More

    ಕಾಂಗ್ರೆಸ್ ಟೀಕೆಗಳೆಲ್ಲ ಹಳೆಯ ಡೈಲಾಗ್‌ಗಳು

    ಚಾಮರಾಜನಗರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಟೀಕೆ ಮಾಡಲು ಕಾಂಗ್ರೆಸ್ ಹಳೆಯ ಡೈಲಾಗ್‌ಗಳನ್ನೇ ಬಳಸುತ್ತಿದೆ ಎಂದು ಜೆಡಿಎಸ್ ಪಕ್ಷದ ನಾಯಕ ಬಂಡೆಪ್ಪ ಕಾಶೆಂಪೂರ್ ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಚುನಾವಣೆ ರಂಗೇರಿದೆ. 10 ವರ್ಷ ಉತ್ತಮ ಆಡಳಿತ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಹಲವು ಹಗರಣಗಳನ್ನು ಮಾಡಿತು. ಈ ರೀತಿ ಪ್ರಧಾನಿ ಮೋದಿ ಆಡಳಿತದಲ್ಲಿ ಹಗರಣ ಹುಡುಕಲು ಭ್ರಷ್ಟಾಚಾರವೇ ನಡೆದಿಲ್ಲ. ಹೀಗಾಗಿ ಟೀಕೆ ಮಾಡಲು ಏನೂ ಸಿಗದಿರುವುದಕ್ಕೆ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎನ್ನುತ್ತಾರೆ, ಗ್ಯಾರಂಟಿ ಯೋಜನೆ ಅಂತಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

    ಕಾಂಗ್ರೆಸ್‌ನವರು ಮಾತೆತ್ತಿದರೆ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುತ್ತಾರೆ. ಮದ್ಯದ ಬೆಲೆ ಹೆಚ್ಚಳ ಮಾಡಿದ್ದಾರೆ. ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮಹಾರಾಷ್ಟ್ರ, ತೆಲಂಗಾಣದಲ್ಲಿ ಕಡಿಮೆ ಬೆಲೆಗೆ ಸಿಗುವ ಮದ್ಯವನ್ನು ದಾಸ್ತಾನು ಇಡಲಾಗುತ್ತಿದೆ. ಕೇಂದ್ರ ಸರ್ಕಾರ ನೀಡುತ್ತಿದ್ದ ಅಕ್ಕಿಗೆ ಅನ್ನಭಾಗ್ಯದ ಹೆಸರು ಇಟ್ಟರು. ಯುವನಿಧಿ ಹೆಸರಿನಲ್ಲಿ ನಿರುದ್ಯೋಗಿಗಳಿಗೆ ಸರಿಯಾಗಿ ಹಣ ನೀಡುತ್ತಿಲ್ಲ. ರೈತರಿಗೆ ಕಾಂಗ್ರೆಸ್ ಯಾವ ಗ್ಯಾರಂಟಿ ನೀಡಿದೆ? ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು. ರಾಜ್ಯದ ಬೊಕ್ಕಸ ಖಾಲಿ ಮಾಡಿ ಈಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ ಎಂದರು.

    ರಾಜ್ಯ ಸರ್ಕಾರ ನೀರಾವರಿ ಯೋಜನೆಗೆ ಹಣ ನೀಡಿಲ್ಲ. ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊಟ್ಟಿಲ್ಲ. ಎಸ್‌ಇಪಿ/ಟಿಎಸ್‌ಪಿ ಯೋಜನೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್, ಜಲ ಜೀವನ್ ಮಿಷನ್, ಹೆದ್ದಾರಿ ಅಭಿವೃದ್ಧಿ, ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ನೀರಾವರಿ ಕೊಡುಗೆ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದೆ. ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ತಿಳಿಸಿದರು.

    ಕಾಂಗ್ರೆಸ್‌ಗೆ ಟೀಕೆ ಮಾಡಲು ಬೇರೆ ವಿಷಯ ಇಲ್ಲದ ಕಾರಣ ಎಚ್‌ಡಿಕೆ ಅವರ ಹೇಳಿಕೆಯನ್ನು ವಿಷಯ ಮಾಡಿಕೊಂಡಿದೆ. ಅಸ್ತಿತ್ವವೇ ಇಲ್ಲದ ಕಾಂಗ್ರೆಸ್ ಮತ್ತೊಬ್ಬರ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಮ್‌ಗೌಡ ಮತಯಾಚನೆ ಮಾಡುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಅಭ್ಯರ್ಥಿ ಎಸ್.ಬಾಲರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜು, ಜೆಡಿಎಸ್ ವಕ್ತಾರ ಸಿ.ಎಂ.ನಾಗರಾಜು, ಸ್ಥಳೀಯ ನಾಯಕ ಬಿ.ಪುಟ್ಟಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts