More

    ವೇದಾವತಿಗೆ ನೀರು ನಿಲ್ಲಿಸಿದ್ದಕ್ಕೆ ಚಳ್ಳಕೆರೆಯಲ್ಲಿ ಆಕ್ರೋಶ

    ಚಳ್ಳಕೆರೆ: ಸರ್ಕಾರದ ಆದೇಶದ ಮೇರೆಗೆ ವಿವಿ ಸಾಗರದಿಂದ ವೇದಾವತಿ ನದಿಗೆ ಹರಿಸುತ್ತಿದ್ದ 0.25 ಟಿಎಂಸಿ ಅಡಿ ನೀರು ನಿಲ್ಲಿಸಿದ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ತಾಲೂಕಿನ ರೈತ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಸಕರ ಭವನದಲ್ಲಿ ಬುಧವಾರ ಆಯೋಜಿಸಿದ್ದ ರೈತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು ನೀರು ನಿಲ್ಲಿಸಿದ ಶಾಸಕರ ವಿರುದ್ಧ ಹಳ್ಳಿ,ಹಳ್ಳಿಗಳಲ್ಲಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.

    ಅಖಂಡ ಕರ್ನಾಟಕ ರೈತ ಸಂಘ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಬಿಡಲು ಹಿರಿಯೂರು ತಾಲೂಕಿನ ರೈತರ ವಿರೋಧ ಇಲ್ಲ ಎಂದು ತಿಳಿಸಿದರು.

    ನೀರಿನ ಗಲಾಟೆ ಆರಂಭಕ್ಕೆ ಜಿಲ್ಲಾಧಿಕಾರಿಯವರ ಗೊಂದಲವೇ ಕಾರಣ. ಕುಡಿವ ನೀರಿಗಾಗಿ 0.25 ಟಿಎಂಸಿ ಅಡಿ ನೀರು ಬಿಡುಗಡೆಗೆ ಆದೇಶ ಆಗಿದೆಯೇ ಎಂಬ ವಿಚಾರ ಕೇಳಲು ಹೋದಾಗ, ಚಾನಲ್, ಪೈಪ್‌ಲೈನ್ ಯಾವುದರ ಮೂಲಕ ಹರಿಸಬೇಕೆಂಬ ಗೊಂದಲವಿದೆ ಎಂದು ಹೇಳಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎಂದು ದೂರಿದರು.

    ಶಾಸಕಿ ಪೂರ್ಣಿಮಾ ಅವರಿಗೆ ಸ್ಥಳೀಯ ರೈತರ ಸಮಸ್ಯೆ ಗೊತ್ತಿಲ್ಲ. ವಿವಿ ಸಾಗರದ ನೀರನ್ನು ವೇದಾವತಿಗೆ ಹರಿಸುವುದರಿಂದ ಮೂರು ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರದ ಆದೇಶದಂತೆ ಸಚಿವ ರಮೇಶ್ ಜಾರಕಿಹೊಳಿ ನೀರು ಹರಿಸಲು ಚಾಲನೆ ನೀಡಿದ್ದರು. ಈಗ ನೀರು ನಿಲ್ಲಿಸಿದ ಶಾಸಕಿ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು.

    ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ತಾಲೂಕಿನ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ 2015ರಲ್ಲಿ ಶಾಸಕ ರಘುಮೂರ್ತಿ ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರು ಹರಿಸಲು ಸಮ್ಮತಿ ಪಡೆದುಕೊಂಡಿದ್ದಾರೆ. ಅದರಂತೆ ನೀರು ಬಿಡಲಾಗಿದೆ. ಆದರೆ, ತಾಲೂಕಿನ ಗಡಿ ಭಾಗಕ್ಕೂ ನೀರು ತಲುಪಿಲ್ಲ. ಶಾಸಕಿ ಪೂರ್ಣಿಮಾ ವರ್ತನೆಯಿಂದ ಮಧ್ಯಾಂತರದಲ್ಲಿ ನೀರು ನಿಲ್ಲಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ವಿವಿ ಸಾಗರದಲ್ಲಿ ಸಂಗ್ರಹವಾಗುವ ನೀರಲ್ಲಿ ತಾಲೂಕಿನ ರೈತರಿಗೆ ಹಕ್ಕಿದೆ. ಕಾನೂನು ಉಲ್ಲಂಘನೆ ಮಾಡಿ ನೀರು ತಡೆದ ಶಾಸಕಿ ಪೂರ್ಣಿಮಾ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಲಾಕ್‌ಡೌನ್ ಮತ್ತು 144 ಸೆಕ್ಷನ್ ಜಾರಿ ಲೆಕ್ಕಿಸದೆ ಹೋರಾಟ ರೂಪಿಸಬೇಕಾಗುತ್ತದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ತಾಪಂ ಸದಸ್ಯರಾದ ಟಿ.ಗಿರಿಯಪ್ಪ, ಜಿ.ವೀರೇಶ್, ಎಚ್. ಆಂಜನೇಯ, ಎಚ್. ಸಮರ್ಥರಾಯ, ಉಮಾ, ನಗರಸಭೆ ಸದಸ್ಯರಾದ ಕೆ.ವೀರಭದ್ರಯ್ಯ, ಟಿ. ಮಲ್ಲಿಕಾರ್ಜುನ, ವೈ.ಪ್ರಕಾಶ್, ವಿರೂಪಾಕ್ಷಪ್ಪ, ಬಿ.ಟಿ.ರಮೇಶ್ ಗೌಡ, ಜಿಪಂ ಮಾಜಿ ಸದಸ್ಯ ರಂಗಸ್ವಾಮಿ, ಗ್ರಾಪಂ ಅಧ್ಯಕ್ಷರಾದ ಕೆ.ಬೊಮ್ಮಲಿಂಗಪ್ಪ, ರುದ್ರೇಶ್, ಮುಖಂಡರಾದ ಟಿ.ಪ್ರಭುದೇವ್, ಎಸ್.ಎಚ್.ಸೈಯದ್, ಮೆಡಿಕಲ್ ಕೇಶವ, ಸಿ.ಟಿ.ಶ್ರೀನಿವಾಸ್, ಸಿ.ಜಿ.ಜಯಕುಮಾರ್, ಓ.ಅಂಜಿನಪ್ಪ, ಆರ್.ಪ್ರಸನ್ನಕುಮಾರ್, ಗಾಂಧಿನಗರ ಕೃಷ್ಣ, ಕರೀಕೆರೆ ರಾಜಣ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts