More

    ಚಾಮುಂಡೇಶ್ವರಿ: ಅರ್ಜಿ ಹಾಕದ ಸಿದ್ದೇಗೌಡರಿಗೆ ಕೈ ಹಿಡಿದ ಅದೃಷ್ಟ

    ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

    ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಣಿಸಿದ್ದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ಈ ಬಾರಿ ಕಾಂಗ್ರೆಸ್ ಪಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಕಣಕ್ಕಿಳಿಸಿದೆ.
    ಕಾಂಗ್ರೆಸ್ ತನ್ನ 2ನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಚಾಮುಂಡೇಶ್ವರಿ ಕ್ಷೇತ್ರದಿಂದ ಮೈಮುಲ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದೇಗೌಡ ಅವರಿಗೆ ಟಿಕೆಟ್ ಖಚಿತಪಡಿಸಿದೆ.

    ಇತರ ಆಕಾಂಕ್ಷಿಗಳಿಗೆ ನಿರಾಶೆ

    ಚಾಮುಂಡೇಶ್ವರಿ ಸಿದ್ದರಾಮಯ್ಯ ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕ್ಷೇತ್ರ. ಈ ಸಲ ಇಲ್ಲಿ ತನ್ನ ಅಭ್ಯರ್ಥಿ ಗೆಲುವಿಗಾಗಿ ಪಣ ತೊಟ್ಟಿರುವ ಕಾಂಗ್ರೆಸ್ ಇತ್ತೀಚೆಗೆಷ್ಟೇ ಅನ್ಯ ಪಕ್ಷದಿಂದ ಬಂದಿರುವ ಸಿದ್ದೇಗೌಡರಿಗೆ ಮಣೆ ಹಾಕಿದೆ. ಬಹಳ ವರ್ಷಗಳಿಂದ ಸಿದ್ದರಾಮಯ್ಯ ಅವರೊಂದಿಗೆ ಒಡನಾಟ ಹೊಂದಿದ್ದ ಮತ್ತು ಪಕ್ಷದ ಕೆಲಸ ಮಾಡಿಕೊಂಡು ಬಂದಿದ್ದ ಇತರ ಆಕಾಂಕ್ಷಿಗಳಿಗೆ ಇದೀಗ ನಿರಾಶೆಯಾಗಿದೆ.

    ಅರ್ಜಿ ಹಾಕದಿದ್ದರೂ ಮಣೆ

    ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ದೂರವಾದ ಬಳಿಕ ಆಕಾಂಕ್ಷಿಗಳು ಚಾಮುಂಡೇಶ್ವರಿ ಕ್ಷೇತ್ರದ ಕೈ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಸ್ಪರ್ಧೆ ಮಾಡಲು ಅವಕಾಶ ನೀಡುವಂತೆ 8 ಜನರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ ಅರುಣ್‌ಕುಮಾರ್, ಜಿಪಂ ಮಾಜಿ ಸದಸ್ಯರಾದ ಕೂರ್ಗಳ್ಳಿ ಮಹದೇವ, ಲೇಖಾ ವೆಂಕಟೇಶ್, ಮುಖಂಡ ರಾಕೇಶ್ ಪಾಪಣ್ಣ, ಸ್ಟೀಲ್ ಉದ್ಯಮಿ ಕೃಷ್ಣಕುಮಾರ್ ಸಾಗರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ನಿರ್ದೇಶಕ ಮಲ್ಲಹಳ್ಳಿ ಮಹದೇವಸ್ವಾಮಿ ಟಿಕೆಟ್ ಬಯಸಿದ್ದರು. ಇವರ‌್ಯಾರಿಗೂ ಟಿಕೆಟ್ ಸಿಕ್ಕಿಲ್ಲ ಎಂಬುದೇ ಅಚ್ಚರಿ. ಆದರೆ, ಅರ್ಜಿಯನ್ನೂ ಹಾಕದ ಸಿದ್ದೇಗೌಡರಿಗೆ ಅದೃಷ್ಟ ಒಲಿದಿದೆ.


    ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ತೊಡೆ ತಟ್ಟಿ ಈಚೆಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರಿಕೊಂಡಿರುವ ಸಿದ್ದೇಗೌಡರಿಗೆ ಅವಕಾಶ ದೊರೆತಿದೆ. ಇದು ಹುಬ್ಬೇರುವಂತೆ ಮಾಡಿದೆ. ಇವರು ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆಗಾಗಲೇ ಅರ್ಜಿ ಸಲ್ಲಿಕೆ ಗಡುವು ಮುಗಿದಿತ್ತು. ಆದರೆ, ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳನ್ನು ಬಿಟ್ಟು, ಅರ್ಜಿಯನ್ನೇ ಹಾಕದ ಇವರ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ಟಿಕೆಟ್ ನೀಡಿದೆ.

    ಜಾತಿ ಆಧಾರದ ಮೇಲೆ ಆಯ್ಕೆ

    ಕಳೆದ ಬಾರಿ ಸೋಲಿನ ಸೇಡನ್ನು ಈ ಸಲ ಚುಕ್ತಾ ಮಾಡಲು ಸಿದ್ದರಾಮಯ್ಯ ಶಪಥ ಮಾಡಿದ್ದಾರೆ. ಅದಕ್ಕಾಗಿ ಜಿಟಿಡಿಯನ್ನು ಹೇಗಾದರೂ ಮಾಡಿ ಮಣ್ಣುಮುಕ್ಕಿಸಬೇಕೆಂದಿರುವ ಅವರು, ಅಳೆದೂ ತೂಗಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಸಿದ್ದೇಗೌಡ ಮತ್ತು ಜಿಟಿಡಿ ಒಂದು ಕಾಲದ ಒಡನಾಡಿಗಳು. ಜಿಟಿಡಿ ಗೆಲುವಿಗೆ ನೀರೆರೆದವರಲ್ಲಿ ಸಿದ್ದೇಗೌಡ ಒಬ್ಬರು. ಜತೆಗೆ, ಒಕ್ಕಲಿಗ ಸಮುದಾಯದವರು.
    ಜಿ.ಟಿ.ದೇವೇಗೌಡ ಅವರನ್ನು ಸೋಲಿಸಲು ಒಕ್ಕಲಿಗ ಸಮಾಜದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಪಕ್ಷದ ಲೆಕ್ಕಾಚಾರವೇ ಸಿದ್ದೇಗೌಡ ಅವರನ್ನು ಕೈಹಿಡಿದಿದೆ. ಚಾಮುಂಡೇಶ್ವರಿಯಲ್ಲಿ ನಿರ್ಣಾಯಕ ಮತದಾರರಾದ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನೇ ನಿಲ್ಲಿಸಲು ನಿರ್ಧರಿಸುವ ಮೂಲಕ ಜೆಡಿಎಸ್ ಮತದ ಬುಟ್ಟಿಗೆ ಈ ಸಲ ಕಾಂಗ್ರೆಸ್ ಕೈ ಹಾಕಿದೆ.

    ಮತ ಗಳಿಕೆ ಲೆಕ್ಕಾಚಾರ:
    ಜಯಪುರ ಹೋಬಳಿ ಮೇಲೆ ಸಿದ್ದೇಗೌಡರಿಗೆ ಹಿಡಿತವಿದೆ. ಕ್ಷೇತ್ರದ ಇಲವಾಲ, ಕಸಬಾ ಸೇರಿದಂತೆ ಇತರ ಹೋಬಳಿ ಮತಗಳನ್ನು ಹೆಚ್ಚುವರಿಯಾಗಿ ಪಡೆದರೂ ಜಯದ ಗೆರೆಯನ್ನು ಸುಲಭವಾಗಿ ದಾಟಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಈ ಎಲ್ಲ ಹಿನ್ನೆಲೆಯನ್ನು ಗಮನಿಸಿ ಇವರಿಗೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

    ತಂತ್ರಕ್ಕೆ ಪ್ರತಿತಂತ್ರ:
    ಇತ್ತೀಚೆಗೆ ನಗರದಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಮರೀಗೌಡ ಸೇರಿದಂತೆ ಇತರ ಆಕಾಂಕ್ಷಿಗಳ ಮನವೊಲಿಸಿದ್ದರು. ಆಗಲೇ ಮಾವಿನಹಳ್ಳಿ ಸಿದ್ದೇಗೌಡಗೆ ಟಿಕೆಟ್ ದೊರೆಯುವುದು ಖಚಿತವಾಗಿತ್ತು. ಬಳಿಕ ಇವರೆಲ್ಲ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪ್ರಚಾರವನ್ನೂ ಶುರು ಮಾಡಿದ್ದರು. ಜಿಟಿಡಿ ವಿರುದ್ಧ ಸಿದ್ದೇಗೌಡ ಅವರನ್ನು ನಿಲ್ಲಿಸುವ ಮೂಲಕ ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎಂಬ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ.

    ಬಿಜೆಪಿಯಿಂದ ಯಾರು?: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಮೂವರು ಆಕಾಂಕ್ಷಿಗಳಿದ್ದು, ಯಾರನ್ನು ಕಣಕ್ಕೆ ಇಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

    2 ಕಡೆ ಬಿಕ್ಕಟ್ಟು:
    ಜಿಲ್ಲೆಯ 11 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್ ಇನ್ನೂ ಪ್ರಕಟಿಸಿಲ್ಲ. ಚಾಮರಾಜ, ಕೃಷ್ಣರಾಜ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಕಾಯ್ದಿಟ್ಟಿದೆ.

    ಚಾಮರಾಜದಲ್ಲಿ ಟಿಕೆಟ್ ವಂಚತರಿಗೆ ಗಾಳ:
    ಚಾಮರಾಜ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಶಾಸಕ ವಾಸು, ಮುಖಂಡ ಹರೀಶ್‌ಗೌಡ ನಡುವೆ ತೀವ್ರ ಪೈಪೋಟಿ ಇದೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೈತಪ್ಪಿದರೂ ಬಂಡಾಯದ ಬಿಸಿ ತಟ್ಟಬಹುದು. ಜತೆಗೆ, ಟಿಕೆಟ್ ವಂಚಿತರಿಗೆ ಜೆಡಿಎಸ್ ಗಾಳ ಹಾಕಲು ಕಾದು ಕುಳಿತಿದೆ. ಆದ್ದರಿಂದ ನಿರ್ಧಾರ ಪ್ರಕಟಿಸಲು ವಿಳಂಬ ಮಾಡಲಾಗುತ್ತಿದೆ.

    ಕೃಷ್ಣರಾಜದಲ್ಲಿ ಕಗ್ಗಂಟು:
    ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪ್‌ಕುಮಾರ್, ಮುಖಂಡ ಎನ್.ಎಂ.ನವೀನ್‌ಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಕುರುಬ ಸಮುದಾಯದ ಎಂ.ಕೆ.ಸೋಮಶೇಖರ್ ಅವರಿಗೆ ಟಿಕೆಟ್ ನೀಡಬೇಕೋ ಅಥವಾ ವೀರಶೈವ ಲಿಂಗಾಯತ ಸಮಾಜದವರಿಗೆ ನೀಡಬೇಕೋ ಎಂಬ ಗೊಂದಲ ಸೃಷ್ಟಿಯಾಗಿದೆ. ಇದು ಟಿಕೆಟ್ ಹಂಚಿಕೆಗೆ ಕಗ್ಗಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts