More

    ಕಾಂಗ್ರೆಸ್ ಪಕ್ಷ ಅಪ್ಪಿಕೊಂಡ ಪಪ್ಪಿ?

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆ ರಾಜಕಾರಣವೇ ವಿಚಿತ್ರ. ಒಂದು ಕ್ಷೇತ್ರದ ಅಭ್ಯರ್ಥಿ ಮತ್ತೊಂದು ಕ್ಷೇತ್ರದಲ್ಲಿ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು.
    ಜಾತಿ, ಹಣ ಇಲ್ಲಿ ಹೆಚ್ಚು ನಿರ್ಣಾಯಕ. ಈ ವರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ ಕೆಲ ರಾಜಕಾರಣಿಗಳು ಜಿಲ್ಲೆಯಲ್ಲಿದ್ದಾರೆ. ಇವರು ಪಕ್ಕದ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

    ಜಿ.ಎಚ್.ತಿಪ್ಪಾರೆಡ್ಡಿ, ಎಚ್.ಆಂಜನೇಯ, ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್ ತಮ್ಮ ಕ್ಷೇತ್ರವಲ್ಲದೆ, ಮತ್ತೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರಬಲ್ಲರು. ಜಾತಿ ಕಾರಣಕ್ಕೆ ಬಿ.ಜಿ.ಗೋವಿಂದಪ್ಪ, ಎಚ್.ಆಂಜನೇಯ ಜಿಲ್ಲೆಯ ಹಲವೆಡೆ ಮತಗಳನ್ನು ಸೆಳೆಯಬಲ್ಲರು. ಇನ್ನು ಸಮುದಾಯದ ಮತ ಕಡಿಮೆ ಸಂಖ್ಯೆಯಲ್ಲಿದ್ದರೂ ಚಿತ್ರದುರ್ಗದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಿರಿಯೂರು, ಜಗಳೂರು ಹಾಗೂ ಹಿರಿಯೂರಿನಲ್ಲಿ ಚುನಾವಣೆ ಎದುರಿಸುವ ಡಿ.ಸುಧಾಕರ್, ಚಳ್ಳಕೆರೆ ಕ್ಷೇತ್ರದ ಮೇಲೆ ಹೆಚ್ಚು ಹಿಡಿತ ಹೊಂದಿದ್ದಾರೆ.

    ಕಳೆದ ಬಾರಿ ಚಿತ್ರದುರ್ಗ-ಹಿರಿಯೂರು-ಹೊಸದುರ್ಗ ಕ್ಷೇತ್ರದಲ್ಲಿ ಹೆಚ್ಚು ಓಡಾಡಿ, ಅಂತಿಮ ಕ್ಷಣದಲ್ಲಿ ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗಣನೀಯ ಮತಗಳಿಸಿದ್ದ ಕೆ.ಸಿ.ವೀರೇಂದ್ರ ಪಪ್ಪಿ ಸ್ವಂತ ಊರು ಚಳ್ಳಕೆರೆಯ ಚುನಾವಣೆ ಮೇಲೆ ಪ್ರಭಾವ ಬೀರಬಲ್ಲವರೂ ಆಗಿದ್ದಾರೆ.

    ಚಿತ್ರದುರ್ಗದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ತೆರೆಮರೆ ಕಸರತ್ತು ನಡೆಸುತ್ತಿದ್ದ ಪಪ್ಪಿ, ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರಿಗೆ ಹೂಗುಚ್ಛ ನೀಡುತ್ತಿರುವ ಭಾವಚಿತ್ರ ವೈರಲ್ ಆಗುತ್ತಿದೆ. ಇದು ಚಳ್ಳಕೆರೆ ಜೆಡಿಎಸ್ ಕಾರ್ಯಕರ್ತರನ್ನು ದಿಗ್ಭ್ರಮೆಗೊಳಿಸಿದ್ದರೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೆದ್ದಷ್ಟು ಸಂಭ್ರಮ ತಂದಿದೆ.

    ಚಳ್ಳಕೆರೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ, ಜೆಡಿಎಸ್‌ನ ಎಂ.ರವೀಶ್‌ಕುಮಾರ್, ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕಳೆದ ಸಲ ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡಿದ್ದ ರವೀಶ್‌ಕುಮಾರ್ ಹಿಂದೆ ವೀರೇಂದ್ರ ಪಡೆ ಕಾರ್ಯನಿರ್ವಹಿಸಿತ್ತು. ಈ ಬಾರಿ ಗೆಲುವು ಒಲಿಸಿಕೊಳ್ಳಬಹುದು ಎಂಬ ವಿಶ್ವಾಸದಲ್ಲಿದ್ದ ಜೆಡಿಎಸ್‌ಗೆ ಪಪ್ಪಿ ಫೋಟೋ ಆತಂಕ ಮೂಡಿಸಿದೆ.

    ಮನೆ ಮಾಡಿದ್ದ ರಘು ಆಚಾರ್
    ಕೈ ಟಿಕೆಟ್‌ಗೆ ಚಿತ್ರದುರ್ಗದಲ್ಲಿ ಪೈಪೋಟಿ ಹೆಚ್ಚಿದೆ. ಮಾಜಿ ಎಂಎಲ್ಸಿ ರಘು ಆಚಾರ್ ದುರ್ಗದಲ್ಲಿ ಮನೆ ಮಾಡಿ ನಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಆದರೆ, ಗುರುವಾರದ ಬೆಳವಣಿಗೆ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಚಿತ್ರದುರ್ಗದಲ್ಲಿ ಕೈ ಟಿಕೆಟ್ ಪಪ್ಪಿಗೆ ಸಿಕ್ಕರೆ ಚಳ್ಳಕೆರೆಯಂತೂ ಸೈ, ಹಿರಿಯೂರು-ಹೊಸದುರ್ಗದಲ್ಲೂ ಅನುಕೂಲ ಆಗಲಿದೆ. ಅದರಲ್ಲೂ ಕಾಂಗ್ರೆಸ್ ವರಿಷ್ಠರಿಗೆ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡುವ ತಲೆನೋವು ತಪ್ಪಲಿದೆ ಎನ್ನಲಾಗುತ್ತಿದೆ.

    ಎಸ್ಕೆಬಿ ಮನೆ ಬಾಗಿಲಿಗೆ ಬರಲಿದ್ದ ಟಿಕೆಟ್?
    ಜೈಲಲ್ಲಿದ್ದುಕೊಂಡೇ ತಮ್ಮ ಬೆಂಬಲಿಗರ ಮೂಲಕ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದ ಎಸ್.ಕೆ.ಬಸವರಾಜನ್, ಬಿಡುಗಡೆ ಬಳಿಕ ಪಕ್ಷದ ಕಾರ್ಯಕ್ರಮದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ಬೆಂಬಲಿಗರು ಕೂಡ ಉತ್ಸಾಹದಲ್ಲಿದ್ದರು. ಆದರೆ, ಪತ್ನಿ ಸೌಭಾಗ್ಯಾ ಈ ಹಿಂದೆ ಒಡಂಬಡಿಕೆಯಂತೆ ಜಿಪಂ ಅಧ್ಯಕ್ಷ ಸ್ಥಾನ ತ್ಯಜಿಸದೆ, ಬಂಡಾಯವೆದ್ದಿದ್ದು ಹಾಗೂ ಲೋಕಸಭೆ, ವಿಧಾನಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಜಿಲ್ಲೆಯ ಕಾರ್ಯಕರ್ತರ ದೂರು ಬಸವರಾಜನ್‌ಗೆ ಹಿನ್ನಡೆ ಉಂಟು ಮಾಡಿತ್ತು. ಆದರೂ ತಿಪ್ಪಾರೆಡ್ಡಿ ವಿರುದ್ಧ ಎಸ್‌ಕೆಬಿಯೇ ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಿದ್ದ ಕೈ ವರಿಷ್ಠರಿಗೆ, ಮುರುಘಾ ಮಠದ ಪ್ರಕರಣ ಅಡ್ಡಿಯಾಗಿ ಕಾಡುತ್ತಿದೆ. ಎಸ್ಕೆಬಿಗೆ ಟಿಕೆಟ್ ನೀಡಿದರೆ ಲಿಂಗಾಯತ ಮಠದ ಪೀಠಾಧ್ಯಕ್ಷರ ವಿರುದ್ಧ ಷಡ್ಯಂತ್ರ ಮಾಡಿದ ಆರೋಪ ಮುನ್ನೆಲೆಗೆ ಬಂದು ಬೇರೆ ಕ್ಷೇತ್ರದಲ್ಲಿ ಪಕ್ಷಕ್ಕೆ ಮುಳುವಾದರೆ ಹೇಗೆ ಎಂಬ ಆತಂಕ ಮನೆ ಮಾಡಿದೆ ಎನ್ನಲಾಗುತ್ತಿದೆ.

    ಸ್ಪರ್ಧೆಗೆ ನಿರಾಸಕ್ತಿ
    ಕಳೆದ ಬಾರಿ ಸೋಲುಂಡಿದ್ದ ಹನುಮಲಿ ಷಣ್ಮುಖಪ್ಪ, ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರೂ ಸ್ಪರ್ಧೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ಹಣ, ಜಾತಿ ಬಲ ಹೊಂದಿರುವ ಪಪ್ಪಿ ಕೈಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿಗೆ ಸಿದ್ದು-ಡಿಕೆಶಿ ಜತೆಗಿನ ಪಪ್ಪಿ ಫೋಟೋ ಪುಷ್ಟಿ ನೀಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts