More

    ಕಲಿಕಾ ಗುಣಮಟ್ಟವನ್ನು ಸುಧಾರಿಸಲು ಶ್ರಮಿಸೋಣ

    ಚಾಮರಾಜನಗರ: ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಶೇ.100 ರಷ್ಟು ಲಿತಾಂಶ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಸುಧಾರಿಸಲು ನಾವೆಲ್ಲರೂ ಒಗ್ಗಟ್ಟಾಗಿದುಡಿಯಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

    ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಇನ್ಫೋಸಿಸ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣದ ಬಲವರ್ಧನೆಗಾಗಿ ಸೋಮವಾರ ಆಯೋಜಿಸಿದ್ದ ಉಚಿತ ಸ್ಮಾರ್ಟ್‌ಟಿವಿ ಮತ್ತು ಟ್ಯಾಬ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    2024-25ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷ ಎಂದು ತೀರ್ಮಾನಿಸಿ ಶಿಕ್ಷಣ ಪರಿವರ್ತನೆ ಮಾಡಲು ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ಫೋಸಿಸ್ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳ ನೆರವಿನೊಂದಿಗೆ 5-7 ಕೋಟಿ ರೂ, ಬೆಲೆಬಾಳುವ ಉಪಕರಣಗಳನ್ನು ಹಾಗೂ 20 ಲಕ್ಷ ರೂ, ಬೆಲೆಬಾಳುವ ಟ್ಯಾಬ್‌ಗಳನ್ನು ವಿತರಣೆ ಮಾಡಲಾಗಿದೆ. ಮಕ್ಕಳು ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ 18-30 ವರ್ಷ ವಯಸ್ಸಿನ 42 ಯುವಕರಿಗೆ ಉದ್ಯೋಗಾಧಾರಿತ ತರಬೇತಿಯನ್ನು ನೀಡಲಾಗುತ್ತಿದೆ. ಈ 3 ತಿಂಗಳ ಕೋರ್ಸ್ ಪಡೆದುಕೊಂಡವರಿಗೆ ಇನ್ಫೋಸಿಸ್ ಮೂಲಕ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುವುದು. ಇದಕ್ಕಾಗಿ 10 ಕಂಪ್ಯೂಟರ್, 2 ಪ್ರಿಂಟರ್, ಟಿವಿ ಸ್ಕ್ರೀನ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಇರುವ ಶಾಲೆಗಳಿಗೆ ತೆರಳಲು ಸೂಕ್ತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಗೆ ಪೂರಕ ಕಲಿಕಾ ಅವಕಾಶವನ್ನು ನಿರ್ಮಿಸಿ ಭಾಷೆ, ಗಣಿತ, ವಿಜ್ಞಾನ ಕಲಿಸಲು ಪ್ರೋತ್ಸಾಹಿಸಬೇಕಾಗಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಇಂದಿಗೂ ಜೀವಂತವಾಗಿದ್ದು, ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಮಾಡಬೇಕಿದೆ ಎಂದರು.

    ಇನ್ಫೋಸಿಸ್ ಸಂಸ್ಥೆಯ ಕೆ.ಎಸ್.ಸುಂದರ್ ಮಾತನಾಡಿ, ಸ್ಮಾರ್ಟ್‌ಕ್ಲಾಸ್ ಕಲಿಕೆಗೆ ವಾರದಲ್ಲಿ ಒಂದಿ ದಿನವನ್ನು ಸಂಪೂರ್ಣವಾಗಿ ಮೀಸಲಿಡಬೇಕು. ಇದರ ಅನುಕೂಲವನ್ನು ಮಕ್ಕಳು ಪಡೆದುಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು. ಸ್ಮಾರ್ಟ್‌ಕ್ಲಾಸ್ ಕಲಿಕೆ ನಿರಂತರವಾಗಿರಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಇನ್ಫೋಸಿಸ್ ಸಂಸ್ಥೆಯ ಸತೀಶ್, ಬಿಳಿಗಿರಿರಂಗ, ಪಂಚಶೀಲ ರೋಟರಿ ಸಂಸ್ಥೆಯ ಕಿರಣ್ ರಾಬರ್ಟ್, ಆನಂದ್, ಸಮಾಜ ಕಲ್ಯಾಣ ಇಲಾಖೆ ಮಂಜುಳಾ, ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನಮ್ಮ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts