More

    ಜಿಟಿಡಿ ಹಣಿಯಲು ದಳಪತಿಗಳ ಕಸರತ್ತು

    *ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುತ್ತಾಟ

    ಅವಿನಾಶ್ ಜೈನಹಳ್ಳಿ

    ಮೈಸೂರು: ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡರನ್ನು ಹಣಿಯಲು ದಳಪತಿಗಳು ಕಸರತ್ತು ಆರಂಭಿಸಿದ್ದು, ಶತಾಯ ಗತಾಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಮುಂದುವರಿಸಲು ಮಾಸ್ಟರ್ ಪ್ಲಾೃನ್ ರೂಪಿಸಿದ್ದಾರೆ.


    ಜಿಲ್ಲೆಯ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಹಾಗೂ ತಮ್ಮ ಪಕ್ಷದ ಆಂತರಿಕ ವಿಚಾರಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಚಾಮುಂಡೇಶ್ವರಿ ವಿಧಾನಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ತಮ್ಮ ಪಕ್ಷದ ಪ್ರಭಾವ ಮುಂದುವರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.


    ವಿಶೇಷವಾಗಿ ತಮ್ಮ ವಿರುದ್ಧ ಸಿಡಿದೆದ್ದು ಪಕ್ಷ ತೊರೆಯಲು ಮುಂದಾಗಿರುವ ಜಿ.ಟಿ.ದೇವೇಗೌಡರಿಗೆ 2023ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯವಾಗಿಯೇ ಟಕ್ಕರ್ ನೀಡಲು ಪ್ಲಾೃನ್ ಮಾಡುತ್ತಿದ್ದಾರೆ. ಈ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಚಾಮುಂ ಡೇಶ್ವರಿ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸುವಂತೆ ಪಕ್ಷದ ಜಿಲ್ಲಾ ಪದಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


    ವಾರಕ್ಕೆ ಒಂದು ಬಾರಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಹಾಗೂ ಬಡಾವಣೆಗಳಿಗೆ ಭೇಟಿ ನೀಡಿ ಪಕ್ಷ ಕಟ್ಟಲು ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಆ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಹೊಸ ಜೋಶ್ ನೀಡಲು ಮುಂದಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿರುವ ದಳಪತಿಗಳು ಎರಡು ತಿಂಗಳ ಅಂತರದಲ್ಲಿ ಕ್ಷೇತ್ರಕ್ಕೆ 8 ಬಾರಿ ಭೇಟಿ ನೀಡಿದ್ದಾರೆ. 20ಕ್ಕೂ ಹೆಚ್ಚು ಗ್ರಾಮ ಹಾಗೂ ಬಡಾವಣೆಗಳಲ್ಲಿ ಓಡಾಟ ನಡೆಸಿದ್ದಾರೆ.


    ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಹೊಸಹುಂಡಿ, ಇಲವಾಲ, ಬೆಳವಾಡಿ, ಹೂಟಗಳ್ಳಿ, ರಮ್ಮನಹಳ್ಳಿಗಳಿಗೆ ಭೇಟಿ ನೀಡಿ, ರೋಡ್ ಷೋ ನಡೆಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಇನ್ನು ಪ್ರತಿ ಬಾರಿ ಮೈಸೂರಿಗೆ ಬಂದಾಗಲೂ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೆ ಸಭೆ ನಡೆಸುತ್ತಿದ್ದಾರೆ. ಇಲ್ಲವೇ, ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.

    ಎಚ್‌ಡಿಕೆ ಅಲ್ಲದೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಕ್ಷೇತ್ರಕ್ಕೆ ಅನೇಕ ಬಾರಿ ಭೇಟಿ ನೀಡಿ, ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ವಾರದ ಹಿಂದಷ್ಟೇ ಹೂಟಗಳ್ಳಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಮತ್ತೆ ಇದೇ 14 ರಂದು ಮೈಸೂರಿಗೆ ಆಗಮಿಸುತ್ತಿರುವ ಅವರು ಚಾಮುಂಡೇಶ್ವರಿ ಕ್ಷೇತ್ರದ ಅನೇಕ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

    ಉತ್ತರಾಧಿಕಾರಿ ಹುಡುಕಾಟವೂ ಜೋರು: ಕ್ಷೇತ್ರದ ಉತ್ತರಾಧಿಕಾರಿಯ ಹುಡುಕಾಟವೂ ದಳಪತಿಗಳಿಂದ ಶುರುವಾಗಿದೆ. ಕ್ಷೇತ್ರದಲ್ಲಿ ಸತತ ಎರಡು ಚುನಾವಣೆಯಲ್ಲೂ ಜೆಡಿಎಸ್ ಗೆಲುವು ದಾಖಲಿಸಿದೆ. ಎರಡು ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಾಸಕ ಜಿ.ಟಿ.ದೇವೇಗೌಡ 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ್ ವಿರುದ್ಧ ಗೆದ್ದಿದ್ದರು. ಅಂತೆಯೇ 2018ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೊಡ್ಡ ಅಂತರದಿಂದ ಸೋಲಿಸಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು.


    2018 ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಗೆಲುವುಗಿಂತಲೂ ತಮ್ಮ ರಾಜಕೀಯ ವೈರಿ, ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯಗೆ ಸೋಲಿನ ರುಚಿ ನೀಡುವುದೇ ದಳಪತಿಗಳ ಉದ್ದೇಶವಾಗಿತ್ತು. ಹಾಗಾಗಿ, ಆ ಚುನಾವಣೆಯಲ್ಲಿ ಜಿಟಿಡಿಗೆ ಪ್ರತಿ ಹಂತದಲ್ಲೂ ದಳಪತಿಗಳು ಸಾಥ್ ನೀಡಿದ್ದರು. ಸ್ವತಃ ಎಚ್‌ಡಿಕೆ ಕ್ಷೇತ್ರದಲ್ಲಿ ಸತತ ಮೂರು ದಿನಗಳ ಕಾಲ ಪ್ರಚಾರ ನಡೆಸಿದ್ದರು.
    ಸದ್ಯ ಜಿಟಿಡಿ ದಳಪತಿಗಳ ಜತೆ ಮುನಿದು ಪಕ್ಷ ತೊರೆಯಲು ಮುಂದಾಗಿದ್ದು, ಸಿದ್ದರಾಮಯ್ಯರ ಸ್ನೇಹ ಬೆಳೆಸುತ್ತಿರುವುದು ದಳಪತಿಗಳ ಕಣ್ಣು ಕೆಂಪಾಗಿಸಿದೆ.

    ಉತ್ತರಾಧಿಕಾರಿಗೆ ಹುಡುಕಾಟ:

    ಕ್ಷೇತ್ರದಲ್ಲಿ ಜಿಟಿಡಿ ಉತ್ತರಾಧಿಕಾರಿಗೆ ಹುಡುಕಾಟ ನಡೆಯುತ್ತಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಯುವ ಜನತಾದಳ ಜಿಲ್ಲಾ ಅಧ್ಯಕ್ಷ ಗಂಗಾಧರ್‌ಗೌಡ, ಪಕ್ಷದ ಮುಖಂಡರಾದ ಬೆಳವಾಡಿ ಶಿವಮೂರ್ತಿ ಸದ್ಯ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಬೀರಿಹುಂಡಿ ಬಸವಣ್ಣ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕುರುಬ ಸಮುದಾಯದ ನಾಯಕರಾಗಿರುವ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿದ್ದಾರೆ.

    ಉಳಿದವರೆಲ್ಲ ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಮಾದೇಗೌಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಪತ್ನಿ ರುಕ್ಮಿಣಿ ಮಾದೇಗೌಡ ಕೂಡ ಎರಡು ಬಾರಿ ಪಾಲಿಕೆ ಸದಸ್ಯರಾಗಿ, ಮೈಸೂರು ಮೇಯರ್ ಆಗಿಯೂ ಕೆಲಸ ಮಾಡಿದ್ದಾರೆ. ತಮ್ಮದೆ ಆದ ವರ್ಚಸ್ಸು ಹೊಂದಿದ್ದಾರೆ. ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಬೆಳವಾಡಿ ಶಿವಮೂರ್ತಿ ಕ್ಷೇತ್ರದಲ್ಲಿ ಅಪಾರ ಹಿಡಿತ ಹೊಂದಿದ್ದಾರೆ. ಇನ್ನು ಗಂಗಾಧರ್‌ಗೌಡ ಸದ್ಯ ಯುವ ಜನತಾದಳ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು.

    ಇವರಲ್ಲದೆ ಹಾಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಅವರ ಆಪ್ತರೊಬ್ಬರು ಅಥವಾ ಬಿಜೆಪಿ ಪಕ್ಷದಲ್ಲಿರುವ ನಾಯಕ ಸಮುದಾಯದ ಪ್ರಭಾವಿ ನಾಯಕರೊಬ್ಬರು ಕೂಡ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


    ಕಾಂಗ್ರೆಸ್‌ನಲ್ಲೂ ಇದ್ದಾರೆ ಆಕಾಂಕ್ಷಿಗಳು:
    ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರಿದರೆ ಕಾಂಗ್ರೆಸ್‌ನಿಂದ ಕ್ಷೇತ್ರದಲ್ಲಿ ಬಹುತೇಕ ಅವರೇ ಅಭ್ಯರ್ಥಿಯಾಗಲಿದ್ದಾರೆ. ಆದರೂ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಸಿದ್ದರಾಮಯ್ಯ ಆಪ್ತ ಮರಿಗೌಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜಿಟಿಡಿ ಕಾಂಗ್ರೆಸ್ ಸೇರಿದರೆ ಕಾಂಗ್ರೆಸ್ ಆಕಾಂಕ್ಷಿಗಳಿಂದ ಎಷ್ಟು ಪ್ರಮಾಣದಲ್ಲಿ ಸಹಕಾರ ದೊರೆಯಲಿದೆ ಎಂಬ ದೊಡ್ಡ ಪ್ರಶ್ನೆ ಮೂಡಿದೆ.


    ಇತ್ತ ಬಿಜೆಪಿ ಟಿಕೆಟ್ ಪಡೆಯಲು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಮಾಜಿ ಎಂಎಲ್‌ಸಿ ಸಿದ್ದರಾಜು, ಜಂಗಲ್ಸ್ ಲಾಡ್ಜ್‌ಸ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ, ಯುವ ಮುಖಂಡ ಅರುಣ್‌ಕುಮಾರ್‌ಗೌಡ ಆಕಾಂಕ್ಷಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts