More

    ಆರೋಗ್ಯ ಕ್ಷೇತ್ರ ನಿರ್ಲಕ್ಷಿಸಿದರೆ ಅಭಿವೃದ್ಧಿ ಅಸಾಧ್ಯ

    ಚಾಮರಾಜನಗರ: ದೇಶದ ಆರೋಗ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸಿದರೆ ಈ ದೇಶ ಅಭಿವೃದ್ಧಿಯಾಗುವುದಿಲ್ಲ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಸಚ್ಚಿದಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ಸಿಮ್ಸ್) ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮೂರನೇ ಘಟಿಕೋತ್ಸವ ಹಾಗೂ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ವೈದ್ಯಕೀಯ ಪದವಿ ಮುಗಿಸಿರುವವರ ಮುಂದೆ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತದೆ. ಕುಟುಂಬ ವೈದ್ಯರಾಗಲು ಅವಕಾಶ ಇರುತ್ತದೆ. ವೈದ್ಯಕೀಯ ವಿಭಾಗದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೂ ಅವಕಾಶ ಇದೆ. ವೈದ್ಯಕೀಯ ಪೂರ್ವ, ಅರೆ ವೈದ್ಯಕೀಯ ಕ್ಷೇತ್ರದಲ್ಲಿ ಬೋಧಕರ ಕೊರತೆ ಇದೆ. ಅದನ್ನು ಸರಿದೂಗಿಸಬಹುದಾಗಿದೆ ಎಂದರು.

    ವೈದಯಕೀಯ ಪದವಿ ಪಡೆದುಕೊಂಡಿರುವವರು ಮುಂದಿನ ದಿನಗಳಲ್ಲಿ ಸಂಶೋಧಕರಾಗಬಹುದಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಭೋಧಕರಾಗಬಹುದಾಗಿದೆ. ವೈದ್ಯಕೀಯ ಪತ್ರಿಕೋದ್ಯಮಿಯೂ ಆಗಬಹುದಾಗಿದೆ. ಈನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧನೆ ಮಾಡುವವರು ಯಾವಾಗಲೂ ತಮ್ಮ ಗುರಿಯನ್ನು ಮನನ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ನಿಮ್ಮ ಪಾಲಕರು ಹಲವು ತ್ಯಾಗಗಳನ್ನು ಮಾಡಿ ನಿಮ್ಮನ್ನು ಓದಿಸಿದ್ದಾರೆ. ದ್ವೀತಿಯ ಪಿಯುಸಿ ಮುಗಿಸಿ ಬಂದಾಗ ನಿಮಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ. ಐದು ವರ್ಷಗಳಲ್ಲಿ ಇಷ್ಟೊಂದು ಜ್ಞಾನ ಸಂಪಾಧಿಸಲು ಭೋಧಕರ ಶ್ರಮ ಸಾಕಷ್ಟಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ರೋಗಿಗಳ ಪಾತ್ರವಿದೆ ಎಂದು ಹೇಳಿದರು.

    ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಯಾವುದೇ ವೃತ್ತಿಯಲ್ಲಿ ಸಮರ್ಪಣಾ ಮನೋಭಾವ ಬಹಳ ಮುಖ್ಯವಾಗುತ್ತದೆ. ವೈದ್ಯಕೀಯ ಪದವೀದರರಾಗಿರುವವರು ಆ ಕ್ಷೇತ್ರದಲ್ಲಿನ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ವಿದೇಶಗಳಲ್ಲಿ ಹೆಚ್ಚಿನ ಅವಕಾಶಗಳು ಇದೆ. ಬಹಳ ಉತ್ತಮವಾದ ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದೀರಿ. ರೋಗಿಗಳನ್ನು ಅಂತಃಕರಣದಿಂದ ನೋಡಿ ಅವರ ಕಷ್ಟಗಳಿಗೆ ಸ್ಪಂದಿಸಿ ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ, ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್, ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ.ದೇವಿಕಾ, ಸಿಮ್ಸ್ ಪ್ರಾಂಶುಪಾಲ ಡಾ.ಗಿರೀಶ್ ಪಾಟೀಲ, ಜಿಲ್ಲಾ ಸರ್ಜನ್ ಡಾ.ಎಚ್.ಎಸ್.ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಮಹೇಶ್ ಹಾಗೂ ಸಿಮ್ಸ್ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

    128 ವೈದ್ಯರಿಗೆ ಪದವಿ ಪ್ರಧಾನ:
    ಸಿಮ್ಸ್‌ನ 2018ನೇ ಬ್ಯಾಚ್‌ನ 150 ವಿದ್ಯಾರ್ಥಿಗಳಲ್ಲಿ 128 ಮಂದಿಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು. ಕೆ.ಆರ್.ನಗರದ ಡಾ.ಶಶಾಂಕ್ ಶೇ.77 ರಷ್ಟು ಅಂಕವನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದರು. ಮಂಡ್ಯ ಜಿಲ್ಲೆಯ ಪಾಂಡವಪುರದ ಅವಳಿ ಸಹೋದರಿಯರಾದ ಡಾ.ಸಂಧ್ಯಾ ಹಾಗೂ ಡಾ.ಸಪ್ನಾ ಕ್ರಮವಾಗಿ ಶೇ.75 ಮತ್ತು ಶೇ.74.5 ಅಂಕಗಳನ್ನು ಗಳಿಸುವ ಮೂಲಕ 2ನೇ ಸ್ಥಾನ ಪಡೆದುಕೊಂಡರು. ಉಡುಪಿಯ ಸುಷ್ಮಿತಾ ಅವರು ಶೇ.72 ರಷ್ಟು ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಪದಕ ಪ್ರದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts