More

    ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಿದ್ದೆ

    ಚಾಮರಾಜನಗರ: ನಾನು ಪ್ರಾಮಾಣಿಕವಾಗಿ ಬಿಎಸ್ಪಿ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಬೇರೆಯವರಿಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಮಲ್ ನಾಗರಾಜು ತಿರುಗೇಟು ನೀಡಿದರು.

    ಬಿಎಸ್ಪಿ ಜಿಲ್ಲಾಧ್ಯಕ್ಷ ನಾಗಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ ಮತ್ತು ಇತರರಿಗೆ ನನ್ನ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಪಕ್ಷದ ಹೆಸರಿನಲ್ಲಿ ಐದಾರು ಜನರು ಶ್ರೀಮಂತರಾಗುತ್ತಿದ್ದಾರೆ. ಇಲ್ಲಿ ವೈಯಕ್ತಿಕ ಲಾಭ ಪಡೆಯುವ ಹುನ್ನಾರ ನಡೆಯುತ್ತಿರುವುದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕೊಳ್ಳೇಗಾಲದಲ್ಲಿ ಪಕ್ಷವನ್ನು ಕಟ್ಟಿ 1999ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮುಳ್ಳೂರು ಶಿವಮಲ್ಲು ಅವರನ್ನು ಕಣಕ್ಕಿಳಿಸಲಾಯಿತು. ತದನಂತರ ಜಿಲ್ಲಾ ಸಮಿತಿ ಮಾಡಲಾಯಿತು. ತ್ಯಾಗ, ಶ್ರಮದ ಪಕ್ಷ ಕಟ್ಟುವಾಗ ಇವರು ಯಾರು ಇರಲಿಲ್ಲ. ಫಲ ಕೊಡುವ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ನನಗೆ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ನೀಡಲಿಲ್ಲ. ಎನ್.ಮಹೇಶ್ ಗೆಲ್ಲಬಾರದು, ಗೆದ್ದರೆ ಚಳವಳಿ ಹಾಳು ಮಾಡುತ್ತಾರೆ ಎಂದು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಇದಕ್ಕೆ ಸಂಬಂಧಿಸಿದ ಆಡಿಯೋಗಳು ನನ್ನ ಬಳಿ ಇವೆ ಎಂದರು.

    ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇನೆ. ಬೇರೆಯವರ ರೀತಿ ವೈಯಕ್ತಿಕ ಲಾಭಕ್ಕಾಗಿ ಮನುವಾದಿ ಪಕ್ಷಕ್ಕೆ ಅನುಕೂಲ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು. ದಲಿತ ಅಭಿವೃದ್ಧಿ ಸಂಘದ ಲಿಂಗಣ್ಣ ಉತ್ತಂಬಳ್ಳಿ ಮಾತನಾಡಿದರು. ಎಸ್‌ಸಿ, ಎಸ್‌ಟಿ ಉದ್ದಿಮೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಚಿನ್ನಸ್ವಾಮಿ, ಲೋಕೇಶ್, ಚೇತನ್, ನಂಜುಂಡಶೆಟ್ಟಿ, ಮಹದೇವಶೆಟ್ಟಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts