More

    19ರಂದು ಮಾರುಕಟ್ಟೆಗೆ ಮುತ್ತಿಗೆ

    ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಏ.19ರಂದು ಮೈಸೂರಿನ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

    ಮೈಸೂರಿನ ರೇಷ್ಮೆ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಮತ್ತು ಡೀಲರ್‌ಗಳು ರೇಷ್ಮೆ ಬೆಳೆಗಾರರ ರಕ್ತಹೀರುತ್ತಿದ್ದಾರೆ. ಇದನ್ನು ವಿರೋಧಿಸಿ ಏ.19ರಂದು ಮಾರುಕಟ್ಟೆಗೆ ಮುತ್ತಿಗೆ ಹಾಕುತ್ತೇವೆ. 20ರಂದು ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ವೈಜ್ಞಾನಿಕ ಬೆಲೆಯ ಆಧಾರದಲ್ಲಿ ಆನ್‌ಲೈನ್ ಮೂಲಕ ದರ ನಿಗದಿಯಾಗುತ್ತಿಲ್ಲ. ಅಧಿಕಾರಿಗಳು ಮತ್ತು ದಲ್ಲಾಳಿಗಳು ಶಾಮೀಲಾಗಿ ಮನಸೋ ಇಚ್ಛೆ ದರ ನಿಗದಿ ಮಾಡುತ್ತಿದ್ದಾರೆ. ರಾಮನಗರದಲ್ಲಿ ಕಳಪೆ ಗೂಡಿಗೆ ನಿಗದಿಯಾದ ದರವನ್ನು ಮೈಸೂರಿನಲ್ಲಿ ಉತ್ತಮ ಗೂಡಿಗೆ ನೀಡಲಾಗುತ್ತಿದೆ. ಮೊದಲೇ ಹರಾಜು ಬೇಡವೆಂದು ಎರಡನೇ ಹರಾಜಿಗೆ ಕಾದರೆ ರೀಲರ್ಸ್‌ಗಳು ಇಲ್ಲೂ ಕಡಿಮೆ ದರ ಕೂಗುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂರುತ್ತಿದ್ದಾರೆ ಎಂದು ದೂರಿದರು.

    ಈ ಹಿನ್ನೆಲೆಯಲ್ಲಿ ರೀಲರ್ಸ್‌ಗಳಿಗೆ ಕೈಜೋಡಿಸಿರುವ ಎಲ್ಲ ಅಧಿಕಾರಿಗಳು ಅಮಾನತಾಗಬೇಕು, ತಪಾಸಣಾ ವರದಿ ಆಧರಿಸಿ ರೇಷ್ಮೆ ಬೆಲೆ ನಿಗದಿ ಮಾಡಬೇಕು. ಹರಾಜು ಪ್ರಕ್ರಿಯೆಗೆ ಮುನ್ನ ಸರ್ಕಾರದಿಂದ ನಿಯೋಜಿಸಿರುವ ರೇಷ್ಮೆ ತಜ್ಞರು ಗೂಡಿನ ಗುಣಮಟ್ಟ ತಪಾಸಣೆ ಮಾಡಿ ಗುಣಮಟ್ಟ ನಮೂದು ಮಾಡಬೇಕು. ವಿದ್ಯಾರ್ಹತೆ ಮತ್ತು ಅಧಿಕೃತ ಪ್ರಮಾಣಪತ್ರ ಇಲ್ಲದವರು ಗೂಡಿನ ದರ ನಿಗದಿ ಮಾಡಲು ಬರಬಾರದು. ಗೂಡಿಗೆ ದರ ನಿಗದಿ ಮಾಡಲು ಬಾರದ ರೀಲರ್ಸ್‌ಗಳಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅನುಮತಿ ಕೊಡಬಾರದು. ಮೈಸೂರಿನಲ್ಲೇ ಇರುವ ಸಿಎ್ಟಿಆರ್‌ಐಯನ್ನು ರೈತರಿಗೆ ನೆರವಾಗುವ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದರು.

    ಪಶು ಸಂಗೋಪನಾ ಇಲಾಖೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಈ ಸಮಸ್ಯೆ ಬಗೆಹರಿಸಬೇಕು. ಏ.19 ಮತ್ತು 20ರಂದು ಮೈಸೂರಿನ ಎಪಿಎಂಸಿಯಲ್ಲಿ ನಡೆಯಲಿರುವ ಹೋರಾಟಕ್ಕೆ ಜಿಲ್ಲೆಯ ರೈತರು ಭಾಗವಹಿಸಬೇಕೆಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಯೋಗೇಶ್ ಮೇಲಾಜಿಪುರ, ಮಲ್ಲೇಶ್ ಮೇಲಾಜಿಪುರ, ಮಣಿಕಂಠ ಮಂಚಳ್ಳಿ, ಶಿವಕುಮಾರ್ ಅಂಬಳೆ, ಶ್ರೀನಿವಾಸ್ ಬೆಟ್ಟದಮಾದಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts