More

    3ರಂದು ನಾಮಪತ್ರ ಸಲ್ಲಿಕೆ

    ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಏರ್ಪಡಲಿರುವ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಒಂದೇ ದಿನ(ಏ.3) ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.

    ಏ.3ರಂದು ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಬೆಳಗ್ಗೆ 11 ಗಂಟೆಯಿಂದ 12 ಗಂಟೆಗೆ, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಜಿಲ್ಲಾಡಳಿತ ಭವನಕ್ಕೆ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
    ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸೋಮವಾರ ಒಬ್ಬರ ನಂತರ ಮತ್ತೊಬ್ಬರು ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ನೀಡಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಏ.3ರಂದು ಬೆಳಗ್ಗೆ 11ರಿಂದ 12 ಗಂಟೆಯವರೆಗೆ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುವುದು. ಬಳಿಕ ಶ್ರೀ ಭುವನೇಶ್ವರಿ ವೃತ್ತದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಮತ್ತಿತರರು ಭಾಗವಹಿಸುವರು ಎಂದು ವಿವರಿಸಿದರು.

    ನಾಮಪತ್ರ ಸಲ್ಲಿಕೆ ಬಳಿಕ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಒಂದು ಕಡೆ ತೆರೆದ ವಾಹನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಲಿದ್ದಾರೆ. ನಮ್ಮ ಅಭ್ಯರ್ಥಿ ಸುನೀಲ್‌ಬೋಸ್ ಯುವಕ. 2008ರಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಶಾಸಕರಾಗಲು ಪ್ರಯತ್ನಿಸಿ ಟಿಕೆಟ್ ಸಿಗದೆ ಇದ್ದಾಗಲೂ ಪಕ್ಷ ನಿಷ್ಠೆ ಮೆರೆದಿದ್ದಾರೆ. ಈಗಾಗಲೇ ಮೊದಲ ಸುತ್ತಿನ ಪ್ರಚಾರ ನಡೆದಿದೆ. ರಾಜ್ಯ ಸರ್ಕಾರ 10 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಲೋಕಸಭೆ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸೇರ್ಪಡೆ: ಬಿಜೆಪಿಯ ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಏ.2ರಂದು ಮೈಸೂರಿನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಕೆಲವರು ಪಕ್ಷ ಸೇರುವರು. ಏ.12ರಂದು ಸಿಎಂ ಸಿದ್ದರಾಮಯ್ಯ 2ನೇ ಸುತ್ತಿನ ಪ್ರವಾಸ ಕೈಗೊಂಡು ಕೊಳ್ಳೇಗಾಲ, ಗುಂಡ್ಲುಪೇಟೆಗೆ ಭೇಟಿ ನೀಡುವರು. ಈ ಸಂದರ್ಭದಲ್ಲೂ ಕೆಲವರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು.
    ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್ ಇದ್ದರು.

    ಎಸ್.ಬಾಲರಾಜ್ ನಾಮಪತ್ರ ಸಲ್ಲಿಕೆ
    ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಏ.3ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಚುನಾವಣಾ ಪ್ರಭಾರಿ ಣೀಶ್ ತಿಳಿಸಿದರು.
    ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಎಲ್ಲಗೂ ಒಗ್ಗೂಡಿ ಅಲ್ಲಿಂದ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
    ಈ ವೇಳೆಗೆ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನೂ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಜಿ.ಟಿ.ದೇವೇಗೌಡ ಅರವಿಂದ ಲಿಂಬಾವಳಿ, ಮಂಜುನಾಥ್, ಮಾಜಿ ಶಾಸಕ ರಾಮದಾಸ್ ಮತ್ತು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

    ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ದಲಿತರು ಮತ್ತು ಇತರ ಮತದಾರರಿಗೆ ಅತ್ಯುತ್ತಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಿ ಎಂದು ಕೋರುತ್ತೇನೆ. ಪ್ರಜಾಪ್ರಭುತ್ವ ಉಳಿವಿಗಾಗಿ ಉತ್ತಮ ಅಭ್ಯರ್ಥಿಯ ಆಯ್ಕೆ ಮಾಡುವ ಅಗತ್ಯವಿದೆ. ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ದಲಿತರಿಗೆ ಮಾಡಿರುವ ಮೋಸವನ್ನು ತಿಳಿಸಿಕೊಡಿ ಎಂದು ಹೇಳಿದರು.
    ಎಸ್ಸಿ/ಎಸ್ಟಿ ಸಮುದಾಯವನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಪಾರ್ಲಿಮೆಂಟ್‌ಗೆ ಹೋಗದಂತೆ ಮಾಡಿದ್ದು ಕಾಂಗ್ರೆಸ್. ಎಸ್‌ಇಪಿ/ಟಿಎಸ್‌ಪಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ ಮಾಡುತ್ತಿದ್ದು, ಇದು ದಲಿತರಿಗೆ ಮಾಡಿರುವ ಅಪಮಾನ. ಹೀಗಾಗಿ ದಲಿತರು ಕಾಂಗ್ರೆಸ್‌ಗೆ ಯಾಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.

    ಪಕ್ಷಾಂತರದ ಮಾತು:
    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪಕ್ಷಾಂತರ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಅಯ್ಯನಪುರ ಶಿವಕುಮಾರ್ ನನಗೆ ಕರೆ ಮಾಡಿ ಮಾತನಾಡಿದರು. ಚಾಮರಾಜನಗರ ಅಥವಾ ಮೈಸೂರು ಎರಡಲ್ಲಿ ಯಾವ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಯಾಗುವುದು ಎಂದು ಕೇಳಿದ್ದಾರೆ ಎಂದರು. ಇನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಬಾಲರಾಜ್ ಸಹ ಸಂಪರ್ಕ ಮಾಡಿದ್ದು ಇವರು ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂದರು. ಇದೇ ವಿಚಾರಕ್ಕೆ ಬಿಜೆಪಿಯವರ ಸುದ್ದಿಗೋಷ್ಠಿಯಲ್ಲಿ ಚುನಾವಣೆ ಪ್ರಭಾರಿ ಣೀಶ್ ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ. ಕಾಂಗ್ರೆಸ್‌ನಿಂದಲೂ ನಮ್ಮ ಪಕ್ಷಕ್ಕೆ ಕೆಲವರು ಬರಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts