More

    ಗ್ರಾಮ ಪಂಚಾಯಿತಿ ಸದಸ್ಯೆಯರ ಗಂಡಂದಿರ ದರ್ಬಾರು?: ದೂರು ನೀಡಿದ ಉಪಾಧ್ಯಕ್ಷೆ

    ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯೆಯರ ಅಧಿಕಾರದಲ್ಲಿ ಗಂಡಂದಿರ ಹಸ್ತಕ್ಷೇಪ ಹೆಚ್ಚಿದೆ ಎಂದು ಆರೋಪಿಸಿ ಉಪಾಧ್ಯಕ್ಷೆ ಡಿ.ಕೆ.ಲೀಲಾವತಿ ಶನಿವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಮಾನ್ಯ ಸಭೆಗೆ ಸದಸ್ಯರ ಬದಲಿಗೆ ಅವರ ಪತಿಯರು ಆಗಮಿಸಿ ಸಭಾ ನಡವಳಿಕೆ ದುರುಪಯೋಗ ಮಾಡಿಕೊಂಡಿದ್ದಾರೆ.

    ಪಂಚಾಯಿತಿ ನಿರ್ವಹಣೆಗೆ ವರ್ಗ-1ರ ಅನುದಾನದ ಬಗ್ಗೆ ಪ್ರಸ್ತಾಪ ಮಾಡಿದರೆ. ಇದರ ಬಗ್ಗೆ ನಿನಗ್ಯಾಕೆ ಆಸಕ್ತಿ, ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಹಣ ನೀಡಲಾಗಿದೆ ಎಂದು ಅವಾಚ್ಯ ಶಬ್ದಗಳಿಂದ ಸದಸ್ಯೆ ಭವಾನಿ ಅವರ ಪತಿ ನಿಂಧಿಸಿದ್ದಾರೆ ಎಂದು ದೂರಿದ್ದಾರೆ.
    ಇದರಿಂದ ಬೇಸತ್ತು ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದು, ಬಳಿಕ ಅಧಿಕಾರಿಗಳ ಸಲಹೆಯಂತೆ ನಗರದ ಠಾಣೆಗೆ ಲಿಖಿತ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

    17 ಸಂಖ್ಯಾ ಬಲದ ಪಂಚಾಯಿತಿಯಲ್ಲಿ 11 ಮಹಿಳಾ ಸದಸ್ಯರಿದ್ದೇವೆ. ಲಕ್ಷ್ಮಮ್ಮ ಎಂಬುವರು ನಾಮಕೇವಸ್ಥೆಗೆ ಅಧ್ಯಕ್ಷೆಯಾಗಿದ್ದಾರೆ. ಅವರ ಪತಿ ಅಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡು ಆಡಳಿತ ನಡೆಸುತ್ತಾರೆ.

    ಇದರ ಜತೆಗೆ ಕೆಲ ಮಹಿಳಾ ಸದಸ್ಯರ ಗಂಡಂದಿರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಪಂಚಾಯಿತಿಯ ಅನುದಾನ ಮತ್ತು ಕಾಮಗಾರಿಗಳ ಕೆಲಸ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಗೊತ್ತಿಲ್ಲದೆ ನಿರ್ವಹಣೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಭೆಗೆ ಹಾಜರಾದ ತಕ್ಷಣ ಸದಸ್ಯರಿಂದ ಸಹಿ ಪಡೆದುಕೊಳ್ಳುವ ಅಧಿಕಾರಿಗಳು, ಮನಬಂದಂತೆ ಆದೇಶ ಮತ್ತು ಕಾಮಗಾರಿಗಳ ಮಂಜೂರಾತಿ ಬರೆದುಕೊಳ್ಳುತ್ತಾರೆ. ಆಶಾ ಕಾರ್ಯಕರ್ತೆಯಾಗಿ 3 ವರ್ಷ, ಅತಿಥಿ ಶಿಕ್ಷಕಿಯಾಗಿ 8 ವರ್ಷ ಸೇವೆ ಮಾಡಿರುವ ನನಗೆ ಆಡಳಿತದ ಅನುಭವ ಇದೆ. ಪಂಚಾಯಿತಿ ವ್ಯವಸ್ಥೆಯನ್ನು ಕೆಲ ಪಟ್ಟಭದ್ರ ಶಕ್ತಿಗಳಿಂದ ಬಿಡಿಸುವುದು ಬಹಳ ಕಷ್ಟವಾಗಿದ್ದು, ಅಂತಿಮವಾಗಿ ಪೊಲೀಸ್ ಠಾಣೆಗೆ ದೂರು ನೀಡುವಂತಾಗಿದೆ ಎಂದು ತಿಳಿಸಿದ್ದಾರೆ.

    ಸಭೆಗಳಿಗೆ ಸದಸ್ಯೆಯರ ಸಂಬಂಧಿಕರು, ಗಂಡಂದಿರು ಬರುವ ಪರಿಪಾಟ ಹಿಂದಿನಿಂದಲೂ ಅಲಿಖಿತವಾಗಿ ನಡೆದುಕೊಂಡು ಬಂದಿದೆ. ನಾನು ಹೊಸಬನಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಮುಂದಾಗುತ್ತೇನೆ. ಇಂದು ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಮೇಲಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದೇನೆ. ಅವರು ಕ್ರಮಕೈಗೊಳ್ಳಲಿದ್ದಾರೆ.
    -ಯೋಗೀಶ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗೋಪನಹಳ್ಳಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts