More

    ಅಕ್ರಮ ಸಾಗಿಸುತ್ತಿದ್ದ 14 ಜಾನುವಾರು ವಶ

    ಗಂಗೊಳ್ಳಿ: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಮೀನು ಸಾಗಾಟದ ವಾಹನದಲ್ಲಿ ಅಕ್ರಮವಾಗಿ, ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಿ ಮಾಂಸವನ್ನು ಹೊರರಾಜ್ಯಕ್ಕೆ ಸಾಗಿಸುವ ಜಾಲವನ್ನು ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ನೇತೃತ್ವದ ಪೊಲೀಸರು ಭೇದಿಸಿದ್ದಾರೆ.

    ಮಾಹಿತಿಯಂತೆ ತಪಾಸಣೆ ಮಾಡುತ್ತಿದ್ದಾಗ ಬಂದ ಇನ್‌ಸುಲೇಟರ್ ವಾಹನವನ್ನು ನಿಲ್ಲಿಸಲು ಸೂಚಿಸಿದ್ದು, ತಪ್ಪಿಸಿ ಹೋದ ವಾಹನವನ್ನು ಭಟ್ಕಳ ತಾಲೂಕಿನ ಬೆಳಕೆ ಸಮೀಪ ವಶಕ್ಕೆ ಪಡೆಯಲಾಗಿದೆ. ವಾಹನದಲ್ಲಿ 14 ಜಾನುವಾರುಗಳನ್ನು ಕೈಕಾಲುಗಳನ್ನು ಕಟ್ಟಿ ಅಮಾನವೀಯವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ.
    ನಾವುಂದದ ಜಲೀಲ್ ಎಂಬಾತನು ಬೈಕಿನಲ್ಲಿ ಬಂದಿದ್ದು ಪೊಲೀಸರನ್ನು ನೋಡಿ ಬೈಕ್ ತಿರುಗಿಸಿ ಪರಾರಿಯಾಗಿದ್ದಾನೆ. ಬೈಕಿನ ಹಿಂದಿನಿಂದ ಬರುತ್ತಿದ್ದ ಇನ್ಸುಲೆಟರ್ ವಾಹನವನ್ನು ನೋಡಿ ನಿಲ್ಲಿಸುವಂತೆ ಸೂಚನೆ ನೀಡಿದರು. ಚಾಲಕ ನಿಲ್ಲಿಸದೆ ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಪೊಲೀಸರು ಶಿರೂರು ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರುವವರಿಗೆ ಮಾಹಿತಿ ನೀಡಿದರು. ಶಿರೂರು ಟೋಲ್ ಗೇಟ್‌ನಲ್ಲಿಯೂ ಚಾಲಕ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಚೆಕ್‌ಪೋಸ್ಟ್ ಸಿಬ್ಬಂದಿ ಬೈಕಿನಲ್ಲಿ ಇನ್ಸುಲೇಟರ್ ವಾಹನವನ್ನು ಬೆನ್ನಟ್ಟಿ ಭಟ್ಕಳ ತಾಲೂಕಿನ ಬೆಳಕೆಯಿಂದ ಸ್ವಲ್ಪ ಮುಂದೆ ತಡೆದು ನಿಲ್ಲಿಸಿದ್ದಾರೆ. ಈ ವೇಳೇ ಚಾಲಕ ಜಿಗಿದು ಕತ್ತಲೆಯಲ್ಲಿ ಓಡಿದ್ದಾನೆ.
    ಇನ್ಸುಲೇಟರ್ ವಾಹನವನ್ನು ಶಿರೂರು ಟೋಲ್ ಗೇಟ್ ಬಳಿ ತಂದು ಪರಿಶೀಲಿಸಿದಾಗ ಹಿಂಬದಿಯಲ್ಲಿ 12 ದೊಡ್ಡ ದನಗಳು ಹಾಗೂ 2 ಕರುಗಳನ್ನು ಉಸಿರುಗಟ್ಟುವ ರೀತಿಯಲ್ಲಿ ಕಾಲುಗಳನ್ನು ಕಟ್ಟಿ ಒಂದರ ಮೇಲೆ ಒಂದು ತುಂಬಿಸಿರುವುದು ಪತ್ತೆಯಾಗಿದೆ.

    ನಾವುಂದ ಜಲೀಲ್ ಎಂಬಾತ ಇತರರೊಂದಿಗೆ ಸೇರಿ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪರಿಸರದಲ್ಲಿ ಜಾನುವಾರುಗಳನ್ನು ಕಳ್ಳತನ ಕ್ರಮವಾಗಿ ಮೀನು ಸಾಗಾಟ ಮಾಡುವ ಇನ್ಸುಲೆಟರ್ ವಾಹನದಲ್ಲಿ ಸಾಗಿಸುತ್ತಿದ್ದ, ಮಾಂಸ ಮಾಡಿ ಹೊರ ರಾಜ್ಯಗಳಿಗೆ ರವಾನಿಸುವ ಜಾಲದಲ್ಲಿ ತೊಡಗಿಸಿದ್ದಾನೆ ಎಂದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್ನೊಂದು ಪ್ರಕರಣದಲ್ಲಿ ಶುಕ್ರವಾರ ಕುಂದಾಪುರ ತಾಲೂಕಿನ ಕೊಲ್ಲೂರು ಮುದೂರು ಬಳಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಜಾಸ್ (60) ಎಂಬುವನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಕೊಲ್ಲೂರು ಠಾಣಾ ಎಸ್ ಐ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts