More

    ಗಡಿ ಜಿಲ್ಲೆಯಲ್ಲಿ ತ್ರಿಮೂರ್ತಿಗಳ ನಿರ್ಗಮನ

    ಗಡಿ ಜಿಲ್ಲೆಯಲ್ಲಿ ತ್ರಿಮೂರ್ತಿಗಳ ನಿರ್ಗಮನ

    ಚಾಮರಾಜನಗರ: ಮೌಲ್ಯಯುತ ರಾಜಕಾರಣ, ಪ್ರಬುದ್ಧ ರಾಜಕಾರಣಿಗಳನ್ನು ಕಂಡಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಒಬ್ಬರ ನಂತರ ಮತ್ತೊಬ್ಬರು ನಿರ್ಗಮನದಿಂದಾಗಿ ರಾಜಕೀಯ ಕ್ಷೇತ್ರ ಅನಾಥವಾಗಿದೆ.

    ಇತ್ತೀಚಿನ ಕೆಲ ವರ್ಷಗಳನ್ನು ಗಮನಿಸಿದಾಗ ಜಿಲ್ಲೆಯ ಪ್ರಭಾವಿ ನಾಯಕರು ನಿಧನರಾದರು. ಅವರಲ್ಲಿ ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಹಠಾತ್ ಸಾವು ಜಿಲ್ಲೆಯ ಪಾಲಿಗೆ ನೋವುಂಟು ಮಾಡಿತು. 2017ರ ಜನವರಿ 3ರಂದು ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದಾಗ ಹೃದಯಾಘಾತವಾಗಿ ಎಚ್.ಎಸ್.ಮಹದೇವಪ್ರಸಾದ್ ಮೃತಪಟ್ಟರು. ಈ ಆಘಾತವನ್ನು ಮತ್ತೆ ಕಾರ್ಯಕರ್ತರು ಆರ್.ಧ್ರುವನಾರಾಯಣ ಅವರ ಸಾವಿನಲ್ಲಿ ಕಂಡರು. 2023ರ ಮಾ.11ರ ಬೆಳಗ್ಗೆ ಧ್ರುವ ಸಾವು ಸುನಾಮಿಯಂತೆ ಅಪ್ಪಳಿಸಿತ್ತು. ಹಿರಿಯ ನಾಯಕರನ್ನು ಕಳೆದುಕೊಂಡ ಸೂತಕದ ಮನೆಯಲ್ಲಿ ದೊಡ್ಡಣ್ಣನಂತಿದ್ದ ಸ್ವಾಭಿಮಾನಿ ರಾಜಕಾರಣಿ, ಸಂಸದ ವಿ.ಶ್ರೀನಿವಾಸಪ್ರಸಾದ್ ನಿರ್ಗಮನ ರಾಜಕೀಯ ಕ್ಷೇತ್ರದಲ್ಲಿ ಒಂಟಿತನ ಉಳಿಸಿದೆ.

    ಗಡಿ ಜಿಲ್ಲೆಯಲ್ಲಿ ತ್ರಿಮೂರ್ತಿಗಳ ನಿರ್ಗಮನ

    ಹಿರಿಯರಿಲ್ಲದ ಮನೆ:
    ಹಿರಿಯ ರಾಜಕಾರಣಿಗಳನ್ನು ಕಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ದಿನ ಕಳೆದಂತೆ ಹಿರಿತನ ಕಣ್ಮರೆಯಾಗುತ್ತಿದೆ. ಅನುಭವಿ ರಾಜಕಾರಣಿಗಳಾಗಿದ್ದ ಎಚ್.ಎಸ್.ಮಹದೇವಪ್ರಸಾದ್, ಆರ್.ಧ್ರುವನಾರಾಯಣ ನಂತರ ವಿ.ಶ್ರೀನಿವಾಸಪ್ರಸಾದ್ ಸಾವು ಶೂನ್ಯಭಾವ ಆವರಿಸುವಂತೆ ಮಾಡಿದೆ. ದಿಗ್ಗಜ ನಾಯಕರ ಮಹಾ ನಿರ್ಗಮನದ ಬಳಿಕ ಕೆಲವೇ ಕೆಲ ಹಿರಿಯ ನಾಯಕರು ಕಾಣಸಿಗುತ್ತಿದ್ದಾರೆ. ಇವರೆಲ್ಲರಿಗೂ ಮಾರ್ಗದರ್ಶಕರಂತಿದ್ದ ಹಿರಿಯ ಮುತ್ಸದ್ದಿಗಳ ಸಾವು ತುಂಬಲಾಗದ ನಷ್ಟವನ್ನುಂಟು ಮಾಡಿದೆ.
    ರಾಜಕೀಯಕ್ಕೆ ಯುವಕರು ಬರಬೇಕು ಎನ್ನುವಂತೆಯೇ ಹಿರಿಯರೂ ಇರಬೇಕು. ಸಚ್ಚಾರಿತ್ರೃದ ರಾಜಕಾರಣವನ್ನು ಹಿರಿಯರಿಂದ ಕಿರಿಯರು ಕಲಿಯಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಹಿರಿಯ ನಾಯಕರು ಹಾಕುತ್ತಿದ್ದ ಶ್ರಮದ ಬಗ್ಗೆ, ಚುನಾವಣೆ ಸಂದರ್ಭದಲ್ಲಿ ಹಾಕುತ್ತಿದ್ದ ರಾಜಕೀಯ ಪಟ್ಟುಗಳನ್ನು ತಿಳಿಸಲು ಹಿರಿಯ ನಾಯಕರ ಮಾರ್ಗದರ್ಶನ ಅಗತ್ಯವಿತ್ತು.
    ಎಚ್.ಎಸ್.ಮಹದೇವಪ್ರಸಾದ್, ಆರ್.ಧ್ರುವನಾರಾಯಣ, ವಿ.ಶ್ರೀನಿವಾಸಪ್ರಸಾದ್‌ಗೆ ಅಪಾರ ಬೆಂಬಲಿಗರ ವರ್ಗವಿತ್ತು. ಅವರ ಅನುಪಸ್ಥಿತಿ ಈಗಲೂ ಇದೆ. ಈ ಅಭಿಮಾನಿಗಳಲ್ಲಿ ಕೆಲವರು ನಿರೀಕ್ಷೆಗೂ ಮೀರಿ ಬೆಳೆದಿದ್ದಾರೆ. ಇವರಿಗೆಲ್ಲ ತಮ್ಮ ನೆಚ್ಚಿನ ನಾಯಕನ ನಿಧನ ಆಘಾತ ತಂದಿರುವುದರಲ್ಲದೆ, ರಾಜಕೀಯವಾಗಿ ಕಂಡುಕೊಂಡಿದ್ದ ನೆಲೆಯಲ್ಲಿ ಭವಿಷ್ಯದ ಚಿಂತೆ ಆವರಿಸಿದೆ.


    ಪ್ರಸಾದ್ ಬೆಂಬಲಿಗರ ನಿರ್ಧಾರ:
    ವಿ.ಶ್ರೀನಿವಾಸಪ್ರಸಾದ್ ಅನುಪಸ್ಥಿತಿಯಲ್ಲಿ ತಮ್ಮ ಮುಂದಿನ ಭವಿಷ್ಯ ಕಂಡುಕೊಳ್ಳಲು ಈಗಾಗಲೇ ಕೆಲವರು ನಿರ್ಧಾರ ಕೈಗೊಂಡಿದ್ದಾರೆ. ಮಾ.17ರಂದು ಮೈಸೂರಿನಲ್ಲಿ ವಿ.ಶ್ರೀನಿವಾಸಪ್ರಸಾದ್ ರಾಜಕೀಯ ನಿವೃತ್ತಿ ೋಷಣೆ ಮಾಡಿದ್ದರು. ಇದಾದ ಬಳಿಕ ಬಂದ ಲೋಕಸಭೆ ಚುನಾವಣೆ ಹೊತ್ತಲ್ಲಿ ಪ್ರಸಾದ್ ಅವರ ಕೆಲವು ಬೆಂಬಲಿಗರು, ಕುಟುಂಬದ ಕೆಲವು ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಎಚ್.ಎಸ್.ಮಹದೇವಪ್ರಸಾದ್ ನಿಧನರಾದಾಗ ಅವರ ಅವರ ಬೆಂಬಲಿಗರಿಗೆ ಪತ್ನಿ ಗೀತಾ ಮಹದೇವಪ್ರಸಾದ್ ನಂತರ ಪುತ್ರ ಎಚ್.ಎಂ.ಗಣೇಶ್‌ಪ್ರಸಾದ್ ಬೆಂಬಲವಾಗಿ ನಿಲ್ಲುತ್ತಾರೆಂದು ಗೊತ್ತಿತ್ತು. ಅದಕ್ಕೆ ತಕ್ಕಂತೆಯೇ ಪಕ್ಷವೂ ಅವರಿಗೆ ಸ್ಪಂದಿಸಿತ್ತು. ನಂಜನಗೂಡು ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದಾಗ ಆರ್.ಧ್ರುವನಾರಾಯಣ ಮೃತಪಟ್ಟರು. ಇವರ ಪುತ್ರ ದರ್ಶನ್ ಧ್ರುವನಾರಾಯಣ್‌ಗೆ ಪಕ್ಷ ಟಿಕೆಟ್ ನೀಡಿತು. ಧ್ರುವ ಬೆಂಬಲಿಗರು ದರ್ಶನ್ ಇರುವ ಆಶಾಭಾವ ಉಳಿಸಿಕೊಂಡರು.

    ಆವರಿಸಿದ ಶೂನ್ಯಭಾವ:
    ವಿ.ಶ್ರೀನಿವಾಸಪ್ರಸಾದ್ ನಿಧನದಿಂದಾಗಿ ಜಿಲ್ಲೆಯಲ್ಲಿ ಶೂನ್ಯಭಾವ ಆವರಿಸಿದೆ. ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ೋಷಣೆ ಮಾಡಲಾಗಿತ್ತು. ಪ್ರಸಾದ್ ಸಾವಿನ ಬೇಸರದಲ್ಲಿದ್ದ ಜನರು ಅಲ್ಲಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದರು. ನುಡಿ ನಮನ ಸಲ್ಲಿಸಿ ಹಿರಿಯ ನಾಯಕನನ್ನು ಸ್ಮರಿಸಿದರು. ಮೈಸೂರಿಗೆ ತೆರಳಿ ಪಾರ್ಥಿವ ಶರೀರದ ದರ್ಶನ ಪಡೆದು ಕಂಬನಿ ಮಿಡಿದರು. ಅಂತ್ಯಕ್ರಿಯೆ ಭಾಗವಹಿಸಿದ್ದ ಹಲವರು ಮರಳಿ ಜಿಲ್ಲೆಗೆ ಆಗಮಿಸಿ ಬೇಸರ ತೋಡಿಕೊಂಡರು. ಪ್ರಸಾದ್ ಅವರೊಂದಿಗಿದ್ದ ತಮ್ಮ ಒಡನಾಟ ನೆನೆದು ಭಾವುಕರಾದರು.

    ಖಾಲಿ ಸಂತೆಯಂತಾಗಿದ್ದ ಅಖಾಡ:
    ದಿಗ್ಗಜ ನಾಯಕರು ಕಣಕ್ಕಿಳಿಯದ ಕಾರಣ ಈ ಬಾರಿ ಲೋಕಸಭೆ ಚುನಾವಣೆಯೇ ಖಾಲಿ ಸಂತೆಯಂತೆ ಕಾಣುತ್ತಿತ್ತು. ಚಾಮರಾಜನಗರ ಲೋಕಸಭೆ ಚುನಾವಣಾ ಕಣದಲ್ಲಿ ಪ್ರಭಾವಿ ನಾಯಕರು ಅಖಾಡಕ್ಕಿಳಿದು ಹೋರಾಟ ಮಾಡುತ್ತಿದ್ದರು. ಧ್ರುವನಾರಾಯಣ ಸ್ಪರ್ಧಿಸಿದ್ದ ಹಿಂದಿನ ಚುನಾವಣೆಯನ್ನು ಜನರು ನೆನಪು ಮಾಡಿಕೊಳ್ಳುತ್ತಿದ್ದರು. ವಿ.ಶ್ರೀನಿವಾಸಪ್ರಸಾದ್ ಚುನಾವಣೆಗೆ ನಿಂತಾಗ ಇದ್ದ ಕಾವನ್ನು ಸ್ಮರಿಸುತ್ತಿದ್ದರು. ಈ ಸಲ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಸುನೀಲ್‌ಬೋಸ್ ಮತ್ತು ಬಿಜೆಪಿಯಿಂದ ಅಖಾಡಕ್ಕಿಳಿದಿದ್ದ ಎಸ್.ಬಾಲರಾಜ್ ಲೋಕಸಭೆ ಚುನಾವಣೆ ಕಣಕ್ಕೆ ಹೊಸಬರು. ಹೀಗಾಗಿ ಹಿಂದಿನ ಚುನಾವಣೆಗಳ ಬೆಳವಣಿಗೆಗಳು, ರಂಗೇರಲು ಕಾರಣವಾಗಿದ್ದ ವಿಚಾರಗಳನ್ನು ಜನರು ನೆನಪು ಮಾಡಿಕೊಂಡು ಎರಡೂ ಚುನಾವಣೆಗಳ ನಡುವಿನ ವ್ಯತ್ಯಾಸ ಹೇಳುತ್ತಿದ್ದರು.

    ಬಿಜೆಪಿಗೆ ಮರೆಯಲಾಗದ ಸಾಧನೆ:ವಿ.ಶ್ರೀನಿವಾಸಪ್ರಸಾದ್ ಗೆಲುವನ್ನು ಬಿಜೆಪಿ ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಒಮ್ಮೆಯೂ ಗೆಲ್ಲಲಾಗದ ಬಿಜೆಪಿಗೆ ವಿ.ಶ್ರೀನಿವಾಸಪ್ರಸಾದ್ ವಿಜಯಮಾಲೆ ತೊಡಿಸಿದ್ದರು. 2019ರಲ್ಲಿ ತಮ್ಮನ್ನು ಕಂದಾಯ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಪ್ರಸಾದ್ ಬೇಸರಗೊಂಡು ಕಾಂಗ್ರೆಸ್ ತೊರೆದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ವಾಭಿಮಾನದ ಕಹಳೆ ಮೊಳಗಿಸಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋತರು. 2019ರ ಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎರಡು ಬಾರಿ ಗೆದ್ದಿದ್ದ ಆರ್.ಧ್ರುವನಾರಾಯಣ ಅವರ ಹ್ಯಾಟ್ರಿಕ್ ಜಯಕ್ಕೆ ಅಡ್ಡಿಯಾದರು. ಚುನಾವಣೆಯಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts