More

    ಕೊಳ್ಳೇಗಾಲದಿಂದ ತಂತ್ರಗಾರಿಕೆ ಶುರು

    ಚಾಮರಾಜನಗರ: ಎಲ್ಲಕ್ಕಿಂತಲೂ ಮೊದಲು ಎದುರಾಳಿ ಅಭ್ಯರ್ಥಿಯ ನೆಲಮೂಲಕ್ಕೆ ಕಾಲಿಡುವುದು, ಅಲ್ಲಿ ಕ್ಲಿಷ್ಟಕರವಾಗಬಹುದಾದ ಪರಿಸ್ಥಿತಿಯನ್ನು ಸುಧಾರಿಸುವುದು..!?

    ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಗನಿಗಾಗಿ ಅಖಾಡಕ್ಕಿಳಿದಿರುವ ಅಪ್ಪ ತಂತ್ರಗಾರಿಕೆಯನ್ನು ಕೊಳ್ಳೇಗಾಲದಲ್ಲಿ ಬುಧವಾರ ಬಳಕೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಪ್ರಾಬಲ್ಯ ಹೊಂದಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತನ್ನ ಪುತ್ರ, ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸುನೀಲ್ ಬೋಸ್ ಜತೆಗೆ ಭೇಟಿ ನೀಡಿದರು. ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಭಿನ್ನಾಭಿಪ್ರಾಯಗಳಿಲ್ಲವೆಂಬ ಸಂದೇಶ ರವಾನಿಸಿದ್ದಾರೆ.

    ಮೈಸೂರಿನ ಎಚ್.ಡಿ.ಕೋಟೆಯ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳಿಂದ ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲುವ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ಇವರೊಂದಿಗೇ ಇದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದು ಇಲ್ಲಿನ ಜನಪ್ರತಿನಿಧಿಗಳು, ಮಾಜಿ ಶಾಸಕರು, ಮುಖಂಡರನ್ನು ಮೊದಲು ಭೇಟಿ ಮಾಡಿದ್ದು, ಎದುರಾಳಿ ಅಭ್ಯರ್ಥಿಯ ಸ್ವಕ್ಷೇತ್ರದತ್ತ ಮೊದಲು ಚಿತ್ತ ಹರಿಸಿದ್ದಾರೆ.


    ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗಿಂತಲೂ ಕೊಳ್ಳೇಗಾಲದಲ್ಲಿ ಭಿನ್ನ ಸವಾಲು ಎದುರಾಗಲಿದೆ. ಇತ್ತ ಬಿಜೆಪಿಯಿಂದ ಮಾಜಿ ಶಾಸಕ ಎಸ್.ಬಾಲರಾಜ್, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿಗೆ ಟಿಕೆಟ್ ಸಿಕ್ಕಿದ್ದರೆ ಎರಡೂ ಪಕ್ಷಗಳಿಂದ ಕೊಳ್ಳೇಗಾಲದವರಿಗೇ ಅವಕಾಶ ಸಿಕ್ಕಂತಾಗುತ್ತಿತ್ತು. ಇವರಲ್ಲಿ ಗೆಲ್ಲುವ ಒಬ್ಬರು ಸಂಸದರಾಗುತ್ತಿದ್ದರು. ಕೊಳ್ಳೇಗಾಲದ ನಾಯಕನೊಬ್ಬನಿಗೆ ಅಧಿಕಾರ ಸಿಗುತ್ತಿತ್ತು. ಸ್ಥಳೀಯರ ಈ ಅಭಿಪ್ರಾಯವನ್ನು ಅಭ್ಯರ್ಥಿಯಾಗಲಿರುವ ಸುನೀಲ್‌ಬೋಸ್ ಬದಲಾಯಿಸಲು ಕೆಲಸ ಮಾಡಬೇಕಾದ ಸವಾಲು ಇಲ್ಲಿದೆ.

    ಒಟ್ಟು 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅತ್ಯಂತ ಚಿರಪರಿಚಿತರಾಗಿರುವ ಕ್ಷೇತ್ರ ಕೊಳ್ಳೇಗಾಲ. ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡ ಇಲ್ಲಿ ಎಲ್ಲರಿಗೂ ಗೊತ್ತಿರುವವರು. ಆದರೆ ಇವರ ಪುತ್ರ ಸುನೀಲ್‌ಬೋಸ್ ಅವರನ್ನು ಗೊತ್ತಿಲ್ಲದ ಮತದಾರರಿಗೆ ಪರಿಚಯ ಮಾಡಿಕೊಡಬೇಕಾಗಿದೆ. ಕಳೆದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಆರ್.ಧ್ರುವನಾರಾಯಣ-69646 ಮತಗಳು, ವಿ.ಶ್ರೀನಿವಾಸಪ್ರಸಾದ್-69452 ಮತಗಳನ್ನು ಪಡೆದುಕೊಂಡಿದ್ದರು. ಅಲ್ಪ ಮತಗಳ ಮುನ್ನಡೆಯನ್ನು ಈಗ ಕಾಂಗ್ರೆಸ್ ಅಧಿಕ ಮತಗಳಿಗೆ ಪರಿವರ್ತಿಸಲು ಶ್ರಮ ಹಾಕಬೇಕಿದೆ. ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಇತರರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಡಿಸುವ ಜವಾಬ್ದಾರಿ ಹೆಗಲೇರಿದೆ.

    ಕಾಂಗ್ರೆಸ್ ಸೇರಿದ ಕೋಟೆ ಶಿವಣ್ಣ
    ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೋಟೆ ಶಿವಣ್ಣ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮೈಸೂರಿನಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಪಕ್ಷ ಸೇರಿದರು. ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಉಳಿದು ಕಾರ್ಯತಂತ್ರಗಳನ್ನು ರೂಪಿಸಿರುವ ಸಿಎಂ ಸಿದ್ದರಾಮಯ್ಯ ಬೇರೆ ಪಕ್ಷಗಳ ಹಲವು ನಾಯಕರನ್ನು ಕಾಂಗ್ರೆಸ್‌ಗೆ ಸೆಳೆದಿದ್ದಾರೆ. ಇವರಲ್ಲಿ ಕೋಟೆ ಶಿವಣ್ಣ ಕೂಡ ಒಬ್ಬರು. ದಲಿತ ಎಡಗೈ ಸಮುದಾಯದ ಪ್ರಬಲ ನಾಯಕರಾಗಿರುವ ಕೋಟೆ ಶಿವಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಿವಣ್ಣ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿ ಸಚಿವರಾಗಿದ್ದರು. ಬಳಿಕ 2009, 2014ರಲ್ಲಿ ಜೆಡಿಎಸ್ ಸೇರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತರು. ಬಳಿಕ ಬಿಜೆಪಿ ಸೇರಿದರು. ಪಕ್ಷ ಇವರನ್ನು ರಾಜ್ಯ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ಮಾಡಿತ್ತು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಕೋಟೆ ಶಿವಣ್ಣ ಟಿಕೆಟ್ ಕೈ ತಪ್ಪಿದ ಬಳಿಕ ಬೆಂಬಲಿಗರ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಬೆಂಬಲಿಗರು ಬಂಡಾಯವಾಗಿ ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡಿದ್ದರು. ಇದಕ್ಕೆ ಕೋಟೆ ಶಿವಣ್ಣ ಪ್ರತಿಕ್ರಿಯಿಸಿ ಎರಡು ದಿನಗಳ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು.

    ಸಮನ್ವಯಕ್ಕೆ ಕರೆ
    ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸಮನ್ವಯ ಸಾಧಿಸಬೇಕೆಂದು ಎರಡೂ ಪಕ್ಷಗಳ ನಾಯಕರು ಕರೆಕೊಟ್ಟಿದ್ದಾರೆ. ಮೈಸೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲೆಯ ಬಿಜೆಪಿ-ಜೆಡಿಎಸ್ ನಾಯಕರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಪಕ್ಷಗಳ ಮುಖಂಡರಿಗೆ ಮೈತ್ರಿ ಧರ್ಮ ಪಾಲನೆ ಮಾಡಲು ತಿಳಿಸಿದರು.
    ಬಿಜೆಪಿಯಿಂದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಇತರರು ಭಾಗವಹಿಸಿದ್ದರು. ಜೆಡಿಎಸ್‌ನಿಂದ ಹನೂರು ಶಾಸಕ ಎಂ.ಆರ್.ಮಂಜುನಾಥ್, ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳಾದ ಆಲೂರು ಮಲ್ಲು, ಬಿ.ಪುಟ್ಟಸ್ವಾಮಿ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಈ ಕುರಿತು ವಿಜಯವಾಣಿಯೊಂದಿಗೆ ಮುಖಂಡ ಆಲೂರು ಮಲ್ಲು ಮಾತನಾಡಿ, ಬಿಜೆಪಿ-ಜೆಡಿಎಸ್ ಸಮನ್ವಯದಿಂದ ಚುನಾವಣೆ ಕೆಲಸ ಮಾಡಲು ಎರಡೂ ಪಕ್ಷಗಳ ವರಿಷ್ಠರು ಸೂಚಿಸಿದ್ದಾರೆ. ಅದರಂತೆ ಕೆಲಸ ಮಾಡಲಿದ್ದೇವೆ ಎಂದರು.

    ಅಪ್ಪ-ಮಗನ ಹೋರಾಟ
    ಈ ಲೋಕಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದ ಮತದಾರರು ತಂದೆ ಡಾ.ಎಚ್.ಸಿ.ಮಹದೇವಪ್ಪ ಮತ್ತು ಇವರ ಪುತ್ರ ಸುನೀಲ್‌ಬೋಸ್ ಹೋರಾಟವನ್ನು ಕಾಣಬಹುದು. ಮಗನಿಗಾಗಿ ತಂದೆ ಅಖಾಡಕ್ಕಿಳಿಯುವುದು ಹೊಸತಲ್ಲ. ಈ ಕ್ಷೇತ್ರದಲ್ಲಿ ಸಚಿವರೊಬ್ಬರು ತನ್ನ ಮಗನಿಗಾಗಿ ಮತ ಕೇಳುತ್ತಿರುವುದು ಇದೇ ಮೊದಲು. ಇತಿಹಾಸದಲ್ಲಿ ತಂದೆಯ ನಂತರ ಮಗ ಚುನಾವಣೆಗೆ ನಿಂತಿದ್ದನ್ನು ಕೊಳ್ಳೇಗಾಲದ ಮತದಾರರು ನೋಡಿದ್ದಾರೆ. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿ.ಬಸವಯ್ಯ 1962(ಕಾಂಗ್ರೆಸ್), 1967(ಕಾಂಗ್ರೆಸ್), 1983(ಜನತಾ ಪಕ್ಷ), 1985ರಲ್ಲಿ(ಜನತಾ ಪಕ್ಷ) ಗೆದ್ದಿದ್ದರು. ಎರಡು ಬಾರಿ ಸೋತಿದ್ದರು. ಇವರ ಪುತ್ರ ಸರ್ವೇಶ್ ಬಸವಯ್ಯ 2004ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದರು.

    ಕೊಳ್ಳೇಗಾಲ(ಪ.ಜಾ) ಕ್ಷೇತ್ರದ ಮತದಾರರ ವಿವರ:
    ಪುರುಷರು-107081
    ಮಹಿಳೆಯರು-1,10,768
    ಇತರ-20
    ಒಟ್ಟು-2,17,869
    ಮತಗಟ್ಟೆ ಸಂಖ್ಯೆ-241

    ಬಿಜೆಪಿಯಲ್ಲಿ ತುಂಬ ಮುಜುಗರಗಳನ್ನು ಎದುರಿಸಿದ್ದೇನೆ. ಹೀಗಾಗಿ ಬಿ.ವೈ.ವಿಜಯೇಂದ್ರ ಅವರಿಗೆ ತಿಳಿಸಿ ಆ ಪಕ್ಷ ಬಿಟ್ಟೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಿವಣ್ಣ ಬನ್ನಿ ನಾನು ಇದ್ದೇನೆ ಎಂದು ಕರೆದರು. ಹಾಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಏ.2ರಂದು ಚಾಮರಾಜನಗರಕ್ಕೆ ಬರುತ್ತೇನೆ.
    ಕೋಟೆ ಎಂ.ಶಿವಣ್ಣ, ಮಾಜಿ ಸಚಿವ

    ಕ್ಷೇತ್ರ ಕಾಂಗ್ರೆಸ್ ಪರವಾಗಿದೆ. ರಾಜ್ಯದ ಅಭಿವೃದ್ಧಿ, ಪ್ರಜಾಸತ್ತಾತ್ಮಕ ನಿರ್ಧಾರಗಳು, ಸಂವಿಧಾನ ರಕ್ಷಣೆ, ಅದರ ಆಶಯಗಳ ಜಾರಿ ಮುಂದಿಟ್ಟುಕೊಂಡು ಕಾಂಗ್ರೆಸ್ ಪರವಾಗಿ ಮತ ಕೇಳುತ್ತೇವೆ. ಏ.26ಕ್ಕೆ ಯಾರ ಪರ ಅಲೆ ಇರಲಿದೆ, ಯಾರು ಕೊಚ್ಚಿ ಹೋಗುತ್ತಾರೆ ಎಂದು ತಿಳಿಯುತ್ತದೆ.
    ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts