More

    ಪ್ರತ್ಯೇಕ ಮರಳು ನೀತಿ ಕ್ರಿಯಾಯೋಜನೆ, ಜಿಲ್ಲಾಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ್ ಸೂಚನೆ

    ಮಂಗಳೂರು: ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸಲು ಶೀಘ್ರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಯಾವ ರೀತಿ ನೀತಿ ರೂಪಿಸಬಹುದು ಎಂಬ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಸಭೆಗೆ ಹಾಜರಾಗುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಟಾಸ್ಕ್‌ಫೋರ್ಸ್ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ ಹೊಸ ಮರಳು ನೀತಿ ಜಾರಿಗೆ ತರಲಾಗಿದೆ. ಸರ್ಕಾರದ ಏಜೆನ್ಸಿ ಮೂಲಕ ಮರಳು ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಿಆರ್‌ಜಡ್ ಮತ್ತು ನಾನ್ ಸಿಆರ್‌ಜಡ್ ಪ್ರದೇಶ ಇರುವುದರಿಂದ ಮರಳುಗಾರಿಕೆಗೆ ಹೊಸ ನೀತಿ ಜಾರಿ ಅಗತ್ಯ ಎಂದು ಹೇಳಿದರು.
    ಸಂಸದ ನಳಿನ್ ಕುಮಾರ್ ಕಟೀಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್, ನಿರ್ದೇಶಕ ರವೀಶ್, ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಉಡುಪಿ ಜಿಲ್ಲಾಧಿಕಾರಿ ಡಾ.ಜಗದೀಶ್, ದ.ಕ ಎಸ್ಪಿ ಲಕ್ಷ್ಮೀಪ್ರಸಾದ್, ಉಡುಪಿ ಎಸ್ಪಿ ವಿಷ್ಣುವರ್ಧನ, ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಉಪಸ್ಥಿತರಿದ್ದರು.

    ಕೇರಳಕ್ಕಿಲ್ಲ ಮರಳು: ದಕ್ಷಿಣ ಕನ್ನಡದಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮರಳು ಸಾಗಾಟದ ಬಗ್ಗೆ ದೂರುಗಳು ಬಂದಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ಸಾಗಾಟದ ಮೇಲೆ ನಿಗಾ ಇರಿಸಲು ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ಸುಮಾರು 196 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ಸಿ.ಸಿ ಪಾಟೀಲ್ ತಿಳಿಸಿದರು. ಸಿಆರ್‌ಜಡ್ ವ್ಯಾಪ್ತಿಯಲ್ಲಿ 104 ಕುಟುಂಬಗಳಿಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಪರವಾನಗಿ ಒದಗಿಸಲಾಗಿದ್ದು, ಈ ಸಂಖ್ಯೆ ಸ್ವಲ್ಪ ಹೆಚ್ಚಿಸಲು ಅವಕಾಶ ಒದಗಿಸಲಾಗುವುದು ಎಂದರು.

    15 ದಿನದಲ್ಲಿ ಕೆಂಪು ಕಲ್ಲು ಗಣಿಗಾರಿಕೆ, ಪರವಾನಗಿ ಅರ್ಜಿ ಇತ್ಯರ್ಥ
    ಪಟ್ಟಾ ಜಮೀನಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಿಂದ 250 ಮಂದಿ ಅರ್ಜಿ ಸಲ್ಲಿಸಿದ್ದು, ದಾಖಲೆ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ 15 ದಿನಗಳೊಳಗೆ ಪರವಾನಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಸರ್ಕಾರಿ ಜಮೀನಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶವಿಲ್ಲ. ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಲ್ಲು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ದೊರೆಯುವ ಮಣ್ಣನ್ನು ಅಲ್ಲಿನ ಆಳ ಮುಚ್ಚಲು ಬಳಸಬೇಕು. ಬದಲಾಗಿ ಆ ಮಣ್ಣನ್ನು ಹೊರಗೆ ಕೊಂಡೊಯ್ಯುವುದು ಅಪರಾಧ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts