More

    ಬನಶಂಕರಿ ದೇವಿ ಅದ್ದೂರಿ ರಥೋತ್ಸವ

    ಚಿತ್ರದುರ್ಗ: ಸೂರ್ಯಾಸ್ತದ ಸಮಯ ಸಮೀಪಿಸುತ್ತಿದ್ದಂತೆ ಬಾನಂಗಳದಲ್ಲಿ ಕತ್ತಲು ಆವರಿಸಿತು. ರಥದೊಳಗೆ ಪ್ರತಿಷ್ಠಾಪಿಸಿದ್ದ ತಾಯಿ ಬನಶಂಕರಿ ದೇವಿಯ ಮೂರ್ತಿ ಕಂಗೊಳಿಸಿತು. ತೇರನ್ನು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಮಿಂದೆದ್ದರು. ಮೇಲುದುರ್ಗದ ಕಾಮನಬಾಗಿಲು ಬಳಿಯ ಕೋಟೆ ಆವರಣ ಇದಕ್ಕೆ ಸಾಕ್ಷಿಯಾಯಿತು.

    ಇಲ್ಲಿಯ ಬನಶಂಕರಿ ದೇವಿ ದೇಗುಲ ಮುಂಭಾಗ ಶುಕ್ರವಾರ ನೆರವೇರಿದ ದೇವಿಯ ಮಹಾರಥೋತ್ಸವಕ್ಕೆ ನಗರ ಸೇರಿ ತಾಲೂಕಿನ ಹಲವೆಡೆಗಳಿಂದ ಭಕ್ತರ ದಂಡೆ ಹರಿದು ಬಂದಿತ್ತು. ರಥ ಮುಂದೆ ಸಾಗುವ ಕ್ಷಣಕ್ಕಾಗಿ ಗಂಟೆಗೂ ಮುನ್ನವೇ ಆಗಮಿಸಿದ್ದ ಅನೇಕರು ಕಾತುರದಿಂದ ಕಾಯುತ್ತ ನಿಂತಿದ್ದರು.

    ರಥೋತ್ಸವಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ಉರುಮೆ, ತಮಟೆ, ನಗಾರಿ ಸೇರಿ ಮಂಗಳವಾದ್ಯದೊಂದಿಗೆ ರಥದ ಬಳಿಗೆ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಿಗೆ ಎಡೆ ಸಮರ್ಪಿಸಿದ ನಂತರ ರಥ ಎಳೆಯಲು ಅನುವು ಮಾಡಿಕೊಡಲಾಯಿತು. ಸಾವಿರಾರು ಮಂದಿ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಉತ್ಸವದಲ್ಲಿ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

    ಇನ್ನೂ ರಥೋತ್ಸವದ ಅಂಗವಾಗಿ ಬುರುಜನಹಟ್ಟಿಯ ಬನಶಂಕರಿ ದೇವಿಗೆ ತರಕಾರಿ ಅಲಂಕಾರ ಸೇವೆ ಮಾಡಲಾಗಿತ್ತು. ಇಲ್ಲಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಸುಸಜ್ಜಿತ ಉಚ್ಚಾಯದಲ್ಲಿ ಕೂರಿಸಿ ಕೋಟೆಗೆ ಮೆರವಣಿಗೆ ಮೂಲಕ ಭಕ್ತರು ಕರೆತಂದರು. ಉತ್ಸವದ ನಂತರ ಬುರುಜನಹಟ್ಟಿಯ ದೇವಾಂಗ ಸಮಾಜ, ಅನುಪಮ ವಿದ್ಯಾಸಂಸ್ಥೆ ವತಿಯಿಂದ ಭಕ್ತಗಣಕ್ಕೆ ಪ್ರಸಾದ ವಿತರಿಸಲಾಯಿತು.
    ಗುರುವಾರ ದೇವಿಗೆ ಕಂಕಣಧಾರಣೆ, ರಥಕ್ಕೆ ತೈಲಾಭಿಷೇಕ ಸೇವೆ ನೆರವೇರಿದಿತ್ತು. ಜ.7ರಂದು ಕಂಕಣ ವಿಸರ್ಜನೆಯೊಂದಿಗೆ ಈ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

    ವಿಶೇಷಾಲಂಕಾರ
    ರಥದ ಸುತ್ತಲೂ ವಿವಿಧ ವರ್ಣದ ಬಾವುಟಗಳಿಂದ, ಹೂವಿನ ಹಾರಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ದೇಗುಲದಲ್ಲಿ ಅಭಿಷೇಕ ಸೇರಿ ವಿಶೇಷ ಪೂಜೆಗಳು ನಡೆದವು. ದೇಗುಲಕ್ಕೆ ಭೇಟಿ ನೀಡಿದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ಸ್ವೀಕರಿಸಿ ದೇವಿಯ ಮೂರ್ತಿಯನ್ನು ಕಣ್ತುಂಬಿಕೊಂಡರು. ಹೊಂಡದ ಬಾಗಿಲು ಬಳಿ ಇರುವ ಬನಶಂಕರಿ ದೇಗುಲದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts