More

    ದೊಡ್ಡಹೆಜ್ಜೂರಿನಲ್ಲಿ ರಥೋತ್ಸವ

    ಹನಗೋಡು: ಹೋಬಳಿಯ ದೊಡ್ಡಹೆಜ್ಜೂರಿನ ಶ್ರೀ ವೀರಾಂಜನೇಯ ಸ್ವಾಮಿಯ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

    ರಥೋತ್ಸವಕ್ಕೂ ಮುನ್ನ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಮಧ್ಯಾಹ್ನ 12.05ಕ್ಕೆ ರಥಕ್ಕೆ ಉತ್ಸವ ಮೂರ್ತಿಯನ್ನು ಏರಿಸಲಾಯಿತು. ನಂತರ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಹಾಕುತ್ತಾ ರಥವನ್ನು ಎಳೆದು ದೇವಾಲಯದ ಸ್ವಸ್ಥಾನಕ್ಕೆ ನಿಲ್ಲಿಸಿದರು. ಈ ವೇಳೆ ನವದಂಪತಿಗಳು ಹಣ್ಣು-ದವನ ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು.

    ಮುಂಜಾನೆಯಿಂದಲೇ ದೇವಾಲಯದ ಅರ್ಚಕರು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕ ನಡೆಸಿದರು. ನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿಯನ್ನು ಹೊತ್ತು ಪ್ರದಕ್ಷಿಣೆ ಹಾಕಿದರು.

    ಹರಕೆ ಸಲ್ಲಿಸಿದ ಭಕ್ತರು: ದೇವರಿಗೆ ಹರಕೆ ಹೊತ್ತ ಭಕ್ತರು ಹಿಂದಿನ ದಿನ ಬುಧವಾರ ಜಾತ್ರೆ ಮಾಳದಲ್ಲಿ ಬೀಡುಬಿಟ್ಟಿದ್ದರು. ಗುರುವಾರ ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ಮುಡಿಕೊಟ್ಟು, ಬಾಯಿಬೀಗ ಹಾಕಿಕೊಂಡು ನಡೆದು ಬಂದು ದೇವಾಲಯ ಸುತ್ತ ಉರುಳು ಸೇವೆ ಸಲ್ಲಿಸಿದರು. ನದಿ ದಂಡೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಕೆಲ ಭಕ್ತರು ಮನೆಯಿಂದ ತಿಂಡಿ-ಊಟವನ್ನು ತಂದಿದ್ದರು.

    ಹನಗೋಡು ರೋಟರಿ ಸಂಸ್ಥೆಯ ಪದಾಧಿಕಾರಿಗಳು ಭಕ್ತರಿಗೆ ತರಕಾರಿ ಪಲಾವ್ ಹಾಗೂ ಮುತ್ತೂಟ್ ಪಿನ್‌ಕಾರ್ಪ್ ವತಿಯಿಂದ ಪಾನಕ-ಮಜ್ಜಿಗೆ ವಿತರಿಸಲಾಯಿತು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಶಿವಪ್ರಕಾಶ್, ಪಟ್ಟಣ ಠಾಣೆಯ ಎಸ್‌ಐ ಮಹೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಶಾಸಕ ಎಚ್ ಪಿ.ಮಂಜುನಾಥ್, ಜೆಡಿಎಸ್ ಮುಖಂಡ ಸೋಮಶೇಖರ್, ಎಪಿಎಂಸಿ ಸದಸ್ಯ ಮುದಗನೂರು ಸುಭಾಷ್, ತಾಪಂ ಸದಸ್ಯೆ ಪುಷ್ಪಲತಾ ಗಣಪತಿ, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ದೊಢ್ಡಹೆಜ್ಜೂರು ಗ್ರಾಪಂ ಅಧ್ಯಕ್ಷೆ ರೇಣುಕಾ, ಮಾಜಿ ಅಧ್ಯಕ್ಷರಾದ ದಾ.ರಾ.ಮಹೇಶ್, ದೇವರಾಜ್, ಪಿಡಿಒ ಶಿವಣ್ಣ ಮತ್ತಿತರರು ಭಾಗವಹಿಸಿದ್ದರು. ವಿವಿಧ ಹಾಡಿಯ ಗಿರಿಜನರು ಹೆಚ್ಚಾಗಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಸೇವಾ ಕೇಂದ್ರ ತೆರೆಯಲಾಗಿತ್ತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts