More

    ಕೆರೆ ವಿಚಾರಕ್ಕೆ ಗುಡುಗಿದ ರೈತರು

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಕಳೆದ ಬಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗ ಕಪ್ಪು ಬಾವುಟ ಪ್ರದರ್ಶಿಸಿ ಸಭೆ ಕರೆಯಬೇಕೆಂದು ರೈತರು ಒತ್ತಾಯಿಸಿದ್ದ ಪರಿಣಾಮ ಸೋಮವಾರ ನಿಗದಿಪಡಿಸಿದ್ದ ಸಭೆಯಲ್ಲಿ ರೈತ ಮುಖಂಡರು ನೀರಾವರಿ ಇಲಾಖೆಯ ಅಧಿಕಾರಿಗಳ ಗಂಟಲು ಒಣಗುವಂತೆ ಮಾಡಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಾಖಲಾತಿಗಳನ್ನು ಆಧರಿಸಿ ಕೆರೆಗಳಿಗೆ ನೀರು ತುಂಬಿಸಿರುವುದಾಗಿ ಅಧಿಕಾರಿಗಳು ಹೇಳಿದರು. ಕೆರೆಗಳಿಗೆ ನೀರು ಹರಿಯದಿರುವ ಬಗ್ಗೆ ವಾಸ್ತವಾಂಶವನ್ನು ವಿವರಿಸಿದ ರೈತರು ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದು, ತುಂಬಿರುವ ಕೆರೆಗಳನ್ನು ತೋರಿಸಬೇಕೆಂದು ಸವಾಲೆಸೆದರು.

    ಸಭೆಯಲ್ಲಿ ಆರ್ಭಟಿಸಿದ ಅನ್ನದಾತರ ಆಕ್ರೋಶವನ್ನು ತಣ್ಣಗಾಗಿಸಲು ಮುಂದಾದ ಸಚಿವ ಎಸ್.ಸುರೇಶ್‌ಕುಮಾರ್ ಸದನ ಮುಗಿದ ನಂತರ ನೀರಾವರಿ ಸಚಿವ ರಮೇಶ್ ಜಾರಕಿಹೋಳಿ ಅವರನ್ನು ಜಿಲ್ಲೆಗೆ ಕರೆತಂದು ಸಭೆ ನಡೆಸಿ ನಾಲೆಗಳ ನಿರ್ಮಾಣ, ಕೆರೆಗಳಿಗೆ ನೀರು ಹರಿಸುವ ಯೋಜನೆ, ಅನುದಾನ ಬಿಡುಗಡೆ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಇದಕ್ಕೂ ಮುನ್ನ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ನಂಜನಗೂಡು ಕಬಿನಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರಂಗರಾಮ್ ಮಾತನಾಡಿ, ಕೊಣನೂರು, ಬೆಂಡರವಾಡಿ, ಕೆರೆಹಳ್ಳಿ, ಹಳೇಪುರ, ತಮ್ಮಡಹಳ್ಳಿ, ನಂಜದೇವನಪುರ ಗ್ರಾಮದ ಕೆರೆಗಳನ್ನು ತುಂಬಿಸಿ ಈಗ ಕಾಳನಹುಂಡಿ ಕೆರೆಗೆ ನೀರು ಹರಿಯುತ್ತಿದೆ. ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಕರೊನಾ ಹರಡುವಿಕೆಯ ಸಂದರ್ಭದಲ್ಲಿ ಕಾರ್ಮಿಕರ ಕೊರತೆ ಉಂಟಾಗಿ ಕಾಮಗಾರಿ ಕುಂಠಿತಗೊಂಡಿತ್ತು. ಶೀಘ್ರದಲ್ಲೇ ಯೋಜನೆಯನ್ನು ಪೂರ್ಣಗೊಳಿಸಿ ಪ್ರಯೋಗಿಕವಾಗಿ ನೀರು ಹರಿಸಲಾಗುವುದು ಎಂದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು ಜಿಲ್ಲೆಯಲ್ಲಿ ಕಾಲಮಿತಿಯೊಳಗೆ ಕೆರೆಗಳಿಗೆ ನೀರು ತುಂಬಿಸಿಲ್ಲ. ಹಲವು ಕೆರೆಗಳು ಮಳೆ ಬಂದು ನೀರು ತುಂಬಿಕೊಂಡಿವೆ. ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಗುಡುಗಿದರು.
    ಮಧ್ಯ ಪ್ರವೇಶಿಸಿದ ಸಚಿವ ಎಸ್.ಸುರೇಶ್‌ಕುಮಾರ್ ಅಧಿಕಾರಿಗಳು ವಾಸ್ತವಿಕ ವರದಿಗಳನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಯೋಜನಾಬದ್ಧವಾಗಿ ಕೆರೆಗಳನ್ನು ತುಂಬಿಸಲು ಸೂಚನೆ ನೀಡಿದರು.

    ಶಾಸಕರಿಗೆ ಧಿಕ್ಕಾರ ಕೂಗಿದ ರೈತರು: ಶಾಸಕ ಎನ್.ಮಹೇಶ್ ಅವರು ರೇಷ್ಮೆಸಚಿವ ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ರೈತರ ಸಭೆಗೆ ತಡವಾಗಿ ಬಂದರು.
    ಆದರೆ ರೈತ ಮುಖಂಡರ ಸಭೆಗೆ ಗೈರಾಗಿದ್ದ ಹನೂರು ಶಾಸಕ ಆರ್.ನರೇಂದ್ರ ಮತ್ತು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ವಿರುದ್ಧ ರೈತರು ಧಿಕ್ಕಾರ ಕೂಗಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ರೈತರ ಸಭೆಯತ್ತ ಬರದೆ ಹೋದ ನಡೆಯನ್ನು ರೈತರು ಖಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts