

ಶ್ರೀನಗರ: ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಿದ್ದು, ಈ ವರ್ಷ ಪಾಕಿಸ್ತಾನ ಸೇನೆ ಹದಿನೇಳು ವರ್ಷಗಳ ಅವಧಿಯಲ್ಲೇ ಗರಿಷ್ಠ ಮಟ್ಟದ ಕದನ ವಿರಾಮ ಉಲ್ಲಂಘನೆ ಮಾಡಿದೆ. ಮೊದಲ ಎಂಟು ತಿಂಗಳ ಅವಧಿಯಲ್ಲಿ ಜಮ್ಮು ಭಾಗದ ಎಲ್ಒಸಿಯಲ್ಲಿ ಪಾಕಿಸ್ಥಾನ 3,186 ಬಾರಿ ಕದನ ವಿರಾಮ ಉಲ್ಲಂಘಿಸಿದೆ.
ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಈ ವಿಷಯವನ್ನು ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ. ಈ ಉಲ್ಲಂಘನೆಯು ಜನವರಿ 1ರಿಂದ ಸೆಪ್ಟೆಂಬರ್ 7ರ ನಡುವೆ ಆಗಿದೆ. ಇದಲ್ಲದೆ, 242 ಕ್ರಾಸ್ ಬಾರ್ಡರ್ ಫೈರಿಂಗ್ ಘಟನೆಗಳೂ ಜಮ್ಮು ಭಾಗದ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ವರದಿಯಾಗಿದೆ ಎಂದು ನಾಯಕ್ ತಿಳಿಸಿದ್ದಾರೆ.
ಈ ವರ್ಷ ಸೆಪ್ಟೆಂಬರ್ 7ರ ವರೆಗಿನ ಅವಧಿಯಲ್ಲಿ ಆಗಿರುವ ಕದನ ವಿರಾಮ ಉಲ್ಲಂಘನೆ ಪ್ರಕರಣದಲ್ಲಿ 8 ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ನ ಐವರು ಯೋಧರೂ ಗಾಯಗೊಂಡಿದ್ದಾರೆ. ಪ್ರತಿಸಲವೂ ಕದನವಿರಾಮ ಉಲ್ಲಂಘನೆಯಾದಾಗ ಭಾರತೀಯ ರಕ್ಷಣಾ ಪಡೆಯ ಯೋಧರು ಸರಿಯಾದ ಪ್ರತ್ಯುತ್ತರವನ್ನೇ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)