More

    ಜಿಲ್ಲೆಯ ಹಲವೆಡೆ ಭರ್ಜರಿ ಮಳೆ

    ಚಾಮರಾಜನಗರ: ತಮಿಳುನಾಡಿನ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಸೋಮವಾರ ಮಧ್ಯಾಹ್ನ ಭರ್ಜರಿ ಮಳೆಯಾಯಿತು.

    ಜಿಲ್ಲೆಯ ಚಾಮರಾಜನಗರ, ಯಳಂದೂರು, ಸಂತೇಮರಹಳ್ಳಿ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇನ್ನಿತರೆ ಕಡೆಗಳಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಮಳೆ ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ಎಡಬಿಡದೇ ಸುರಿಯಿತು.

    ನಗರದಲ್ಲಿ ಬೆಳಿಗ್ಗೆಯಿಂದಲೇ ದಟ್ಟವಾದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಬೆಳಿಗ್ಗೆಯಿಂದಲೇ ಸಾಕಷ್ಟು ಬಾರಿ ತುಂತುರು ಮಳೆ ಸುರಿಯುತ್ತಲೇ ಇತ್ತು. ಮಧ್ಯಾಹ್ನದ ವೇಳೆಗೆ ಭರ್ಜರಿಯಾಗಿ ಮಳೆ ಸುರಿಯಿತು. ಪರಿಣಾಮವಾಗಿ ನಗರದ ದೊಡ್ಡಂಗಡಿ, ಚಿಕ್ಕಂಗಡಿಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಸಂಪಿಗೆ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ವಾಹನ ಚಾಲಕರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಪ್ರಮುಖ ರಸ್ತೆಗಳು ಹಾಗೂ ಚರಂಡಿಗಳು ನೀರಿನಿಂದ ಜಲಾವೃತವಾಗಿತ್ತು. ತಗ್ಗುಪ್ರದೇಶಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಯಿತು.

    ಡಿಡೀರನೆ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಹಾಗೂ ಬೀದಿಬದಿಯ ವ್ಯಾಪಾರಿಗಳು ಕೆಲಕಾಲ ಕಿರಿಕಿರಿ ಅನುಭವಿಸಿದರು. ಜೋರು ಮಳೆಯ ನಂತರವೂ ಕೆಲವು ಸಮಯ ಜಿಟಿಜಿಟಿ ಮಳೆ ಶುರುವಾಯಿತು. ಇದರಿಂದಾಗಿ ಜನ-ಜೀವನ ಅಸ್ತವ್ಯಸ್ತವಾಯಿತು. ಜನರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಿಂದ ತಪ್ಪಿಸಿಕೊಳ್ಳಲು ಛತ್ರಿಗಳ ಮೊರೆ ಹೋದರು. ಅದಲ್ಲದೇ ಚಂದಕವಾಡಿ, ಸಂತೇಮರಹಳ್ಳಿ ಹಾಗೂ ಇನ್ನಿತರೆ ಗ್ರಾಮೀಣ ಭಾಗದಲ್ಲೂ ಸುರಿದ ಭರ್ಜರಿ ಮಳೆಯಿಂದಾಗಿ ಜನ-ಜಾನುವಾರುಗಳು ಸಮಸ್ಯೆ ಅನುಭವಿಸುವಂತಾಯಿತು.

    ರೈತರಲ್ಲಿ ಮುಖದಲ್ಲಿ ಮಂದಹಾಸ:
    ಕಳೆದ ವಾರದಿಂದ ಸತತವಾಗಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಯಿಂದಾಗಿ ರೈತರ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ. ಆದರೆ ಮಳೆಯಾಶ್ರಿತ ಪ್ರದೇಶದ ರೈತರಲ್ಲಿ ಈ ಮಳೆ ಮಂದಹಾಸವನ್ನು ಉಂಟುಮಾಡಿದ್ದು, ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿದ್ದಾರೆ. ಮೊದಲ ದಿನದ ಮಳೆಗೆ ಜಮೀನನ್ನು ಉಳುಮೆಮಾಡಿ ಸಿದ್ಧ ಪಡಿಸಿಕೊಂಡಿದ್ದು, ಸತತವಾಗಿ ಮಳೆ ಸುರಿಯುತ್ತಿರುವುದರಿಂದ ರೈತರಲ್ಲಿ ಹರ್ಷವನ್ನು ಉಂಟುಮಾಡಿದೆ. ಕೃಷಿ ಇಲಾಖೆಯೂ ಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದ್ದು, ಬಿತ್ತನೆಗೆ ರೈತರು ಸಿದ್ಧಮಾಡಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts