More

    ಹಸಿರು ಅಂತಾನೇ ಕಿತ್ತಲೆ ಬಣ್ಣಕ್ಕೆ ತಿರುಗಿತು

    ಚಳ್ಳಕೆರೆ: ಏನಿಲ್ಲ ಅಂತಾನೇ ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆ ಈಗ ಕಿತ್ತಲೆ ವಲಯ ಆಗಿ ಪರಿವರ್ತನೆಯಾಗಿದೆ. ಇಷ್ಟಾದರೂ ನಿಮಗೆ ಜವಾಬ್ದಾರಿ ಬಂದಿಲ್ಲ ಎಂದು ಶಾಸಕ ಟಿ.ರಘುಮೂರ್ತಿ, ಸಭೆಗೆ ಒಂದು ಗಂಟೆ ತಡವಾಗಿ ಬಂದ ಟಿಎಚ್‌ಒ ಡಾ.ಎನ್.ಪ್ರೇಮಸುಧಾ ಅವರನ್ನು ತರಾಟೆಗೆ ತೆಗೆದುಕೊಂಡರು.

    ತಾಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಸೇರಿ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್‌ಫೋರ್ಸ್ ಸಭೆ ನಡೆಯುವ ಮಾಹಿತಿ ಇದ್ದರೂ, ತಡವಾಗಿ ಬಂದಿದ್ದೇಕೆ ಎಂದು ಪ್ರಶ್ನಿಸಿದರು.

    ಜಿಲ್ಲೆಯ ಆರು ತಾಲೂಕಿನ 105 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲು 4 ಸಾವಿರ ಪಿಪಿಇ ಕಿಟ್‌ಗಳು ಜಿಲ್ಲಾಸ್ಪತ್ರೆ ತಲುಪಿವೆ. ನಮ್ಮ ತಾಲೂಕಿಗೆ ಬರಬೇಕಾದ ಕಿಟ್‌ಗಳನ್ನು ಶೀಘ್ರವೇ ತರಿಸಿಕೊಂಡು 15 ಪಿಎಚ್‌ಸಿ ವೈದ್ಯರಿಗೆ ವಿತರಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ್ ಮಾತನಾಡಿ, ತಾಲೂಕಿಗೆ ಬರಲು ನೋಂದಣಿಗೊಂಡ 46 ಜನರಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯದವರಾಗಿದ್ದಾರೆ. ಇದು ನಮ್ಮಲ್ಲಿ ಬಹಳ ಆತಂಕಕ್ಕೆ ಕಾರಣವಾಗಿದೆ ಎಂದರು.

    ಪ್ರತಿಕ್ರಿಯಿಸಿದ ಶಾಸಕರು, ಹೊರ ರಾಜ್ಯ, ಜಿಲ್ಲೆಗಳಿಂದ ತಾಲೂಕಿಗೆ ಬರುವ ಪ್ರಯಾಣಿಕರ ಬಗ್ಗೆ ತಾಲೂಕು ಆಡಳಿತ ಹೆಚ್ಚಿನ ನಿಗಾ ವಹಿಸಬೇಕು. ಇದು ಮಾನವೀಯತೆ ತೋರುವ ಸಮಯವಲ್ಲ. ಯಾರೇ ಬಂದರೂ ಕ್ವಾರಂಟೈನ್‌ಗೆ ಒಳಪಡಿಸಿ ಎಂದು ಸೂಚಿಸಿದರು.

    ಕಾರ್ಮಿಕರ ನೋಂದಣಿ: ಸರ್ಕಾರ ಜಾರಿ ಮಾಡಿರುವ ಕಾರ್ಮಿಕರ ವಿಶೇಷ ಯೋಜನೆಗೆ ತಾಲೂಕಿನಿಂದ ಕೇವಲ 3 ಸಾವಿರ ಕಾರ್ಮಿಕರನ್ನು ಗುರುತಿಸಿರಿದ್ದೀರಾ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಶಫೀವುಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡರು.

    ಈ ಯೋಜನೆಗೆ ಖಾತ್ರಿ ಯೋಜನೆಯ ಕಾರ್ಮಿಕರನ್ನು ಪರಿಗಣಿಸಲು ಅವಕಾಶವಿದೆ. ತಾಲೂಕಿನ 32 ಸಾವಿರ ಖಾತ್ರಿ ಫಲಾನುಭವಿಗಳಿದ್ದಾರೆ. ಇವರ ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆಸಿಲ್ಲವೆ? ನಿಮ್ಮ ನಿರ್ಲಕ್ಷ್ಯದಿಂದಲೇ ಅರ್ಹರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಎಪಿಎಂಸಿ ಹಮಾಲಿ ಕಾರ್ಮಿಕರು ಸೇರಿ ಪಂಚಾಯಿತಿ ಹಂತದ ಖಾತ್ರಿ ಯೋಜನೆ ಕಾರ್ಮಿಕರ ಮಾಹಿತಿ ಸಂಗ್ರಹ ಮಾಡಿ 5 ಸಾವಿರ ವಿಶೇಷ ಯೋಜನೆಗೆ ಅವಕಾಶ ಕಲ್ಪಿಸಿ ಎಂದು ಸೂಚಿಸಿದರು.

    ಈರುಳ್ಳಿ ಖರೀದಿಗೆ ಸಿದ್ಧತೆ ಮಾಡಿಕೊಳ್ಳಿ: ಬಾಗಲಕೋಟೆಯಲ್ಲಿ ಈರುಳ್ಳಿ ಬೆಳೆದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ನಮಗೆ ಎಚ್ಚರಿಕೆ ಗಂಟೆ ಆಗಬೇಕು. ತಾಲೂಕಿನಲ್ಲಿ 3900 ಕ್ವಿಂಟಾಲ್ ಈರುಳ್ಳಿ ಬೆಳೆಯಲಾಗಿದೆ. ಕೂಡಲೇ ಸರ್ಕಾರದಿಂದ ಖರೀದಿಗೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಶಾಸಕರು ಸೂಚಿಸಿದರು. ಸಿಎಂ ಅವರಿಗೆ ನಾನೂ ಪತ್ರ ಬರೆದು ಸಮಸ್ಯೆ ಮನವರಿಕೆ ಮಾಡಿಕೊಡುತ್ತೇನೆ. ಪತ್ರ ತಲುಪುವಷ್ಟರಲ್ಲೇ ತಾಲೂಕಿನ ಈರುಳ್ಳಿ ಬೆಳೆಗಾರರ ಮಾಹಿತಿ ಸಂಗ್ರಹಿಸಿ ಖರೀದಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts