More

    ಮೋದಿ ಆಡಳಿತದ ಬದಲಾವಣೆ ವಿಶ್ವಕ್ಕೇ ಮಾದರಿ: ಬಿ.ವೈ.ರಾಘವೇಂದ್ರ

    ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರದಿಂದಾಗಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಬದಲಾವಣೆ ವಿಶ್ವಕ್ಕೇ ಮಾದರಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಪಟ್ಟಣದ ವಿದ್ಯಾಧಿರಾಜ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಸಂದಿದ್ದರೂ ಮೋದಿ ನೇತೃತ್ವದಲ್ಲಿ 2014ರ ನಂತರದ 9 ವರ್ಷಗಳಲ್ಲಿ ಆಗಿರುವ ಬದಲಾವಣೆ ಇಡೀ ವಿಶ್ವದ ಗಮನವನ್ನೇ ಸೆಳೆದಿದೆ ಎಂದರು.
    ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಆಗಿರುವ ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ. ಬಿಜೆಪಿ ಎಲ್ಲ ಜಾತಿ, ಧರ್ಮದವರನ್ನೂ ಸಮಾನವಾಗಿ ಕಾಣುತ್ತಿದೆ. ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ನೀಡಿರುವುದು ನಮ್ಮ ಸರ್ಕಾರ ಎಂದು ತಿಳಿಸಿದರು.
    ಕಾಂಗ್ರೆಸ್ಸಿಗರ ಸುಳ್ಳು ಭರವಸೆಯಿಂದಾಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ನಾವು ಮುಂಬರುವ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಮೋದಿ ಈವರೆಗೆ ಒಂದು ಮತ್ತು ಎರಡನೇ ಗೇರ್ ಮಾತ್ರ ಉಪಯೋಗಿಸಿದ್ದಾರೆ. ಮೂರು, ನಾಲ್ಕನೇ ಗೇರ್ ಬಾಕಿಯಿದೆ. ಸಮಾನ ನಾಗರಿಕ ಹಕ್ಕನ್ನು ಕೂಡ ತರಲು ಹೊರಟಿದ್ದಾರೆ ಎಂದರು.

    ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೆಸರೇಳದೆ ಶಿವಮೊಗ್ಗದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದ ಬಗ್ಗೆ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ, ಗಾಂಧೀಜಿ ಹೆಸರಿನ ಪ್ರಶಸ್ತಿಯನ್ನು ಪಡೆದಿರುವ ಈ ನಾಯಕರು 15 ಲಕ್ಷ ರೂ. ಜನರ ಖಾತೆಗೆ ಹಾಕಿಲ್ಲ ಮತ್ತು ಉದ್ಯೋಗ ಸೃಷ್ಟಿಯಾಗಿಲ್ಲ ಎಂಬುದು ಸೇರಿದಂತೆ ಮೋದಿ ಅವರ ಬಗ್ಗೆ ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ಸಿಗರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ ಎಂದರು.
    ಮೋದಿ ಸರ್ಕಾರ ಉದ್ಯೋಗ ಸೃಷ್ಟಿಗೆ ವಿಶೇಷ ಪ್ರಯತ್ನ ಮಾಡಿದೆ. 2023-24ನೇ ಸಾಲಿನಲ್ಲಿ ಆಗಿರುವ ರಫ್ತು ಅಂಕಿ-ಅಂಶದ ಪ್ರಕಾರ 500 ಶತಕೋಟಿ ರೂ. ಮೊತ್ತವನ್ನು ಮುಟ್ಟುವ ಪ್ರಯತ್ನ ಮಾಡಲಾಗಿದೆ. ಪ್ರತಿ ಒಂದು ಬಿಲಿಯನ್ ರಫ್ತು ವಹಿವಾಟಿಗೆ ಸುಮಾರು ಒಂದೂವರೆ ಲಕ್ಷ ಉದ್ಯೋಗ ಸೃಷ್ಟಿಗೂ ಪ್ರಯತ್ನ ನಡೆದಿದೆ ಎಂದು ಬಿ.ವೈ.ರಾಘವೇಂದ್ರ ವಿವರಿಸಿದರು. 2014ಕ್ಕೆ ಮುನ್ನ ದೇಶದಲ್ಲಿ ಕೇವಲ 91,287 ಕಿಮೀ ಹೆದ್ದಾರಿ ಇತ್ತು. ಕಳೆದ 9 ವರ್ಷಗಳಲ್ಲಿ 63.71 ಲಕ್ಷ ಕಿಮೀ ಹೆದ್ದಾರಿ ನಿರ್ಮಾಣವಾಗಿದೆ. ಇದರಿಂದಲೂ ಉದ್ಯೋಗ ಸೃಷ್ಟಿ ನಿರ್ಮಾಣವಾಗಿದೆ. ಶಿವಮೊಗ್ಗ ಜಿಲ್ಲೆಗೆ 12 ಸಾವಿರ ಕೋಟಿ ರೂ. ಅನುದಾನ ಬಂದಿದ್ದು, 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಹಳಿ ಬದಲಿಸುವ ಯೋಜನೆ ಸಹ ಮಂಜೂರಾಗಿದೆ ಎಂದರು.
    ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವುಗಳು ಕಂಕಣಬದ್ಧರಾಗಬೇಕಿದೆ. ದೇಶದ ಪ್ರತಿಯೊಬ್ಬ ಪ್ರಜೆಯ ಮೂಲ ಸೌಕರ್ಯದ ಅಗತ್ಯತೆಯನ್ನು ಮನಗಂಡು ಜನಹಿತ ಕಾರ್ಯದ ಮೂಲಕ ರಾಷ್ಟ್ರೀಯ ಪ್ರಜ್ಞಾವಂತಿಕೆಯನ್ನು ಮೂಡಿಸಿರುವ ಮೋದಿ, ಸ್ವಾಮಿ ವಿವೇಕಾನಂದ ಅವರ ನಂತರ ಜಗತ್ತಿಗೆ ಭಾರತದ ಘನತೆ ಎತ್ತಿ ತೋರಿಸಿದವರು ಎಂದರು.
    ಸುಳ್ಳಿನ ಸರಮಾಲೆಯೊಂದಿಗೆ ರಾಜ್ಯದಲ್ಲಿ ನಿರೀಕ್ಷೆ ಇಲ್ಲದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದೆ. ರೈತರ ಸಮಸ್ಯೆ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಬಜೆಟ್ ಮಂಡಿಸಿದ್ದು 88 ಸಾವಿರ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಾಲದ ಹಣಕ್ಕೆ ಬಡ್ಡಿ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದ ಆರಗ, ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts