More

    ಚಳ್ಳಕೆರೆ ನಗರಸಭೆಗೆ ಇಲ್ಲ ಸ್ವಂತ ಕಟ್ಟಡ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ವೇಗವಾಗಿ ಅಭಿವೃದ್ಧಿ ಹೊಂದಿರುವ ನಗರ, ವಿಶಾಸ ರಸ್ತೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಿನ್ನೆಲೆಯಲ್ಲಿ ಚಳ್ಳಕೆರೆ ಜಿಲ್ಲೆಯಲ್ಲಿ ಹೆಚ್ಚು ಗಮನಸೆಳೆದಿದೆ. ಆದರೆ, ಇಂತಹ ಪ್ರಗತಿ ಹೊಂದುತ್ತಿರುವ ಚಳ್ಳಕೆರೆ ನಗರಸಭೆಗೆ ಸ್ವಂತ ಕಟ್ಟಡ ಇಲ್ಲವೆಂಬುದೇ ಸೋಜಿಗ.

    31 ವಾರ್ಡ್‌ಗಳ 70 ಸಾವಿರ ಜನಸಂಖ್ಯೆ ಹೊಂದಿರುವ ನಗರ ಪ್ರದೇಶದ ನಿರ್ವಹಣೆಯ ಬಹುದೊಡ್ಡ ಜವಾಬ್ದಾರಿ ನಗರಸಭೆ ಹೊತ್ತಿಕೊಂಡಿದೆ. ಆದರೆ, ಕಾರ್ಯಭಾರ ಮಾಡಲು ಸ್ವಂತಕ್ಕೊಂದು ಕಟ್ಟಡ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

    2017ರಲ್ಲಿ ಪುರಸಭೆಯಿಂದ ನಗರಸಭೆ ಆಗಿ ಮೇಲ್ದರ್ಜೆಗೇರಿದ ಚಳ್ಳಕೆರೆಯಲ್ಲಿ ವಿಶಾಲ ರಸ್ತೆಗಳು, ಶಿಕ್ಷಣ ಸಂಸ್ಥೆಗಳು, ಹೈಟೆಕ್ ಬಸ್ ನಿಲ್ದಾಣ, ಆಸ್ಪತ್ರೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳು ಗಮನಸೆಳೆಯುತ್ತಿವೆ. ಆದರೆ, ಇಷ್ಟೆಲ್ಲ ಪ್ರಗತಿ ಸಾಧಿಸಿದ ಚಳ್ಳಕೆರೆ ನಗರಸಭೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳುವಲ್ಲಿ ವಿಫಲವಾಗಿರುವುದೊಂದು ಕಪ್ಪುಚುಕ್ಕೆ.

    2018-19ರಲ್ಲಿ ನಗರೋತ್ಥಾನ ಯೋಜನೆಯ 4.90 ಕೋಟಿ ರೂ. ವೆಚ್ಚದಲ್ಲಿ ನಗರಸಭೆಗೆ ಕಟ್ಟಡ ನಿರ್ಮಾಣ ಮಾಡಲು ಯೋಜನೆ ಮಾಡಿಕೊಂಡ ನಗರಸಭೆ, ತನ್ನ ಮೂಲ ಕಟ್ಟಡವನ್ನು ನೆಲಸಮ ಮಾಡಿತ್ತು.

    ಆದರೆ, ನಿಗದಿತ ಅನುದಾನಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಾಣದ ಯೋಜನೆ ರೂಪಿಸಿಕೊಳ್ಳದೆ ಮಧ್ಯಂತರದಲ್ಲಿ 10 ಕೋಟಿ ರೂ. ವೆಚ್ಚದ ವಿನ್ಯಾಸಯುಳ್ಳ ಯೋಜನೆಯಾಗಿ ರೂಪ ಪಡೆದುಕೊಂಡ ಬಳಿಕ ಸಮಸ್ಯೆಗೆ ಸಿಲುಕಿತು. ಅನುದಾನ ಕೊರತೆ ಹಿನ್ನೆಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ನನೆಗುದಿಗೆ ಬಿದ್ದಿದೆ.

    ಪರಿಣಾಮ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲಕ್ಕಾಗಿ ನಗರದ ಬಿಎಂಎಚ್‌ಎಸ್ ಆವರಣದಲ್ಲಿ ನಿರ್ಮಿಸಿದ್ದ ರಂಗಮಂದಿರ ಉದ್ಘಾಟನೆ ಆಗುತ್ತಿದ್ದಂತೆ, ಅದನ್ನು ನಗರಸಭೆ ತಾತ್ಕಾಲಿಕವಾಗಿ ತನ್ನ ಆಡಳಿತ ಕಚೇರಿಯನ್ನಾಗಿಸಿಕೊಂಡಿದೆ.
    2019ರಲ್ಲಿ ಲೋಕಾರ್ಪಣೆ ಆಗಿರುವ ರಂಗಮಂದಿರದ ಸದುಪಯೋಗ ಪಡೆಯುವ ಯೋಗ ಚಳ್ಳಕೆರೆ ಸಾರ್ವಜನಿಕರಿಗೆ ಇಲ್ಲಿಯವರೆಗೂ ದೊರೆತಿಲ್ಲ. ನಗರಸಭೆ ಆಡಳಿತಕ್ಕೆ ಸ್ವಂತ ಕಟ್ಟಡ ಭಾಗ್ಯ ದೊರೆತರೆ ಮಾತ್ರ ಸಾಹಿತ್ಯ, ಸಾಂಸ್ಕೃತಿಕ, ರಂಗ ಚಟುವಟಿಕೆಗಳಿಗೆ ರಂಗಮಂದಿರದ ಬಾಗಿಲು ತೆರೆಯಲಿದೆ.

    2018ರಲ್ಲಿ ನಗರೋತ್ಥಾನ ಯೋಜನೆಯಡಿ ಅನುದಾನ ಮೀಸಲಿಡಲಾಗಿತ್ತು. ಅದಕ್ಕೆ ತಕ್ಕಂತೆ ಚಿಕ್ಕದಾಗಿಯಾದರೂ ಕಟ್ಟಡ ಪೂರ್ಣ ಮಾಡಬೇಕಿತ್ತು. ಬದಲಾವಣೆ ಮಾಡಿಕೊಂಡ ಯೋಜನೆಗೆ ಅನುದಾನ ವ್ಯವಸ್ಥೆ ಮಾಡಿಕೊಂಡು ನಗರಸಭಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಕೆಲಸ ಆಗಬೇಕು.
    ಟಿ.ವಿಜಯಕುಮಾರ್ ನಗರಸಭೆ ಸದಸ್ಯ

    ನಗರಸಭೆಗೆ ಕಟ್ಟಡ ಇಲ್ಲದ ಕಾರಣ, ತಾಲೂಕು ರಂಗಮಂದಿರವನ್ನೇ ತಾತ್ಕಾಲಿಕವಾಗಿ ಕಚೇರಿ ಮಾಡಿಕೊಳ್ಳಲಾಗಿದೆ. ಇದರಿಂದ ರಂಗಮಂದಿರದ ಉದ್ದೇಶಕ್ಕೆ ಧಕ್ಕೆ ಉಂಟಾಗಿದೆ. ಕ್ಷೇತ್ರದ ಶಾಸಕರು ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿಕೊಂಡು ಬರಬೇಕು. ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಸಾರ್ವಜನಿಕವಾಗಿ ಸಾಹಿತ್ಯ, ಸಾಂಸ್ಕೃತಿಕ ಕಲಾವಿದರ ಕಾರ್ಯಕ್ರಮಗಳಿಗೆ ರಂಗಮಂದಿರ ಸಿಗುವಂತಾಗಬೇಕು.
    ಟಿ.ಜೆ.ವೆಂಕಟೇಶ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

    ಜಿಲ್ಲಾ ನಗರಾಭಿವೃದ್ಧಿ ಕೋಶದ ವಾರ್ಷಿಕ ಮತ್ತು ನಗರಸಭೆಯ ಎಸ್‌ಎಫ್‌ಸಿ ಕಾಮಗಾರಿಗಳ ಉಳಿಕೆ ಆಗಿರುವ ಅನುದಾನ ಒಗ್ಗೂಡಿಸಿ 10 ಕೋಟಿ ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದಲ್ಲಿ ನಗರಸಭೆ ಕಟ್ಟಡ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ.
    ಲೋಕೇಶ್ ಇಂಜಿನಿಯರ್, ಚಳ್ಳಕೆರೆ ನಗರಸಭೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts