More

    ಬ್ಯಾಂಕ್ ಖಾತೆಗೆ ಏಲಿಯನ್ ಕನ್ನ!

    | ಯಂಕಣ್ಣ ಸಾಗರ್ ಬೆಂಗಳೂರು
    ಬಹುಮಾನದ ಆಸೆ, ಬ್ಯಾಂಕ್ ಅಧಿಕಾರಿ ಸೋಗು, ನವೀಕರಣ ಹೆಸರಿನಲ್ಲಿ ಕರೆ ಮಾಡಿ ಓಟಿಪಿ ಪಡೆದು ಅಥವಾ ಮೊಬೈಲ್​ಗೆ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್ ಖದೀಮರೀಗ, ಹಣ ಲೂಟಿಗೆ ಇನ್ನೊಂದು ತಂತ್ರಗಾರಿಕೆ ಕಂಡುಕೊಂಡಿದ್ದಾರೆ. ಅದೆಂದರೆ, ಏಲಿಯನ್ ಮಾಲ್ವೇರ್ ಮೂಲಕ ಆಂಡ್ರಾಯ್್ಡ ಮೊಬೈಲ್ ಹ್ಯಾಕ್ ಮಾಡಿ ಖಾತೆಗೆ ಕನ್ನ!

    ಆಂಡ್ರಾಯ್ಡ್ ಮೊಬೈಲ್ ಬಳಕೆದಾರರ ಅಂದಾಜು 226 ಬ್ಯಾಂಕಿಂಗ್ ಆಪ್​ಗಳನ್ನು ಗುರಿಯಾಗಿಸಿಕೊಂಡಿರುವ ಸೈಬರ್ ವಂಚಕರು, ಏಲಿಯನ್ ಮಾಲ್ವೇರ್ ಇನ್​ಸ್ಟಾಲ್ ಮಾಡಿಸಿ ವಂಚಿಸುತ್ತಿದ್ದಾರೆ. ಏಲಿಯನ್ ಒಮ್ಮೆ ಮೊಬೈಲ್​ನಲ್ಲಿ ಇನ್​ಸ್ಟಾಲ್ ಆಗಿಬಿಟ್ಟರೆ ಮೊಬೈಲ್​ಗೆ ಬರುವ ಒಟಿಪಿ (ಒನ್ ಟೈಮ್ ಪಾಸ್​ವರ್ಡ್), ಸಂದೇಶಗಳು ಸೇರಿ ಇನ್ನಿತರ ಗೌಪ್ಯ ಮಾಹಿತಿ ಕ್ಷಣಾರ್ಧದಲ್ಲಿ ಸೈಬರ್ ವಂಚಕರ ಕೈ ಸೇರಲಿವೆ. ಈ ಬಗ್ಗೆ ಎಚ್ಚರ ವಹಿಸುವಂತೆ ಸಿಐಡಿ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸೂಚಿಸಿದೆ.

    ಇಂಟರ್​ನೆಟ್ ಬಳಕೆಯಲ್ಲಿ ಮಗ್ನರಾಗಿರುವ ಜನರ ಆಸಕ್ತಿ ಏನೆಂಬ ಮಾಹಿತಿಯನ್ನು ಸೈಬರ್ ಖದೀಮರು ಸಂಗ್ರಹಿಸುತ್ತಿದ್ದಾರೆ. ನಮ್ಮ ಆಸಕ್ತಿದಾಯಕ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಇಂಟರ್​ನೆಟ್ ಬ್ರೌಸರ್​ಗಳಲ್ಲಿ ಪ್ರಕಟಿಸುತ್ತಾರೆ. ಸಂದೇಶ, ಇ-ಮೇಲ್ ಮೂಲಕವೂ ವಿವಿಧ ಆಮಿಷಗಳನ್ನೊಡ್ಡಿ ಲಿಂಕ್ ರೂಪದಲ್ಲಿ ಏಲಿಯನ್ ಮಾಲ್ವೇರ್ ರವಾನಿಸುತ್ತಿದ್ದಾರೆ. ಅನಾಮಿಕ ಸಂದೇಶಗಳಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಲಿಂಕ್ ಒತ್ತಿದರೆ, ಏಲಿಯನ್ ಮಾಲ್ವೇರ್ ಇನ್​ಸ್ಟಾಲ್ ಆಗಲಿದೆ. ಇದು ಮೊಬೈಲ್ ಬಳಕೆದಾರರ ಅರಿವಿಗೂ ಬರುವುದಿಲ್ಲ.

    ನೇರವಾಗಿ ಮೊಬೈಲ್ ನಿರ್ವಹಣೆ: ಕ್ಯೂಆರ್ ಕೋಡ್, ಆನ್​ಲೈನ್ ಲಿಂಕ್ ಹಾಗೂ ವಿವಿಧ ಹೆಸರಿನ ನಕಲಿ ಆಪ್​ಗಳನ್ನು ಡೌನ್​ಲೋಡ್ ಮಾಡಿಸಿ, ಅದರಲ್ಲಿ ಬ್ಯಾಂಕ್ ವಿವರ ನಮೂದಿಸಿಕೊಂಡು ಖಾತೆಗೆ ಕನ್ನ ಹಾಕುತ್ತಿದ್ದರು. ಆದರೀಗ, ಏಲಿಯನ್ ಮಾಲ್ವೇರ್ ಇನ್​ಸ್ಟಾಲ್ ಮಾಡಿಸಿ ನೇರವಾಗಿ ನಿರ್ವಹಣೆ ಮಾಡುತ್ತಾರೆ. ಪ್ರಮುಖವಾಗಿ ಆಂಡ್ರಾಯ್್ಡ ಮೊಬೈಲ್ ಬಳಕೆದಾರರ ಬ್ಯಾಂಕಿಂಗ್ ಆಪ್​ಗಳನ್ನೇ ಟಾರ್ಗೆಟ್ ಮಾಡುವುದರಿಂದ, ಬಳಕೆದಾರರಿಗೆ ಬರುವ ಒಟಿಪಿ ಸೇರಿ ಎಲ್ಲ ಸಂದೇಶಗಳು ಸೈಬರ್ ವಂಚಕರಿಗೂ ಹೋಗಲಿವೆ. ಹೀಗಾಗಿ, ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಎಗರಿಸುತ್ತಾರೆ. ಸುಮಾರು 226 ಆಪ್​ಗಳಿಂದ ಮಾಹಿತಿ ಕದಿಯಬಲ್ಲರು ಎಂಬುದಾಗಿ ಅಂತಾರಾಷ್ಟ್ರೀಯ ಸೈಬರ್ ತಜ್ಞರು ವಿಶ್ಲೇಷಿಸಿದ್ದಾರೆ.

    ಮಾಲ್ವೇರ್​ನಿಂದ ಏನಾಗುತ್ತೆ?

    • ಹೊರಹೋಗುವ ಮತ್ತು ಒಳ ಬರುವ ಸಂದೇಶಗಳಲ್ಲಿನ ಮಾಹಿತಿ ಸೋರಿಕೆ
    • ಮೊಬೈಲ್​ನಲ್ಲಿನ ಕೀಬೋರ್ಡ್ ಇನ್​ಪುಟ್ ಅನಾಮಿಕ ವ್ಯಕ್ತಿ ಬಳಸುತ್ತಾನೆ
    • ಡಿವೈಸ್​ನಲ್ಲಿರುವ ಆಪ್​ಗಳ ಪಟ್ಟಿ, ವಿವರ, ಲೊಕೇಷನ್ ಡೇಟಾ ಕಳವು
    • ಮತ್ತೊಂದು ಡಿವೈಸ್​ನಲ್ಲಿ ಇ-ಮೇಲ್ ಬಳಸಿದರೆ ಹಾಗೂ ಪಾಸ್​ವರ್ಡ್ ಬದಲಾಯಿಸಿದರೆ ಸಿಗುವ ದೃಢಿಕೃತ ಸಂಖ್ಯೆ (ಅಂಥಂಟಿಕೇಷನ್ ನಂಬರ್) ಸೋರಿಕೆ
    • ಮೊಬೈಲ್ ಬಳಕೆಗೆ ಬಾರದಂತೆ ಲಾಕ್ ಆಗುವ ಸಾಧ್ಯತೆ

    ಸೈಬರ್ ಪೊಲೀಸರ ಸಲಹೆ

    • ಅನಾಮಿಕ ಸಂದೇಶಗಳಲ್ಲಿನ ಲಿಂಕ್ ಕ್ಲಿಕ್ ಮಾಡುವುದು, ಬೇರೆವರಿಗೆ ಕಳುಹಿಸುವುದು ಬೇಡ
    • ಆಂಡ್ರಾಯ್ಡ್​ ಸಾಫ್ಟ್​ವೇರ್ ಅಪ್​ಡೇಟ್ ರೀತಿಯಲ್ಲಿ ಬರುವ ಲಿಂಕ್ ಒತ್ತಬೇಡಿ
    • ಮೊಬೈಲ್​ನಲ್ಲಿ ಸೆಟ್ಟಿಂಗ್ ಆಪ್​ಗೆ ಹೋಗಿ ಸಾಫ್ಟ್​ವೇರ್ ಅಪ್​ಡೇಟ್ ಕೊಡುವುದು ಸೂಕ್ತ
    • ಅನಧಿಕೃತ ವೆಬ್​ಸೈಟ್​ನಿಂದ ಆಪ್​ಗಳನ್ನು ಡೌನ್​ಲೋಡ್ ಮಾಡುವುದು ಬೇಡ
    • ಆಂಡ್ರಾಯ್ಡ್​ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್​ನಿಂದ ಆಪ್ ಡೌನ್​ಲೋಡ್ ಬಳಸಿ
    • ಕರೊನಾ ವೈರಸ್ ಬಗ್ಗೆ ಮಾಹಿತಿ ನೀಡುವ ಆಪ್​ಗಳ ಬಳಕೆ ಬಗ್ಗೆ ಎಚ್ಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts