More

  ಡ್ರೆಜ್ಜರ್ ಹರಾಜಿಗೆ ಕೇಂದ್ರ ಸರ್ಕಾರ ಅಸ್ತು

  ವೇಣುವಿನೋದ್ ಕೆ.ಎಸ್ ಮಂಗಳೂರು
  ಸುರತ್ಕಲ್ ಕಡಲಲ್ಲಿ ಪವಡಿಸಿರುವ ಭಗವತಿ ಪ್ರೇಮ್ ಬೃಹತ್ ಡ್ರೆಜ್ಜರ್ ನೌಕೆಯನ್ನು ಇ-ಆಕ್ಷನ್(ಹರಾಜು) ಮಾಡುವುದಕ್ಕೆ ಭಾರತ ಸರ್ಕಾರದ ನೌಕಾಯಾನ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

  ಡ್ರೆಜ್ಜರ್ ನೌಕೆಯನ್ನು ಅಲ್ಲಿಂದ ತೆರವು ಮಾಡುವಂತೆ ನವಮಂಗಳೂರು ಬಂದರು ಮಂಡಳಿ ಪದೇಪದೆ ಸೂಚನೆ ನೀಡಿದ್ದರೂ ಆರಂಭದಲ್ಲಿ ಪ್ರತಿಕ್ರಿಯಿಸಿದ್ದ ಮಾಲೀಕರಾದ ಮೆಸರ್ಸ್ ಮರ್ಕೆಟರ್ ನಂತರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ತಂಡ ಕಳುಹಿಸಿ ಹಡಗಿನ ಪರಿಶೀಲನೆ ನಡೆಸುವುದಾಗಿ ಹೇಳಿದ್ದರೂ ಈ ಕಡೆಗೆ ತಲೆ ಹಾಕಿಲ್ಲ.

  ಸದ್ಯ ಸುರತ್ಕಲ್ ಸಮುದ್ರ ತೀರಕ್ಕೆ ಅತೀ ಸಮೀಪದಲ್ಲೇ ‘ತಳಸ್ಪರ್ಶಿ’ಯಾಗಿ ನಿಂತಿರುವ ನೌಕೆ ಮುಂದೆ ಹೊಸ ಸಮಸ್ಯೆಯೊಂದನ್ನು ಸೃಷ್ಟಿಸುವುದಂತೂ ಖಚಿತ. ಅದಕ್ಕಾಗಿ ಸರ್ಕಾರಕ್ಕೆ ಎನ್‌ಎಂಪಿಟಿ ಪತ್ರ ಬರೆದಿದ್ದು, ನೌಕಾಯಾನ ಸಚಿವಾಲಯ ನಿಯಮಾನುಸಾರ ಹಡಗು ವಿಲೇವಾರಿ ಮಾಡುವುದಕ್ಕೆ ಅನುಮತಿ ನೀಡಿದೆ.

  ಮೌಲ್ಯಮಾಪನ, ಹರಾಜು: ಭಾರತೀಯ ಬಂದರುಗಳ ಕಾಯ್ದೆ ಪ್ರಕಾರ ಇ-ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು. ಅದರಂತೆ ಮಾಧ್ಯಮಗಳಲ್ಲಿ ಸಾರ್ವಜನಿಕ ನೋಟಿಸ್ ನೀಡಲಾಗುವುದು. ಹಡಗಿನ ಮೇಲೆ ಸಾಲ ಅಥವಾ ಬಾಧ್ಯತೆಗಳಿದ್ದರೆ ಕೂಡ ಈ ಮೂಲಕ ಮಾಹಿತಿ ಸಿಗಲಿದೆ. ಬಳಿಕ ಸರ್ಕಾರಿ ಮೌಲ್ಯಮಾಪಕರ ಮೂಲಕ ಡ್ರೆಜ್ಜರ್ ನೌಕೆಯ ಮೌಲ್ಯಮಾಪನ ನಡೆಯಲಿದೆ. ಇದನ್ನು ಅನುಸರಿಸಿ ನೌಕೆಯ ಕನಿಷ್ಠ ಹರಾಜು ದರ ನಿಗದಿಯಾಗಲಿದೆ. ಇ ಹರಾಜು ಪ್ರಕ್ರಿಯೆಯನ್ನು ಸರ್ಕಾರದ ಅಧಿಕೃತ ಹರಾಜು ಸಂಸ್ಥೆ ಎಂಎಸ್‌ಟಿಸಿ ನಿರ್ವಹಿಸಲಿದೆ.

  ಮಾರಾಟವೊಂದೇ ಮಾರ್ಗ: ಕೆಟ್ಟು ನಿಂತಿರುವ ನೌಕೆಯನ್ನು ಮುಂಬೈ ಹಾಗೂ ಕೊಚ್ಚಿನ್ ಪೋರ್ಟ್‌ಗಳ ಉಪ ಸಂರಕ್ಷಣಾಧಿಕಾರಿಗಳು ಸರ್ವೇ ನಡೆಸಿದ್ದು, ದಾಖಲೆಗಳ ದೃಢೀಕರಣ ಹಾಗೂ ತಾಂತ್ರಿಕ ಪರಿಶೀಲನೆ ಕೈಗೊಂಡಿದ್ದಾರೆ. ಅವರು ನೀಡಿದ ವರದಿ ಪ್ರಕಾರ ಈ ಹಡಗು ಚಲಾಯಿಸುವ ಸ್ಥಿತಿಯಲ್ಲಿಲ್ಲ, ಅದಕ್ಕೆ ಯಾವ ವಿಮೆಯೂ ಇಲ್ಲ. ಆದರೆ ಅಪಾಯಕಾರಿ ತೈಲವೂ ಇಲ್ಲ. ಹಾಗಾಗಿ ಅದನ್ನು ಹರಾಜು ಮಾಡುವುದೊಂದೇ ಮಾರ್ಗ ಎಂಬ ಸಲಹೆ ನೀಡಿದ್ದಾರೆ.
  ಹಡಗಿನ ಮಾಲೀಕರೂ ಯಾವುದೇ ರೀತಿಯಲ್ಲಿ ಸ್ಪಂದನೆ ತೋರದಿರುವುದರಿಂದ ನಮಗೆ ಬೇರೆ ಮಾರ್ಗ ಇಲ್ಲ ಎನ್ನುತ್ತಾರೆ ಎನ್‌ಎಂಪಿಟಿ ಚೇರ‌್ಮನ್ ಎ.ವಿ.ರಮಣ.
   
  ಷರತ್ತೇನು?: ಹಡಗು ಖರೀದಿಸುವವರು ಅದನ್ನು ಹೇಗಿದೆಯೋ ಹಾಗೆ  ಆಧಾರದಲ್ಲಿ ಪಡೆಯಬೇಕಾಗುತ್ತದೆ. ಹಾಗಾಗಿ ಹಡಗು ಒಡೆಯುವುದಕ್ಕಿಂತಲೂ ಅದನ್ನು ಟೋವಿಂಗ್ ಮಾಡಿ ಕೊಂಡೊಯ್ಯಬಹುದು. ಯಾವುದೇ ಮಾಲಿನ್ಯ ಉಂಟಾಗುವ ಭೀತಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

  ಎಳೆದು ತರಲಾಗಿತ್ತು: ಈ ನೌಕೆ ಮಂಗಳೂರು ಬಂದರಿನ ಆ್ಯಂಕರೇಜ್‌ನಲ್ಲಿ ಅಕ್ಟೋಬರ್‌ನಲ್ಲಿ ಮುಳುಗುವ ಸ್ಥಿತಿ ತಲುಪಿತ್ತು, ಸಿಬ್ಬಂದಿ ಪಾರಾಗಿದ್ದರು. ಬಳಿಕ ಹಡಗನ್ನು ಟಗ್ ಬಳಕೆ ಮಾಡಿ ಅ.28ರಂದು ಸುರತ್ಕಲ್ ಬೀಚ್ ಸಮೀಪದಲ್ಲಿ ನಿಲ್ಲಿಸಲಾಗಿತ್ತು. ಇನ್ನೊಂದು ಡ್ರೆಜ್ಜರ್ ತ್ರಿದೇವಿ ಪ್ರೇಮ್ ಕೂಡ ಸೆಪ್ಟೆಂಬರ್ 2ರಂದು ಪಣಂಬೂರು ಸಮುದ್ರದ ಆ್ಯಂಕರೇಜ್‌ನಲ್ಲಿ ಜಲಸಮಾಧಿಯಾಗಿತ್ತು. ಅದರ ತೆರವು ಸದ್ಯಕ್ಕಂತೂ ಅಸಾಧ್ಯವಾಗಿದೆ.

  ಮಾಲೀಕರು ಡ್ರೆಜ್ಜರ್ ತೆರವು ಕುರಿತ ನೋಟಿಸ್‌ಗಳಿಗೆ ಸ್ಪಂದಿಸಿಲ್ಲ, ಹಾಗಾಗಿ ನೌಕಾಯಾನ ಸಚಿವಾಲಯ ಸಂಪರ್ಕಿಸಿ ತೆರವು ಮಾಡುವುದಕ್ಕೆ ಕೇಳಿಕೊಂಡಿದ್ದು, ಅನುಮತಿ ಸಿಕ್ಕಿದೆ. ನಿಯಮಾನುಸಾರವಾಗಿ ಇ-ಹರಾಜು ಮೂಲಕ ತೆರವು ಮಾಡುವುದಕ್ಕೆ ನಿರ್ಧರಿಸಿದ್ದೇವೆ.
  – ಎ.ವಿ.ರಮಣ, ಎನ್‌ಎಂಪಿಟಿ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts