More

    ಕುಡಿವ ನೀರಿನ ಅನುದಾನ ಸದ್ಬಳಕೆ ಆಗಲಿ

    ಚಳ್ಳಕೆರೆ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಅವರು ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚಿಸಿದರು.

    ಇಲಾಖೆಗೆ ಬಿಡುಗಡೆಯಾಗಿರುವ 140 ಕೋಟಿ ಹಣ ಸಂಪೂರ್ಣ ಇಲಾಖೆಗೆ ಬಂದಿಲ್ಲ. ಆದರೂ, ಅಗತ್ಯವಿದ್ದ ಕುಡಿಯುವ ನೀರಿನ ಕಾಮಗಾರಿಗಳು ಕೈಗೊಳ್ಳಲಾಗಿದೆ ಎಂದು ಪಿಆರ್‌ಡಿ ಇಲಾಖೆ ಅಧಿಕಾರಿಗಳಾದ ತಿಪ್ಪೇಸ್ವಾಮಿ, ಕಾವ್ಯ ಮಾಹಿತಿ ನೀಡಿದರು.

    ಗಂಜಿಗುಂಟೆ ಲಂಬಾಣಿಹಟ್ಟಿ, ಜನ್ನೇನಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪರಿಹಾರ ಆಗಿಲ್ಲ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಆಗ್ರಹಿಸಿದರು.

    ಶಶಿಕಲಾ ಮಾತನಾಡಿ, ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಬಹಳಷ್ಟು ದೂರುಗಳಿವೆ. ಎರಡು ರೂಪಾಯಿ ಕಾಯಿನ್ ಬದಲಾಗಿ, ಐದು ರೂಪಾಯಿ ಮಾಡಲಾಗಿದೆ. ಇದರಿಂದ ಕೂಲಿ ಕುಟುಂಬಗಳಿಗೆ ತೊಂದರೆ ಆಗಿದೆ ಎಂದರು.

    ಕೃಷಿ ಇಲಾಖೆ ಅಧಿಕಾರಿ ಮೋಹನ್‌ಕುಮಾರ್ ಮಾತನಾಡಿ, ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಶೇಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡುತ್ತಿಲ್ಲ ಎಂದು ಹೇಳಿದರು.

    ಸಾಮಾನ್ಯ ವರ್ಗದ ರೈತರಿಗೆ 5900 ರೂ., ಎಸ್ಸಿ-ಎಸ್ಟಿ ರೈತರಿಗೆ 5200 ರೂ. ದುಬಾರಿ ಬೆಲೆ ನಿಗದಿ ಮಾಡಲಾಗಿದೆ. ಕೋವಿಡ್-19 ಸಂಕಷ್ಟದಲ್ಲಿರುವ ರೈತರು ಕೃಷಿ ಚಟುವಟಿಕೆ ಮಾಡಲು ಶಕ್ತಿ ಇಲ್ಲದಾಗಿದೆ ಎಂದು ಅಧ್ಯಕ್ಷೆ ಶಶಿಕಲಾ ಹೇಳಿದರು.

    ಪ್ರತಿ ಗ್ರಾಮಗಳಲ್ಲೂ ಶೌಚಗೃಹ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. 40 ಪಂಚಾಯಿತಿ ಹಂತದಲ್ಲಿ 4684 ಗುರಿ ನಿಗದಿ ಮಾಡಿರುವಂತೆ ಕೆಲಸ ಆಗಬೇಕು ಎಂದು ಸೂಚಿಸಿದರು.

    ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ವಿದ್ಯುತ್ ಸಂಪರ್ಕ ಅಳವಡಿಸಿಕೊಂಡ ಜನರ ಮೇಲೆ ಪ್ರಕರಣ ದಾಖಲಿಸಬಾರದು. ಕುಡಿಯುವ ನೀರಿನ ಕಾಮಗಾರಿ ಸ್ಥಳಕ್ಕೆ ವಿಳಂಬ ಮಾಡದೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಳಜಿ ವಹಿಸಬೇಕು ಎಂದು ಅಧ್ಯಕ್ಷೆ ಶಶಿಕಲಾ ಅವರು ಕೆಇಬಿ ಅಧಿಕಾರಿಗಳಾದ ತಿಮ್ಮರಾಜು, ಮಮತಾ ಅವರಿಗೆ ಸೂಚಿಸಿದರು.

    ಸಭೆಗೆ ತಡವಾಗಿ ಆಗಮಿಸಿದ ಶಾಸಕ ಟಿ. ರಘುಮೂರ್ತಿ, ಕೃಷಿಕರ ಸ್ಥಿತಿಗತಿ ಕುರಿತು ಚರ್ಚಿಸಲು ಶೀಘ್ರದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದರು.

    ಜಿಪಂ ಸದಸ್ಯೆ ಶಶಿರೇಖಾ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ತಿಪ್ಪಮ್ಮ, ಸಾಮಾಜಿಕ ಸಮಿತಿ ಅಧ್ಯಕ್ಷ ಎಚ್. ಆಂಜನೇಯ, ತಾಪಂ ಇಒ ಶ್ರೀಧರ್ ಬಾರಿಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts