More

    ಗೌರಿಬಿದನೂರು ಗೆಲ್ಲಲು ಶಶಿಧರ್​ಗೆ ಗಾಳ: ರಾಜಕೀಯ ವಲಯದಲ್ಲಿ ಸಂಚಲನ

    | ಸಿ.ಎ.ಮುರಳಿಧರ್​ ಗೌರಿಬಿದನೂರು
    ಗೌರಿಬಿದನೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭದ್ರಕೋಟೆಯಾಗಿರುವ ಗೌರಿಬಿದನೂರು ಕ್ಷೇತ್ರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕು ಎಂದು ತಂತ್ರ ಹೆಣೆದಿರುವ ಬಿಜೆಪಿ ಅಚ್ಚರಿಯ ಹೆಜ್ಜೆ ಇಟ್ಟಿದ್ದು,ಕ್ಷೇತ್ರದಲ್ಲಿ ವೈದ್ಯರಾಗಿ ಚಿರಪರಿಚಿತರಾಗಿರುವ ಡಾ.ಶಶಿಧರ್​ ಅವರಿಗೆ ಗಾಳ ಹಾಕಿದೆ.

    ಈಗಾಗಲೇ 2023ರ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ತಾಲೂಕು ಬಿಜೆಪಿ ಯಾರೂ ಊಹಿಸದ ಅಚ್ಚರಿ ಹೆಜ್ಜೆಯಿಟ್ಟಿದ್ದು, ಡಾ.ಶಶಿಧರ್​ ಅವರನ್ನು ಕಣಕ್ಕಿಳಿಸಿ, ಎದುರಾಳಿಗಳಿಗೆ ಠಕ್ಕರ್​ ಕೊಡಲು ಮುಂದಾಗಿದೆ.

    ವಿರೋಧ ಪಗಳಿಗೆ ಶಾಕ್​: ಕ್ಷೇತ್ರದಿಂದ ಬೆಂಗಳೂರಿನ ನಂದೀಶ್​ ರೆಡ್ಡಿ ಕಣಕ್ಕಿಳಿಯುತ್ತಾರೆ. ಅವರು ಬರುತ್ತಾರೆ, ಇವರು ಬರುತ್ತಾರೆ ಎಂಬ ಗಾಳಿ ಮಾತುಗಳು ಕೇಳಿಬರುತ್ತಿತ್ತು. ತಾಲೂಕಿನ ಪ್ರಬಲ ಪ್ರತಿ ಪವಾಗಿರುವ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲ ಇತರ ಪಗಳಲ್ಲೂ ಮನೆ ಮಾಡಿತ್ತು. ಈಗ ಅಭ್ಯಥಿರ್ ಆಯ್ಕೆಯಲ್ಲಿ ಅಚ್ಚರಿ ಹೆಜ್ಜೆಯಿರಿಸಿರುವ ಬಿಜೆಪಿ, ವೈದ್ಯಕಿಯ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ತಾಲೂಕಿನವರೇ ಆದ ಡಾ.ಶಶಿಧರ್​ ಅವರನ್ನು ಪಕ್ಕೆ ಕರೆತಂದು ಕಣಕ್ಕಿಳಿಸಲು ಮುಂದಾಗಿರುವುದು ವಿರೋಧ ಪಗಳಿಗೆ ಶಾಕ್​ ನೀಡಿದೆ.

    ಸ್ಥಳಿಯತೆ ಟ್ರಂಪ್​ ಕಾರ್ಡ್​: 2018ರ ಚುನಾವಣೆಯಲ್ಲಿ ಸ್ಥಳಿಯ ಬಿಜೆಪಿ ಪ್ರಭಾವಿ ಮುಖಂಡ ರವಿನಾರಾಯಣರೆಡ್ಡಿಗೆ ಟಿಕೆಟ್​ ನೀಡದೆ ಹೊರಗಿನವರಿಗೆ ಟಿಕೆಟ್​ ನೀಡಿದ ಕಾರಣ ಪಕ್ಷ ಅದರ ಪರಿಣಾಮ ಎದುರಿಸಬೇಕಾಯಿತು. ಆದರೆ ಈ ಬಾರಿ ಆ ತಪ್ಪು ಮಾಡಬಾರದೆಂದು ಸ್ಥಳಿಯ ಮುಖಂಡರು ಪಕ್ಷದ ಹಿರಿಯ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವು ಉದ್ಯಮಿ ಕೆ.ಎಚ್​.ಪುಟ್ಟಸ್ವಾಮಿಗೌಡ ಅಥವಾ ಜಿಪಂ ಮಾಜಿ ಸದಸ್ಯ ಡಾ.ಕೆ.ಕೆಂಪರಾಜು ಇಬ್ಬರಲ್ಲಿ ಒಬ್ಬರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸುವ ಮಾತುಗಳು ಕೇಳಿಬಂದಿದ್ದವು. ಆದರೆ ಬಿಜೆಪಿಗೆ ಬಂದರೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಕೈಬಿಟ್ಟು ಹೋಗಲಿವೆ ಎಂಬ ಕಾರಣಕ್ಕೆ ಅವರಿಬ್ಬರೂ ಬಿಜೆಪಿಯಿಂದ ದೂರವೇ ಉಳಿದಿದ್ದಾರೆ. ಮಿಗಿಲಾಗಿ ಅವರೂ ಕೂಡ ಹೊರಗಿನವರು. ಆದ್ದರಿಂದ ಚುನಾವಣೆಯಲ್ಲಿ ಸ್ಥಳಿಯ ಅಭ್ಯರ್ಥಿ ವಿಷಯವನ್ನೇ ಟ್ರಂಪ್​ ಕಾರ್ಡ್​ ಆಗಿ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಡಾ.ಶಶಿಧರ್​ ಅವರಿಗೆ ಗಾಳ ಹಾಕಿದೆ. ಶಶಿಧರ್​ ಹಾಗೂ ಅವರ ಕುಟುಂಬ 27 ವರ್ಷಗಳಿಂದ ಮಾನಸ ಆಸ್ಪತ್ರೆ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದೆ. ವೈದ್ಯಕಿಯ ಹಾಗೂ ಸಮಾಜ ಸೇವೆ ಮೂಲಕ ತಾಲೂಕಿನಲ್ಲಿ ಮನೆ ಮಾತಾಗಿದೆ.

    ರಾಜಕೀಯ ಸಂಚಲನ: ಡಾ.ಶಶಿಧರ್​ ಅವರನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸುವಲ್ಲಿ ಬಿಜೆಪಿ ಮುಖಂಡ ಎನ್​.ಎಂ. ರವಿ ನಾರಾಯಣರೆಡ್ಡಿ ಯಶಸ್ವಿಯಾಗಿದ್ದಾರೆ. ಪಕ್ಷದ ವರಿಷ್ಠರೂ ಶಶಿಧರ್​ ಅವರನ್ನು ಪಕ್ಷಕ್ಕೆ ಕರೆತರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೆ ತಾಲೂಕಿನಲ್ಲಿ ಸ್ಥಳಿಯರು ಹಾಗೂ ಹೊರಗಿನವರು ಎಂಬ ವಿಷಯದಲ್ಲಿ ರಾಜಕೀಯ ಗಿರಕಿಹೊಡೆಯುತ್ತಿದೆ. ಅಭ್ಯರ್ಥಿ ವಿಚಾರದಲ್ಲಿ ಜಾಣ್ಮೆಯ ಹೆಜ್ಜೆಯಿರಿಸಿರುವ ಬಿಜೆಪಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

    ಹೊರಗಿನವರನ್ನು ಕ್ಷೇತ್ರದ ಜನ ಒಪ್ಪುವುದಿಲ್ಲ. ಸ್ಥಳಿಯರಾದ ಶಶಿಧರ್​ ತಾಲೂಕಿನ ಜನತೆಗೆ ಚಿರಪರಿಚಿತರಾಗಿದ್ದಾರೆ. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ. ನಮಗೆ ಕ್ಷೇತ್ರದಲ್ಲಿ ಪಕ್ಷದ ಗೆಲುವು ಮುಖ್ಯ. ಅವರು ಪಕ್ಷಕ್ಕೆ ಬರುವುದರಿಂದ ಅನುಕೂಲವಾಗಲಿದೆ. ಎಲ್ಲರೂ ಅವರನ್ನು ಒಪ್ಪುತ್ತಾರೆ ಎಂಬ ವಿಶ್ವಾಸವಿದೆ. ಆದ್ದರಿಂದ ಮುಕ್ತ ಮನಸ್ಸಿನಿಂದ ಅವರನ್ನು ಆಹ್ವಾನಿಸಿದ್ದೇವೆ.
    | ಎನ್​.ಎಂ.ರವಿನಾರಾಯಣರೆಡ್ಡಿ, ಸ್ಥಳಿಯ ಬಿಜೆಪಿ ಮುಖಂಡ

    ನನಗೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಆತ್ಮೀಯರಿದ್ದಾರೆ. ಬಿಜೆಪಿ ಮುಖಂಡರು ರಾಜಕೀಯ ಪ್ರವೇಶಕ್ಕೆ ಆಹ್ವಾನ ನೀಡಿದ್ದಾರೆ. ಆತ್ಮಿಯರೊಂದಿಗೆ ಚಚಿರ್ಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಶೀಘ್ರದಲ್ಲೆ ಈ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇನೆ.
    | ಡಾ.ಶಶಿಧರ್​, ಮಾನಸ ಸಮೂಹ ಸಂಸ್ಥೆ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts