More

    ಚಂದ್ರಶಿಕಾರಿಗೆ ಇಸ್ರೋ ಸವಾರಿ; ಚಂದ್ರಯಾನ-3 ಶ್ರೀಹರಿಕೋಟದಿಂದ ಇಂದು ಉಡಾವಣೆ

    ಶ್ರೀಹರಿಕೋಟ: ಚಂದ್ರನ ಕುರಿತ ಹಲವು ಮೊದಲುಗಳನ್ನು ಮೊದಲ ಚಂದ್ರಯಾನದಲ್ಲಿ ಜಗತ್ತಿಗೆ ಬಿತ್ತರಿಸಿದ್ದ ಭಾರತ, ಇದೀಗ ಮತ್ತಷ್ಟು ಪ್ರಥಮಗಳನ್ನು ಸಾಧಿಸಲು ಮೂರನೇ ಬಾರಿಗೆ ಚಂದ್ರನ ಸವಾರಿ ಹೊರಟಿದೆ. ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಗೆ ಗುರುವಾರ ಮಧ್ಯಾಹ್ನದಿಂದ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಉಡಾವಣೆ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ.

    ಇಸ್ರೋದ ಶ್ರೀಹರಿಕೋಟ ನೆಲೆಯಿಂದ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಉಡಾವಣೆ ಆಗಲಿದೆ. ಕ್ಷಣಗಣನೆ ಪ್ರಾರಂಭವಾಗಿರುವ ವಿಡಿಯೋವನ್ನು ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಮೂಲಕ ಇಸ್ರೋ ರೋವರ್ ಚಂದ್ರನ ಮೇಲ್ಮೈಯ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.

    ಭವಿಷ್ಯದ ಯೋಜನೆಗೆ ಮುನ್ನುಡಿ: ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ ಅಂತ್ಯದಲ್ಲಿ ನಡೆಯಲಿದೆ. ಇದು ಯಶಸ್ವಿಯಾದರೆ ಭವಿಷ್ಯದ ಅಂತರಗ್ರಹ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಚಂದ್ರಯಾನ-3 ಮಿಷನ್ ದೇಶೀಯ ಪೊ›ಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಒಳಗೊಂಡಿರುತ್ತದೆ. ಇದು ಅಂತರಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಎಲ್​ವಿಎಂ-3 ಉಡಾಹಕ ಚಂದ್ರಯಾನ ನೌಕೆಯನ್ನು ಜಿಯೋ ಟ್ರಾನ್ಸ್​ಫರ್ ಆರ್ಬಿಟ್​ಗೆ ತಲುಪಿಸಲಿದೆ. ಸಂಕೀರ್ಣ ಕಾರ್ಯಾಚರಣೆಗಳಿಗೆ ಎಲ್​ವಿಎಂ-3 ಉಡಾಹಕ ಬಳಕೆ ಮಾಡಲಾಗುತ್ತದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಉಪಗ್ರಹಗಳನ್ನು ಸಾಗಿಸುವ ಅತಿದೊಡ್ಡ ಮತ್ತು ಭಾರವಾದ ಉಡಾವಣಾ ವಾಹನವಾಗಿದೆ.

    ಚಂದ್ರನ ಭೂಪ್ರದೇಶದಲ್ಲಿ ಈ ರೋವರ್ ಪರ್ಯಟನೆ ಮಾಡಿ, ಹಲವು ಸಂಶೋಧನೆಗಳನ್ನು ನಡೆಸಲಿದೆ. ಅಲ್ಲಿನ ಮಾಹಿತಿ, ದತ್ತಾಂಶಗಳನ್ನು ಇಸ್ರೋ ನಿಯಂತ್ರಣ ಕೇಂದ್ರಕ್ಕೆ ರವಾನೆ ಮಾಡಲಿದೆ. ಒಟ್ಟಾರೆ 600 ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆ ಇದಾಗಿದೆ.

    ಫ್ಯಾಟ್ ಬಾಯ್!: ಜಿಎಸ್​ಎಲ್​ವಿ ಮಾರ್ಕ್ -3 ರಾಕೆಟ್ ಮೂಲಕ ಉಡಾವಣೆ ನಡೆಯಲಿದೆ. ಇದು ಅತಿ ಭಾರವಾದ ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಬಾಹ್ಯಾಕಾಶ ವಿಜ್ಞಾನಿಗಳು ಇದನ್ನು ‘ಫ್ಯಾಟ್ ಬಾಯ್’ ಎಂದು ಕರೆಯುತ್ತಾರೆ. ಉಡಾವಣಾ ತಯಾರಿ ಮತ್ತು ಪ್ರಕ್ರಿಯೆಗಳ ಪೂರ್ವಾಭ್ಯಾಸ ಶ್ರೀಹರಿಕೋಟಾದಲ್ಲಿ ಮಂಗಳವಾರವೇ ಮುಕ್ತಾಯಗೊಂಡಿದೆ.

    ಚಂದ್ರಯಾನ-2 ಏನಾಗಿತ್ತು?: 2019ರಲ್ಲಿ ಚಂದ್ರಯಾನ-2 ಯೋಜನೆ ಕೈಗೊಳ್ಳಲಾಗಿತ್ತು. ಎಲ್ಲ ಪ್ರಕ್ರಿಯೆಗಳೂ ಸರಿಯಾಗಿಯೇ ನಡೆದಿದ್ದವು. ಆದರೆ ಚಂದ್ರನ ಮೇಲೆ ರೋವರ್ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡು ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ.

    ಯೋಜನೆ ಗುರಿ ಏನು?

    • ಲ್ಯಾಂಡರ್​ನಿಂದ ರೋವರ್ ಹೊರಬರುವುದು ಸೇರಿ ವಿವಿಧ ಸಾಮರ್ಥ್ಯ ವಿಶ್ವಕ್ಕೆ ಪ್ರದರ್ಶಿಸುವುದು
    • ಚಂದ್ರನ ಮೇಲ್ಮೈಯಲ್ಲಿ ರೋವರ್​ನ ಸಾಫ್ಟ್ ಲ್ಯಾಂಡಿಂಗ್
    • ರೋವರ್​ನಲ್ಲಿರುವ ವಿವಿಧ ತಾಂತ್ರಿಕ ಸಾಧನಗಳ ಮೂಲಕ ಚಂದ್ರನ ಮೇಲ್ಮೈ ಅಧ್ಯಯನ

    ತಿರುಪತಿಯಲ್ಲಿ ಪೂಜೆ: ಚಂದ್ರಯಾನ-3 ಪ್ರತಿಕೃತಿಯೊಂದಿಗೆ ಇಸ್ರೋ ವಿಜ್ಞಾನಿಗಳ ತಂಡ ಗುರುವಾರ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ಯೋಜನೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿತು. ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಬಟ್ವುಡೇಕರ್ ಸೇರಿ ಹಲವು ವಿಜ್ಞಾನಿಗಳು ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts