More

    ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಮನೆಮನೆ ಮತಬೇಟೆ ಜೋರು

    ಚಿಕ್ಕಬಳ್ಳಾಪುರ: ನಗರಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, ಅಭ್ಯರ್ಥಿಗಳು ಮತದಾರನ ಓಲೈಕೆಯ ಅಂತಿಮ ಕಸರತ್ತಿನಲ್ಲಿ ಮುಳುಗಿದ್ದಾರೆ.

    ನಗರದ 31 ವಾರ್ಡ್‌ಗಳಿಗೆ ಫೆ.9 ರಂದು ಮತದಾನ ನಡೆಯಲಿದ್ದು, ಶುಕ್ರವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇದುವರೆಗೂ ಕೇವಲ ಕಾರ್ಯಕರ್ತರೊಂದಿಗೆ ಗಲ್ಲಿ ಗಲ್ಲಿಯಲ್ಲಿ ಸುತ್ತಾಟಕ್ಕೆ ಪ್ರಚಾರ ಸೀಮಿತವಾಗಿತ್ತು. ಆದರೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಅಭ್ಯರ್ಥಿಗಳು ಪಕ್ಷದ ಹಿರಿಯ ನಾಯಕರು ಮತ್ತು ಬೆಂಬಲಿಗರೊಂದಿಗೆ ಮನೆ ಮನೆಗೂ ತೆರಳಿ ಮತಯಾಚಿಸುತ್ತಿದ್ದಾರೆ.

    31 ವಾರ್ಡ್‌ಗಳಿಂದ ಬರೋಬ್ಬರಿ 101 ಅಭ್ಯರ್ಥಿಗಳು ಕಣದಲ್ಲಿದ್ದು, ಇಲ್ಲಿ ಪಕ್ಷಗಳ ಪ್ರಭಾವಕ್ಕಿಂತ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸಿನ ಆರ್ಭಟವೇ ಜೋರಾಗಿದೆ. ಬಹುತೇಕರು ಪಕ್ಷದ ಬಲ ಹೆಚ್ಚು ನೆಚ್ಚಿಕೊಳ್ಳದೇ ತಮ್ಮ ಕೆಲಸ ತಾವು ಮಾಡುತ್ತಿದ್ದು, ಭರವಸೆಗಳ ಗೋಪುರ ಕಟ್ಟುತ್ತಿದ್ದಾರೆ.

    ಕುಟುಂಬಸ್ಥರು ಸಾಥ್ : ಅಭ್ಯರ್ಥಿಗಳ ಪ್ರಚಾರಕ್ಕೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಬಹುತೇಕ ಕಡೆ ಮಹಿಳಾ ಅಭ್ಯರ್ಥಿಗಳ ಪರವಾಗಿ ಗಂಡಂದಿರೇ ಹೆಚ್ಚಿನ ಹೊರೆ ಹೊತ್ತುಕೊಂಡಿದ್ದು ಪ್ರತಿನಿತ್ಯ ಬೆಳಗ್ಗೆ ಕಾರ್ಯಕರ್ತರ ಒಗ್ಗೂಡಿಸುವಿಕೆ, ವಾರ್ಡ್‌ನ ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ, ಮನೆ ಮನೆಗೂ ಕರಪತ್ರ ವಿತರಣೆಯಲ್ಲಿ ತೊಡಗಿದ್ದಾರೆ. ಪತಿ ಅಭ್ಯರ್ಥಿಯಾಗಿರುವ ವಾರ್ಡ್‌ನಲ್ಲಿ ಅವರ ಪತ್ನಿ ಮಹಿಳೆಯರನ್ನು ಸೇರಿಸಿಕೊಂಡು ಪ್ರಚಾರ ಕೈಗೊಳ್ಳುತ್ತಿದ್ದಾರೆ. ಬಹುತೇಕ ಕಡೆ ಅಭ್ಯರ್ಥಿಗಳ ಜತೆಗೆ ಅವರ ತಂದೆ ತಾಯಿ, ಪತಿ, ಮಕ್ಕಳು ಮತ್ತು ಅತ್ತೆ ಮಾವಂದಿರು, ಅಣ್ಣ ತಮ್ಮಂದಿರರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಿದ್ದಾರೆ.

    ಸಚಿವರ ಪ್ರಚಾರ : ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಗರಕ್ಕೆ ಬಂದ ಡಾ.ಕೆ.ಸುಧಾಕರ್ ಶುಕ್ರವಾರ ಪಕ್ಷದ ಅಭ್ಯರ್ಥಿಗಳ ಪರ ನಗರದ ವಿವಿಧ ವಾರ್ಡ್‌ಗಳಲ್ಲಿ ಮತಯಾಚಿಸಿದರು. ಚಾಮರಾಜಪೇಟೆಯ ಕಾಲನಿ, ಕೊರಚರಪೇಟೆ, ಕಾರ್ಖಾನೆಪೇಟೆ ಸೇರಿ ಹಲವೆಡೆ ಪಕ್ಷದ ಅಭ್ಯರ್ಥಿಗಳೊಂದಿಗೆ ತೆರಳಿದರು. ಅಂಬೇಡ್ಕರ್ ಕಾಲನಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ಗೆ ಮಾಲಾರ್ಪಣೆ ಮಾಡಿದರು. ಚಿಕ್ಕಬಳ್ಳಾಪುರ ನವ ನಗರದ ನಿರ್ಮಾಣದ ಕನಸು ಸಾಕಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ. ಈಗಾಗಲೇ ಕಂದವಾರ ಕೆರೆಗೆ ಎಚ್.ಎನ್.ವ್ಯಾಲಿ ಯೋಜನೆ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ 44 ಕೆರೆಗಳೂ ತುಂಬಲಿವೆ. ಇನ್ನು ಈ ಭಾಗದ ವಸತಿರಹಿತರಿಗೆ ನಿವೇಶನಗಳನ್ನು ವಿತರಿಸಲು ಸರ್ಕಾರ ಅಗತ್ಯ ಜಮೀನು ಮಂಜೂರು ಮಾಡಿದೆ. ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟು ಹಕ್ಕುಪತ್ರ ವಿತರಿಸಲಾಗುತ್ತದೆ ಎಂದರು. ನಗರಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಜತೆಗೆ ಒಡಂಬಡಿಕೆಯ ಮೇಲೆ ಕೆಲ ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದ್ದು, ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts