More

    ಗೋಣಹಳ್ಳಿ ಮಾರಮ್ಮನ ರಥೋತ್ಸವ

    ನಂಜನಗೂಡು: ತಾಲೂಕಿನ ಗೋಣಹಳ್ಳಿ ಗ್ರಾಮದ ಆದಿಶಕ್ತಿ ಮಾರಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಉತ್ಸವಮೂರ್ತಿಯ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

    ಚೋಳರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯಗಳು ಸಾಂಗವಾಗಿ ನೆರವೇರಿತು. ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ರಥಕ್ಕೆ ಅಲಂಕಾರಿಕ ಬಟ್ಟೆ, ಬೀಸು ಚಾಮರ, ನಿಂಬೆಹಣ್ಣಿನ ಹಾರ ಹಾಗೂ ವಿವಿಧ ಬಗೆಯ ಹಣ್ಣಿನ ಅಲಂಕಾರದೊಂದಿಗೆ ಸಿಂಗರಿಸಲಾಯಿತು. ಬಳಿಕ ಮಾರಮ್ಮದೇವಿಯ ಉತ್ಸವಮೂರ್ತಿಗೆ ಸಕಲ ಪೂಜಾ ವಿಧಿವಿಧಾನ ನೆರವೇರಿಸಿ ಮಂಗಳ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದ ಚಕ್ರಗಳಿಗೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ಕೊಡಲಾಯಿತು.

    ಪಶ್ವಿಮಾಭಿಮುಖವಾಗಿ ಸಾಗಿದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಸ್ಥಾನಕ್ಕೆ ಮರಳಿತು. ರಥೋತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಭಕ್ತರು ದೇವಿ ದರ್ಶನ ಪಡೆದು ಕೃತಾರ್ಥರಾದರು. ಎಲ್ಲರೂ ಹಣ್ಣು ಧವನ ಎಸೆದು ಭಕ್ತಿ ಪರಕಾಷ್ಠೆ ಮೆರೆದರು.
    ರಥೋತ್ಸವದಲ್ಲಿ ಮಂಗಳವಾದ್ಯ, ನಗಾರಿ ಹಾಗೂ ತಮಟೆ ವಾದನ ಕಳೆಗಟ್ಟಿಸಿತು. ನೆರೆದಿದ್ದ ಜನಸಾಗರ ಜಯಘೋಷದೊಂದಿಗೆ ಜೈಕಾರ ಹಾಕಿ ರಥ ಎಳೆದು ಸಂಭ್ರಮಿಸಿದರು. ರಥ ಸಾಗುವ ಮಾರ್ಗದಲ್ಲಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನಿಂತಿದ್ದರು.
    ರಥೋತ್ಸವಕ್ಕೂ ಮುನ್ನ ಗೋಣಹಳ್ಳಿ ಗ್ರಾಮದ ಹೊರವಲಯದಲ್ಲಿ ಗ್ರಾಮಸ್ಥರು ಸಾಮೂಹಿಕ ಮಡೆ ಆಚರಣೆ ಮಾಡಿ ಮಾರಮ್ಮ ದೇವಿಗೆ ನೈವೇದ್ಯ ಅರ್ಪಿಸಿದರು. ಈ ಹಬ್ಬವನ್ನು ಸುತ್ತಮುತ್ತಲಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆಚರಣೆ ಮಾಡುವುದು ಇಲ್ಲಿನ ವಿಶೇಷವಾಗಿದೆ.

    ನೂಕುನುಗ್ಗಲು: ಆದಿಶಕ್ತಿ ಮಾರಮ್ಮ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಸರತಿ ಸಾಲು ದೇವಾಲಯದ ಆವರಣದ ಹೊರವಲಯದವರೆಗೆ ವಿಸ್ತರಣೆಗೊಂಡಿತು. ಆದರೂ ಭಕ್ತರು ಗಂಟೆಗಟ್ಟಲೇ ನಿಂತು ದರ್ಶನ ಪಡೆದರು. ಇದಕ್ಕೂ ಮುನ್ನ ದೇವಾಲಯದ ಅರ್ಚಕ ವೃಂದ ಮುಂಜಾನೆ ದೇವರಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಂಡರು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

    ಜಾತ್ರೆಗೆ ಆಗಮಿಸಿದ ಭಕ್ತರಿಗೆ ವಿವಿಧ ಸಂಘ ಸಂಸ್ಥೆ ಹಾಗೂ ದಾನಿಗಳು ಮಜ್ಜಿಗೆ, ಪಾನಕ, ಉಪಹಾರ, ಪ್ರಸಾದ ವಿನಿಯೋಗ ಮಾಡಿದರು. ತಾತ್ಕಾಲಿಕವಾಗಿ ತೆರೆದಿದ್ದ ಟೆಂಟ್ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿತ್ತು. ಜನಪದ ಕಲಾವಿದರು ಮಾರಮ್ಮದೇವಿ ಸ್ಮರಣೆ ಮಾಡುವ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಂಜನಗೂಡು, ತಿ.ನರಸೀಪುರ ಮಾರ್ಗವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತ್ಯೇಕ ಸ್ಥಳದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts