More

    ಎದ್ದೆನೋ ಬಿದ್ದೆನೋ ಎಂದು ಆಸ್ಪತ್ರೆಯಿಂದ ಓಡಿ ಹೋದ ಸೋಂಕಿತ: ಮುಂದೇನಾಯ್ತು?

    ಚೆನ್ನೈ: ಕರೊನಾ ಸೋಂಕಿತರನ್ನು ಹುಡುಕಿ ಅವರನ್ನು ಪರೀಕ್ಷೆ ಮಾಡಿ, ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಅದೆಷ್ಟೋ ಶ್ರಮದಾಯಕ ಕೆಲಸವಾಗಿರುತ್ತದೆ. ಅದರಲ್ಲಿಯೂ ಕೆಲವು ಸೋಂಕಿತರನ್ನು ಆಸ್ಪತ್ರೆಗೆ ಅಡ್ಮಿಟ್​ ಮಾಡುವಷ್ಟರಲ್ಲಿ ಸುಸ್ತೋ ಸುಸ್ತು. ಅಂಥದ್ದರಲ್ಲಿ ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಆಸ್ಪತ್ರೆಯಿಂದ ಏಕಾಏಕಿ ಓಡಿ ಹೋದರೆ?

    ಇಂಥದ್ದೇ ಹಲವಾರು ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಲೇ ಇವೆ. ಆಸ್ಪತ್ರೆಯಲ್ಲಿ ತಮಗೇನೋ ಮಾಡಿಬಿಟ್ಟಾರು ಎನ್ನುವ ಭಯದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಆಸ್ಪತ್ರೆಯಲ್ಲಿ ಇರಲು ಇಷ್ಟಪಡದ ಕೆಲವು ಸೋಂಕಿತರು ಎಲ್ಲರ ಕಣ್ಣು ತಪ್ಪಿಸಿ ಓಡಿ ಹೋಗುವಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ತಾವು ಮನೆಗೆ ಹೋದರೆ ಅಲ್ಲಿ ಇರುವ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿದರೆ ಎಂಥ ಅನಾಹುತ ಆಗಬಹುದು ಎಂಬುದರ ಪರಿವೆಯೂ ಇಲ್ಲದಂತೆ ಪರಾರಿಯಾಗುತ್ತಾರೆ.

    ಅಂಥದ್ದೇ ಪ್ರಕರಣ ಕರೊನಾ ಸೋಂಕಿತರು ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ರಾಜೀವಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ಜರುಗಿದೆ. 58 ವರ್ಷದ ಸೋಂಕಿತ ಎಲ್ಲರ ಕಣ್ಣು ತಪ್ಪಿಸಿ ಸೋಮವಾರ ಪರಾರಿಯಾಗಿಬಿಟ್ಟಿದ್ದ. ಹಲವಾರು ಕಿ.ಮೀ ದೂರ ಇರುವ ಮನೆಗೆ ಕಾಲ್ನಡಿಗೆಯಲ್ಲಿಯೇ ಹೋಗಿದ್ದ. ಯಾರ ಕಣ್ಣಿಗಾದರೂ ಬಿದ್ದುಬಿಟ್ಟರೆ ಎಂದು ಒಂದೇ ಉಸಿರಿನಲ್ಲಿ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದ.

    ವೈದ್ಯರು ಆಸ್ಪತ್ರೆಯ ರೌಂಡ್ಸ್​ಗೆ ಬಂದಾಗ ವಿಷಯ ತಿಳಿದಿದೆ. ಪೊಲೀಸರಲ್ಲಿ ದೂರು ದಾಖಲು ಮಾಡಿದರು. ಚಿಕಿತ್ಸೆ ಬೇಕಾದದ್ದು ಈ ವ್ಯಕ್ತಿಗೆ. ಹಾಗೆಂದು ಹೋದರೆ ಹೋಗಲಿ ಎಂದು ಪೊಲೀಸರು ಬಿಡಲು ಆಗುತ್ತದೆಯೆ? ಒಬ್ಬ ವ್ಯಕ್ತಿ ಎಷ್ಟು ಮಂದಿಗೆ ಬೇಕಾದರೂ ಸೋಂಕು ತಗುಲಿಸಬಹುದಲ್ಲ! ಇದೇ ಕಾರಣಕ್ಕೆ ಪೊಲೀಸರು ಈತನ ಸುಳಿವಿಗೆ ಬಲೆ ಬೀಸಿದರು.

    ಎಲ್ಲೆಡೆ ಹುಡುಕಾಟ ನಡೆಸಿ ಎಲ್ಲಿಯೂ ಸಿಗದಾಗ, ಕೊನೆಯದಾಗಿ ಮನೆಗೆ ಹೋದರು. ಅಲ್ಲಿಯೇ ಅಡಗಿ ಕುಳಿತಿದ್ದ ಈ ಭೂಪ. ಅವನನ್ನು ವಾಪಸ್​ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಅವನಿಗಾಗಿ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts