More

    ಜಾನುವಾರುಗಳಿಗೆ ಕಾಡುತ್ತಿದೆ ವಿಚಿತ್ರ ರೋಗ

    ಹಾವೇರಿ: ತಾಲೂಕಿನ ಕೆಲ ಭಾಗದಲ್ಲಿ ಜಾನುವಾರುಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಮೈ ತುಂಬ ಗಡ್ಡೆ, ರಕ್ತ ಚಿಮ್ಮುವಿಕೆ, ಕಾಲುಗಳ ಬಾವು ಸೇರಿ ನಾನಾ ಬಾಧೆಗಳು ಉಂಟಾಗಿ ರಾಸುಗಳು ವಿಲವಿಲ ಒದ್ದಾಡುತ್ತಿವೆ.

    ರೋಗದಿಂದಾಗಿ ರಾಸುಗಳು ಹೈರಾಣಾಗಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಏನು ಚಿಕಿತ್ಸೆ ನೀಡಬೇಕೆಂಬುದು ವೈದ್ಯರಿಗೂ ಸವಾಲಾಗಿದೆ.

    ತಾಲೂಕಿನ ಕರ್ಜಗಿ, ಯತ್ತಿನಹಳ್ಳಿ ಸೇರಿ ಹಲವೆಡೆ ಎತ್ತು, ಹಸುಗಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. ರೋಗಪೀಡಿತ ಜಾನುವಾರುಗಳು ಕಳೆದೊಂದು ವಾರದಿಂದ ನಲುಗುತ್ತಿವೆ. ಎತ್ತುಗಳ ಒದ್ದಾಟ ನೋಡಲಾಗದೆ ರೈತರು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಈ ಜಾನುವಾರುಗಳು ಮೇಲೆಳಲು ಸಾಧ್ಯವಾಗದೇ ಜೀವನ್ಮರಣ ಹೋರಾಟ ನಡೆಸಿವೆ.

    ರೈತರಿಗೆ ಗಾಯದ ಮೇಲೆ ಬರೆ: ಜಿಲ್ಲೆಯಲ್ಲಿ ಒಂದೆಡೆ ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ರೈತರ ಎತ್ತುಗಳು, ರಾಸುಗಳಿಗೆ ವಿಚಿತ್ರ ರೋಗ ಬಾಧೆ ಕಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಸುಗಳ ನರಳಾಟ ನೋಡದೇ ಚಿಕಿತ್ಸೆ ಕೊಡಿಸಲು ರೈತರು ಹರಸಾಹಸಪಡುತ್ತಿದ್ದಾರೆ. ಪಶು ವೈದ್ಯರು ರಾಸುಗಳನ್ನು ಪರಿಶೀಲಿಸಿ ರೋಗದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ರಾಸುಗಳ ಆರೋಗ್ಯ ಸಂಪೂರ್ಣವಾಗಿ ಸುಧಾರಿಸುತ್ತಿಲ್ಲ. ಇದರಿಂದ ರೈತರು ಔಷಧಕ್ಕೆ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಯತ್ತಿನಹಳ್ಳಿಯ ರೈತ ಅಬ್ದುಲ್ ಹುಬ್ಬಳ್ಳಿ ವಿಜಯವಾಣಿಗೆ ತಿಳಿಸಿದರು.

    ಕೃಷಿ ಚಟುವಟಿಕೆಗೂ ಹಿನ್ನಡೆ: ನೆಲ ಹಿಡಿದ ಎತ್ತುಗಳಿಂದ ರೈತರ ಬದುಕು ದುಸ್ತರವಾಗಿದೆ. ಎತ್ತುಗಳಿಲ್ಲದೇ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಲು ಕೊಡುತ್ತಿದ್ದ ಹಸುಗಳು ಈಗ ರೋಗದಿಂದ ಬಳಲುತ್ತಿವೆ. ಇದರಿಂದ ಹಾಲಿನಿಂದ ಬರುತ್ತಿದ್ದ ಆದಾಯಕ್ಕೂ ಕೊಕ್ಕೆ ಬಿದ್ದಿದೆ.

    ವೈದ್ಯರಿಗೂ ಸವಾಲು: ತಾಲೂಕಿನ ವಿವಿಧ ಭಾಗದಲ್ಲಿ ಕಾಣಿಸಿಕೊಂಡಿರುವ ರೋಗ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಎಲ್ಲೆಡೆ ಹರಡುವ ಭೀತಿ ಎದುರಾಗಿದೆ. ಇದರ ನಿಯಂತ್ರಣಕ್ಕೆ ಪಶು ವೈದ್ಯಕೀಯ ಇಲಾಖೆ ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ. ಆದರೆ, ಈ ರೋಗಕ್ಕೆ ನೇರ ಚಿಕಿತ್ಸೆ ಇಲ್ಲದಿರುವುದರಿಂದ ಯಾವೆಲ್ಲ ಚಿಕಿತ್ಸೆ ನೀಡಬೇಕೆಂಬುದು ಸಹ ವೈದ್ಯರಿಗೆ ಸವಾಲಾಗಿದೆ.

    ತಾಲೂಕಿನ ಕೆಲ ಭಾಗದಲ್ಲಿ 20 ರಿಂದ 30 ಜಾನುವಾರುಗಳಲ್ಲಿ ಅನಾರೋಗ್ಯ ಕಂಡುಬಂದಿದೆ. ನಾವು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಲಂಪಿಸ್ಕಿನ್ ರೋಗದ ಲಕ್ಷಣಗಳು ಕಂಡುಬಂದಿವೆ. ಹೆಚ್ಚಿನ ವಿವರಕ್ಕಾಗಿ ಜಾನುವಾರುಗಳ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ವರದಿ ಬಂದಿಲ್ಲ. ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಎಲ್ಲೆಡೆ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲು ಪಶು ವೈದ್ಯರಿಗೆ ಸೂಚನೆ ನೀಡಲಾಗಿದೆ.

    | ಡಾ. ಸತೀಶ ಸಂತಿ, ಉಪನಿರ್ದೇಶಕ, ಪಶು ವೈದ್ಯಕೀಯ ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts