More

    ಪ್ರಾದೇಶಿಕ ಪಕ್ಷ ಬೆಂಬಲಿಸಿದರೆ ಅನುಕೂಲ

    ಚನ್ನಪಟ್ಟಣ: ನೆರೆಯ ತಮಿಳುನಾಡಿನ ರೀತಿ ರಾಜ್ಯದ ಜನರು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.


    ಇಗ್ಗಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಹಲವು ದಶಕಗಳಿಂದಲೂ ನೆರೆ ರಾಜ್ಯ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿಲ್ಲ. ನಮ್ಮ ರಾಜ್ಯದ ಸಂಸದರು ರಾಜ್ಯದ ಹಿತಕ್ಕಾಗಿ ಸಂಸತ್‌ನಲ್ಲಿ ಎಂದಿಗೂ ಮಾತನಾಡುವುದಿಲ್ಲ. ಆದರೆ, ನಾನು ರಾಜ್ಯದ ಪರವಾಗಿ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಕಾವೇರಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಯಾರೂ ರಾಜ್ಯದ ಪರ ನಿಲ್ಲಲಿಲ್ಲ. ತಮಿಳುನಾಡು ಸಂಸದರು ಕೇಂದ್ರ ಸರ್ಕಾರವನ್ನು ಕಟ್ಟಿಹಾಕಿದ್ದರು. ಬಿಜೆಪಿಯ ದಿ. ಅನಂತ್‌ಕುಮಾರ್ ಕೂಡ ನನ್ನ ಜತೆ ನಿಲ್ಲಲಿಲ್ಲ. ಕಾವೇರಿ ಸೇರಿ ಇಗ್ಗಲೂರು ಜಲಾಶಯ ನಿರ್ಮಾಣಕ್ಕೂ ಯಾರು 1 ರೂಪಾಯಿ ಕೊಟ್ಟಿಲ್ಲ. ಅದು ರೈತರು ಬೆವರು ಸುರಿಸಿ ಕೊಟ್ಟ ಹಣದಲ್ಲಿ ಡ್ಯಾಂ ಕಟ್ಟಿದ್ದೇನೆ. ಈ ಕಾರಣದಿಂದ ಪ್ರಾದೇಶಿಕ ಪಕ್ಷವನ್ನು ಕೈಹಿಡಿದು, ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.

    ನುಡಿದಂತೆ ನಡೆವ ಏಕೈಕ ರಾಜಕಾರಣಿ: ನುಡಿದಂತೆ ನಡೆಯುವ ರಾಜಕಾರಣಿ ದೇಶದಲ್ಲಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಬಡಜನರ ಬಗ್ಗೆ ಕಾಳಜಿ ಇರುವ ಅವರನ್ನು ತಾಲೂಕಿನ ಮಹಾಜನತೆ ಹೆಚ್ಚಿನ ಬಹುಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು. ಚುನಾವಣೆ ಹಿನ್ನೆಲೆ, ಹಲವರು ಸಾಕಷ್ಟು ಭರವಸೆ ನೀಡಬಹುದು. ಆದರೆ, ಬಡವರ್ಗದ ಬಗ್ಗೆ ಚಿಂತನೆ ಮಾಡಿ, ಅವರಿಗಾಗಿ ಯೋಜನೆಗಳನ್ನು ರೂಪಿಸುವ ಕುಮಾರಸ್ವಾಮಿಯಂತಹ ಶಕ್ತಿಯುತ ನಾಯಕನನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಗುಣಗಾನ ಮಾಡಿದರು.

    ಅದ್ದೂರಿ ಸ್ವಾಗತ: ಹೆಲಿಕಾಪ್ಟರ್ ಮೂಲಕ ತಾಲೂಕಿನ ಗಡಿಭಾಗ ಇಗ್ಗಲೂರು ಗ್ರಾಮಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಸಮಾವೇಶಕ್ಕೂ ಮೊದಲು ತಮ್ಮದೇ ಕೊಡುಗೆಯಾದ ಎಚ್.ಡಿ. ದೇವೇಗೌಡ ಬ್ಯಾರೇಜ್ ವೀಕ್ಷಿಸಿದರು. ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಕರಿಯ, ಮುಖಂಡರಾದ ಅಪ್‌ಕಾಮ್ಸ್ ದೇವರಾಜು, ಕುಕ್ಕುರುದೊಡ್ಡಿ ಜಯರಾಮ್, ಗೋವಿಂದನಹಳ್ಳಿ ನಾಗರಾಜು, ಗರಕಹಳ್ಳಿ ಕೃಷ್ಟೇಗೌಡ, ಇ.ತಿ.ಶ್ರೀನಿವಾಸ್, ಡಿಎಂಕೆ ಕುಮಾರ್, ಯಾಲಕ್ಕಿಗೌಡ, ರೇಖಾ ಉಮಾಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts