮನೆಬಾಗಿಲಿಗೆ ಸವಲತ್ತುಗಳನ್ನು ತಲುಪಿಸುತ್ತಿವೆ. ಅಭಿವೃದ್ಧಿಯ ವೇಗ ಹೆಚ್ಚಿಸಿ, ಪ್ರಗತಿಪಥದತ್ತ ಕೊಂಡೊಯ್ಯುತ್ತಿದೆ. ಇದಕ್ಕೆ ಚಿಕ್ಕಬಳ್ಳಾಪುರಕ್ಕೆ ಸಿಕ್ಕ ಹಲವು ಕೊಡುಗೆಗಳು ಸಾಕ್ಷಿಯಾಗಿವೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಚಿಕ್ಕಬಳ್ಳಾಪುರದ ಉತ್ಸವವು ಅಭಿವೃದ್ಧಿ ಮತ್ತು ಜನಪರ ಕೆಲಸಗಳಿಗೆ ಪ್ರೇರಣಾದಾಯಕವಾಗಿದೆ. ಸಂಕ್ರಾಂತಿ ಸುಗ್ಗಿಯ ಕಾಲದಲ್ಲಿ ಜನರು ಸಂಭ್ರಮದ ವಾತಾವರಣ ಕಾಣುತ್ತಿದ್ದಾರೆ ಎಂದರು. ಸಚಿವ ಭೈರತಿ ಬಸವರಾಜು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಡಿಸಿ ಎನ್.ಎಂ.ನಾಗರಾಜ್, ಎಸ್ಪಿ ಡಿ.ಎಲ್.ನಾಗೇಶ್, ಜಿಪಂ ಸಿಇಒ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮತ್ತಿತರರು ಇದ್ದರು.

    ಸಂಭ್ರಮದ ಉತ್ಸವಕ್ಕೆ ಅದ್ದೂರಿ ಚಾಲನೆ: ಉದ್ಘಾಟನೆ ನೆರವೇರಿಸಿದ ಸಿಎಂ ಬೊಮ್ಮಾಯಿ

    ದಶಕಗಳ ಕನಸು ನನಸಾಗುತ್ತಿದೆ
    ಸಚಿವ ಡಾ ಕೆ.ಸುಧಾಕರ್ ಮಾತನಾಡಿ, ಕಳೆದ 30 ವರ್ಷಗಳಿಂದಲೂ ಬರದ ವಾತಾವರಣ, ನೀರಿನ ಅಭಾವ, ಅಂತರ್ಜಲ ಮಟ್ಟ ಕುಸಿತ ಕಂಡಿದ್ದ ಈ ಭಾಗದಲ್ಲಿ ಇದೀಗ, ಜಲ ಮತ್ತು ಹಸಿರು ಸಮೃದ್ಧಿ ಇದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ಮಾಣದ ದಶಕಗಳ ಕನಸು ನನಸಾಗುತ್ತಿದೆ. ಇದರ ಸಂಭ್ರಮಕ್ಕೆ ಉತ್ಸವ ಆಚರಿಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂದರು. ಈ ಭಾಗದಲ್ಲಿ ಬೆಳೆದ ಶೇ.75ರಷ್ಟು ತರಕಾರಿ ಇತರ ಭಾಗಗಳಿಗೆ ಪೂರೈಕೆಯಾಗುತ್ತದೆ. ಇದರಲ್ಲಿ ಮತ್ತಷ್ಟು ಉತ್ತಮ ಸಾಧನೆಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ ಎಂದರು.

    ಸಂಭ್ರಮದ ಉತ್ಸವಕ್ಕೆ ಅದ್ದೂರಿ ಚಾಲನೆ: ಉದ್ಘಾಟನೆ ನೆರವೇರಿಸಿದ ಸಿಎಂ ಬೊಮ್ಮಾಯಿ

    ಒಳ್ಳೆಯ ಕ್ರಾಂತಿಯಾಗಲಿ
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆ ಮಾತನಾಡಿ, ಈ ಭಾಗದ ಕೃಷಿಕರು ಒಳ್ಳೆಯ ಶ್ರಮಿಕರು. ಧರ್ಮಸ್ಥಳದಲ್ಲಿನ ಅನ್ನದಾಸೋಹಕ್ಕೆ ಚಿಕ್ಕಬಳ್ಳಾಪುರದಿಂದ ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳು ಪ್ರತಿನಿತ್ಯ ಪೂರೈಕೆಯಾಗುತ್ತಿರುತ್ತದೆ. ಇಂತಹ ಪ್ರದೇಶದಲ್ಲಿ ಬರವು ನೀಗಿ, ಜಲಸಮೃದ್ಧಿ ಕಾಣುತ್ತಿರುವುದು ಖುಷಿಯ ವಿಚಾರ. ಮುಂಬರುವ ದಿನಗಳಲ್ಲಿ ಜನಪರವಾಗಿ ಒಳ್ಳೆಯ ಕ್ರಾಂತಿಯಾಗಲಿ ಎಂದು ಆಶಿಸಿದರು. ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿಯು ಮಹಿಳೆಯರ ಸ್ವಾವಲಂಬನೆ, ಆರ್ಥಿಕಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಹಾಗೆಯೇ ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ನಿರಂತರವಾಗಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ ಎಂದರು. ಸರ್ಕಾರವು ಹಲವು ಯೋಜನೆಗಳ ಮೂಲಕ ಸವಲತ್ತುಗಳನ್ನು ಒದಗಿಸುತ್ತಿದ್ದರೂ ಮಾಹಿತಿ ಕೊರತೆಯಿಂದ ಬಹಳಷ್ಟು ಜನರು ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ಎಲ್ಲವೂ ದೇವರೇ ಬಂದು ಕೊಡಲಿ ಎಂಬ ಭಾವನೆ ಸಲ್ಲ. ಇತರೆ ಮಾಧ್ಯಮಗಳಿಂದ ದೈವದ ನೆರವು ಸಿಗುತ್ತದೆ. ಇದನ್ನು ಸಮರ್ಪಕವಾಗಿ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

    ಚಿಕ್ಕಬಳ್ಳಾಪುರದ ಚೊಚ್ಚಲ ಉತ್ಸವ
    ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಮತ್ತು ಕಾರ್ಕಳ ಉತ್ಸವ ಮಾದರಿಯಲ್ಲಿ ಹಮ್ಮಿಕೊಂಡಿರುವ ಉತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ವಿದ್ಯುತ್ ದೀಪಾಲಂಕಾರದಿಂದ ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳು ಝಗಮಗಿಸುತ್ತಿವೆ. ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯ ಗೋಪುರ, ನಂದಿಯ ಭೋಗನಂದೀಶ್ವರ, ಪಂಚಗಿರಿಗಳ ಸಾಲು ಸೇರಿದಂತೆ ಮನಮೋಹಕ ದೃಶ್ಯಗಳನ್ನು ಹೊಂದಿರುವ ವೈಭವದ ಅದ್ದೂರಿ ವೇದಿಕೆ, ಆಕರ್ಷಕ ಲೈಟಿಂಗ್ ವ್ಯವಸ್ಥೆಯಲ್ಲಿ ಶನಿವಾರ ಗಾಯಕ ಪದ್ಮಶ್ರೀ ಶಂಕರ್ ಮಹಾದೇವನ್ ತಂಡದಿಂದ ಗಾನ ತಾಂಡವ, ಕಲಾವಿದರಾದ ನಿರುಪಮಾ ಹಾಗೂ ರಾಜೇಂದ್ರರಿಂದ ನೃತ್ಯ ವೈಭವ, ಕಲಾವಿದ ಪ್ರವೀಣ್ ಗೋಡ್ಖಿಂಡಿ ಅವರಿಂದ ವಿಶೇಷ ್ಯೂಶನ್ ಕಾರ್ಯಕ್ರಮವು ಮೆಚ್ಚುಗೆಗೆ ಪಾತ್ರವಾಯಿತು.

    ಸಂಭ್ರಮದ ಉತ್ಸವಕ್ಕೆ ಅದ್ದೂರಿ ಚಾಲನೆ: ಉದ್ಘಾಟನೆ ನೆರವೇರಿಸಿದ ಸಿಎಂ ಬೊಮ್ಮಾಯಿ

    ಒಂದು ವಾರದ ರಸದೌತಣ
    ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ದಸರಾ ವೈಭವ ರೀತಿಯಲ್ಲಿ ಗಮನ ಸೆಳೆಯುತ್ತಿರುವ ಉತ್ಸವದ ಹಿನ್ನೆಲೆಯಲ್ಲಿ ಒಂದೆಡೆ ಜಿಪಂ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಗುಂಪು ಕ್ರೀಡೆಗಳು ನಡೆಯುತ್ತಿವೆ. ವಿವಿಧ ಕ್ರೀಡಾಕೂಟಗಳಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ. 1,301 ಕ್ರೀಡಾ ತಂಡಗಳನ್ನು ರಚಿಸಲಾಗಿದೆ. ಬಹುಮಾನಗಳ ಮೌಲ್ಯವೇ 1 ಕೋಟಿ ರೂ. ಆಗಿದೆ. ರಕ್ತದಾನ ಶಿಬಿರ, ಆಹಾರ ಮೇಳ, 7 ದಿನಗಳ ಲಸಿಕಾಕರಣ, ಆರೋಗ್ಯ ಮೇಳ, ಫಲಪುಷ್ಪ, ಗ್ರಾಹಕರ ವಸ್ತು ಪ್ರದರ್ಶನ, ಮಾದರಿ ಗ್ರಾಮದ ಆಕೃತಿ ನಿರ್ಮಾಣ, ಸರ್ಕಾರದ ಸಾಧನೆಗಳ ವಸ್ತು ಪ್ರದರ್ಶನ, ಊರಹಬ್ಬ, ಗಾಳಿಪಟ, ಮಹಿಳೆಯರಿಗೆ ಅಡುಗೆ, ಯಕ್ಷಗಾನ, ಕುಸ್ತಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಖುಷಿ ಹೆಚ್ಚಿಸಲಿವೆ. ಉತ್ಸವದಲ್ಲಿ ಜೂನಿಯರ್ ಎನ್‌ಟಿಆರ್, ಉಪೇಂದ್ರ, ರಮೇಶ್ ಅರವಿಂದ್, ರಿಷಬ್ ಶೆಟ್ಟಿ, ಅಕುಲ್ ಬಾಲಾಜಿ, ಧನಂಜಯ್, ವಿಜಯ್ ಪ್ರಕಾಶ್, ಶಂಕರ್ ಮಹದೇವನ್, ಸೋನು ನಿಗಮ್, ಗಣೇಶ್, ಮುರಳಿ, ಅರ್ಜುನ್ ಜನ್ಯ, ವಾಸುಕಿ ವೈಭವ್, ಯೋಗರಾಜ್ ಭಟ್, ಚಂದನ್ ಶೆಟ್ಟಿ, ಅನನ್ಯ ಭಟ್, ರಾಜೇಶ್ ಕೃಷ್ಣ್ಣನ್, ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸಲಿದ್ದು, ಉತ್ಸವವು ರಸದೌತಣ ಉಣಬಡಿಸಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts