ಇಂದು ಲೋಕಸಭೆಯಲ್ಲಿ ವಂದೇ ಮಾತರಂ ಕುರಿತು ಚರ್ಚೆ ಆರಂಭಿಸಲಿರುವ ಪ್ರಧಾನಿ ಮೋದಿ; ಕಾಂಗ್ರೆಸ್​ನಿಂದ ಪ್ರಿಯಾಂಕಾ, ಗೊಗೊಯ್ | Vande Mataram

ಪ್ರಧಾನಿ ಮೋದಿ ಮತ್ತು ಪ್ರಿಯಾಂಕಾ ಗಾಂಧಿ
ಪ್ರಧಾನಿ ಮೋದಿ ಮತ್ತು ಪ್ರಿಯಾಂಕಾ ಗಾಂಧಿ
Published on
ನವದೆಹಲಿ: ವಂದೇ ಮಾತರಂ(Vande Mataram) ಗೀತೆಯ 150ನೇ ವಾರ್ಷಿಕೋತ್ಸವ ನಿಮಿತ್ತ ಇಂದು(ಡಿ. 08) ಲೋಕಸಭೆಯಲ್ಲಿ ಪ್ರಧಾನಿ ಮೋದಿ ಚರ್ಚೆ ಆರಂಭಿಸಲಿದ್ದಾರೆ. ನಾಳೆ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಪ್ರಾರಂಭಿಸಲಿದ್ದಾರೆ.
ರಾಷ್ಟ್ರೀಯ ಗೀತೆ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ಚರ್ಚೆಯನ್ನು ಲೋಕಸಭೆಯು ಪಟ್ಟಿ ಮಾಡಿದೆ. 10 ಗಂಟೆಗಳ ಸಮಯವನ್ನು ನಿಗದಿಪಡಿಸಿದೆ. 10 ಗಂಟೆಗಳ ಸಮಯದಲ್ಲಿ ಬಿಜೆಪಿ ತನ್ನ ಚರ್ಚೆಗೆ ಮೂರು ಗಂಟೆಗಳನ್ನು ನಿಗದಿಪಡಿಸಿಕೊಂಡಿದೆ. ಮ. 12 ಗಂಟೆಗೆ ಪ್ರಧಾನಿಯವರು ಮಾತನಾಡಲಿದ್ದು, ಎನ್‌ಡಿಎ ಸರ್ಕಾರದ ನಿಲುವನ್ನು ವಿವರಿಸಲಿದ್ದಾರೆ. ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಲಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ಫೂರ್ತಿಯ ಮೂಲವಾಗಿದ್ದ ವಂದೇ ಮಾತರಂ ಗೀತೆಯನ್ನು ಬಂಕಿಮಚಂದ್ರ ಚಟರ್ಜಿಯವರು ಸಂಸ್ಕೃತದಲ್ಲಿ ರಚಿಸಿದ್ದರು. ಈ ಹಾಡು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ, ಅದರ ಐತಿಹಾಸಿಕ ಮಹತ್ವ ಮತ್ತು ಪ್ರಸ್ತುತ ಪ್ರಸ್ತುತತೆಯನ್ನು ಪ್ರಧಾನಿ ಮೋದಿ ಎತ್ತಿ ತೋರಿಸುವ ಸಾಧ್ಯತೆಯಿದೆ.
ಇತ್ತೀಚೆಗೆ ಪ್ರಧಾನಿ ಮೋದಿ 1937ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಹಾಡಿನ ಪ್ರಮುಖ ಚರಣಗಳನ್ನು ತೆಗೆದುಹಾಕಿ ವಿಭಜನೆಯ ಬೀಜಗಳನ್ನು ಬಿತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.

ಕಾಂಗ್ರೆಸ್​ನಿಂದ ಪ್ರಿಯಾಂಕಾ, ಗೊಗೊಯ್ ಸೇರಿ 6 ಸಂಸದರು ಕಣಕ್ಕೆ

ಲೋಕಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಹೈವೋಲ್ಟೇಜ್ ಚರ್ಚೆಯಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಬಳಿಕ ವಿರೋಧ ಪಕ್ಷ ಕಾಂಗ್ರೆಸ್ ಚರ್ಚೆಯಲ್ಲಿ ಭಾಗವಹಿಸಲಿದ್ದು, ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ 6 ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್​ನಿಂದ ಮೊದಲು ಉಪನಾಯಕ ಗೌರವ್ ಗೊಗೊಯ್ ಮಾತನಾಡಲಿದ್ದು, ಬಳಿಕ ಪ್ರಿಯಾಂಕಾ ಗಾಂಧಿ ಮಾತನಾಡುವ ನಿರೀಕ್ಷೆಯಿದೆ. ನಂತರ ದೀಪೇಂದರ್ ಹೂಡಾ, ಮಣಿಪುರ ಸಂಸದ ಡಾ. ಬಿಮೋಲ್ ಅಕೋಯಿಜಮ್, ಪ್ರಣಿತಿ ಶಿಂಧೆ, ಪ್ರಶಾಂತ್ ಪಡೋಲೆ, ಚಾಮಲಾ ರೆಡ್ಡಿ ಹಾಗೂ ಕೊರ್ಬಾ ಸಂಸದ ಜ್ಯೋತ್ಸನಾ ಮಹಂತ್ ಮಾತನಾಡಲಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net