More

    ಮೇವು ಉತ್ಪಾದನೆಯಲ್ಲಿ ಹೆಚ್ಚಳ, ವಾರಕ್ಕೆ ಜಿಲ್ಲೆಯಲ್ಲಿ 17,893 ಟನ್ ಉತ್ಪಾದನೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಉತ್ಪಾದನೆ ಪ್ರಮಾಣ ಹೆಚ್ಚಳದ ಜತೆಗೆ ಮೇವಿನ ಪ್ರಮಾಣವೂ ಹೆಚ್ಚಳವಾಗಿದೆ. ರೈತರು ಮೇವಿಗೆ ಪರದಾಡುವ ಪರಿಸ್ಥಿತಿ ಈ ಬಾರಿ ದೂರವಾಗಿದ್ದು, ಬೇಡಿಕೆ ಕುಸಿತದ ನಡುವೆ ಮುಂಜಾಗ್ರತೆಯಿಂದ ದಾಸ್ತಾನಿಗೆ ಆದ್ಯತೆ ನೀಡಲಾಗುತ್ತಿದೆ.

    ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 731 ಮಿ.ಮೀ ವಾಡಿಕೆ ಮಳೆಗೆ 1240 ಮಿ.ಮೀ ಮಳೆ ಬಿದ್ದಿದೆ. ಇದರಿಂದ ಹಲವೆಡೆ ಬೆಳೆಗಳು ನಾಶವಾಗಿದೆ. ಮತ್ತೊಂದೆಡೆ ಅಂತರ್ಜಲ ಮಟ್ಟ ಏರಿಕೆ, ಭೂಮಿಯ ತೇವಾಂಶ ಹೆಚ್ಚಳದಿಂದ ಮೇವು ಬೆಳೆಯಲು ಅನುಕೂಲವಾಗಿದೆ. ಹಿಂದೆ ಬೆಳೆಗಳು ಮಳೆಯ ಅಭಾವಕ್ಕೆ ಒಣಗುತ್ತಿದ್ದರಿಂದ ಮೇವಿನ ಕೊರತೆ ಎದುರಾಗುತ್ತಿತ್ತು. ಆದರೆ, ಈ ಬಾರಿ ಧಾರಾಕಾರ ಮಳೆಗೆ ಬೆಳೆ ಕೊಳೆತು ಹೋಗಿರುವುದರ ನಡುವೆಯೂ ವ್ಯಾಪಕವಾಗಿ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಉತ್ಪಾದನೆಯಾಗಿದೆ. ಪ್ರಸ್ತುತ ಮುಂದಿನ 39 ವಾರಗಳಿಗೆ ಸಾಕಾಗುವಷ್ಟು ಅಂದರೆ 5,14,625 ಟನ್ ದಾಸ್ತಾನು ಇದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ತಿಳಿಸಿದೆ.

    ಈ ಪೈಕಿ ಚಿಂತಾಮಣಿ ಮತ್ತು ಗೌರಿಬಿದನೂರು ತಾಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿದ್ದು, ಗುಡಿಬಂಡೆಯಲ್ಲಿ ಕಡಿಮೆ ಇದೆ. ಜಿಲ್ಲೆಯಲ್ಲಿ 2020ನೇ ಗಣತಿ ಪ್ರಕಾರ ಎಮ್ಮೆ ಮತ್ತು ದನಗಳು 2,40,215 ಮತ್ತು ಕುರಿ ಮತ್ತು ಮೇಕೆಗಳು 8,01,589 ಸೇರಿ 10,41,804 ಮೇವು ಆಧಾರಿತ ಜಾನುವಾರುಗಳಿವೆ. ಇವುಗಳಿಗೆ ಒಂದು ವಾರಕ್ಕೆ 12,895 ಟನ್ ಮೇವು ಬೇಕಾಗಿದೆ. ಆದರೆ, ವಾರಕ್ಕೆ ಜಿಲ್ಲೆಯಲ್ಲಿ 17,893 ಟನ್ ಮೇವು ಉತ್ಪಾದನೆಯಾಗುತ್ತಿದೆ. ಇದರಿಂದ ಮೇವಿನ ಕೊರತೆ ಕಂಡು ಬರದಿದ್ದರೂ ಪ್ರತಿ ವರ್ಷದಂತೆ ಮುಂಬರುವ ಬೇಸಿಗೆಯಲ್ಲಿ ಸಮಸ್ಯೆ ಕಾಡುವ ನಿರೀಕ್ಷೆ ಇರುವುದರಿಂದ ದಾಸ್ತಾನಿಗೆ ಆದ್ಯತೆ ನೀಡಲಾಗಿದೆ.

     

    ಸಮೃದ್ಧಿ ಮೇವು ಮಾರಾಟ: ಜಿಲ್ಲೆಯಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳ ಮತ್ತು ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಸಮೃದ್ಧ ಮೇವನ್ನು ಬೇರೆ ಭಾಗಗಳಿಗೆ ಮಾರಲಾಗುತ್ತಿದೆ. ಈಗ ಒಂದು ಟ್ರ್ಯಾಕ್ಟರ್ ಲೋಡಿಗೆ 5ರಿಂದ 7 ಸಾವಿರ ರೂ. ಇದೆ. ಇದು ಮುಂಬರುವ ಬೇಸಿಗೆಯಲ್ಲಿ ಎರಡು ಪಟ್ಟು ಹೆಚ್ಚಾಗುವ ಲೆಕ್ಕಾಚಾರದಿಂದ ಬಹುತೇಕರು ದಾಸ್ತಾನಿಗೆ ಮುಂದಾಗುತ್ತಿದ್ದಾರೆ.

    ಆಂಧ್ರ ಗಡಿ ಭಾಗದಲ್ಲಿರುವ ಗೌರಿಬಿದನೂರು, ಬಾಗೇಪಲ್ಲಿ ಮತ್ತು ಚಿಂತಾಮಣಿಯ ತಾಲೂಕಿನಲ್ಲಿ ನೆರೆ ರಾಜ್ಯದ ರೈತರು ಮತ್ತು ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲೂಕಿನಿಂದ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ರೈತರು ಮೇವು ಖರೀದಿಸುತ್ತಿದ್ದಾರೆ. ಇದರ ನಡುವೆ ಸ್ಥಳೀಯ ಹಲವು ರೈತರು ಮಾರದೇ ಅಗತ್ಯವಿರುವ ಮೇವನ್ನು ದಾಸ್ತಾನಿಟ್ಟುಕೊಳ್ಳುತ್ತಿದ್ದಾರೆ.

    ಸಾಮಾನ್ಯವಾಗಿ ಮೇವಿನ ಕೊರತೆಯು ಬೇಸಿಗೆಯಲ್ಲಿ ಕಾಡುತ್ತದೆ. ಸದ್ಯಕ್ಕೆ ಬೇಡಿಕೆ ಇಲ್ಲ. ಕೆಲ ರೈತರು ಮಾತ್ರ ಬೆಳೆಯ ಕಟಾವಿನ ಕೂಲಿ ಹಣವನ್ನು ಸರಿದೂಗಿಸಿ, ಮೇವು ನೀಡುವ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕರು ದಾಸ್ತಾನಿಟ್ಟುಕೊಳ್ಳುತ್ತಿದ್ದಾರೆ.
    ಬಿ.ಎನ್.ಮುನಿಕೃಷ್ಣಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ

    ರಾಗಿ, ಜೋಳ, ಆವರೆ ಕಟಾವು ಪ್ರಕ್ರಿಯೆ ನಡೆಯುತ್ತಿದೆ. ಜಾನುವಾರುಗಳಿಲ್ಲದ ಕೆಲ ರೈತರು ಮಾರಲು ಒಲವು ತೋರುತ್ತಿದ್ದರೆ. ಮತ್ತೆ ಬಹುತೇಕರು ಮನೆಯಲ್ಲಿನ ರಾಸುಗಳ ಸಂಖ್ಯೆಗೆ ಅನುಗುಣವಾಗಿ ಮೇವು ದಾಸ್ತಾನಿಟ್ಟುಕೊಳ್ಳುತ್ತಿದ್ದಾರೆ.
    ಭಕ್ತರಹಳ್ಳಿ ಪ್ರತೀಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts