ಅಫ್ಘಾನ್ ವಿರುದ್ಧದ ಸರಣಿಗೆ ತಂಡ ಪ್ರಕಟ: ಯಾರಿಗೆ ಲಕ್​..ಯಾರಿಗೆ ಕೊಕ್​...ಹೀಗಿದೆ ಟೀಮ್ ಇಂಡಿಯಾ ಟಿ20 ಸ್ಕ್ವಾಡ್ | INDvsAFG

INDvsAFG | ಅಫ್ಘಾನ್ ವಿರುದ್ಧದ ಸರಣಿಗೆ ತಂಡ ಪ್ರಕಟ
INDvsAFG | ಅಫ್ಘಾನ್ ವಿರುದ್ಧದ ಸರಣಿಗೆ ತಂಡ ಪ್ರಕಟ
Published on
INDvsAFG: ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಗಾಗಿ ಆಯ್ಕೆ ಸಮಿತಿಯು ಮಂಗಳವಾರ ಭಾರತ ತಂಡವನ್ನು ಪ್ರಕಟಿಸಿದೆ. ಸೆಪ್ಟೆಂಬರ್ 13 ರಂದು ನವದೆಹಲಿಯಲ್ಲಿ ಪ್ರಾರಂಭವಾಗುವ ಈ ಸರಣಿಯು ಮುಂಬರುವ ಏಷ್ಯನ್ ಗೇಮ್ಸ್‌ಗಿಂತ ಮುಂಚಿತವಾಗಿ ನಡೆಯಲಿದೆ. ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಹಲವು ಪ್ರಮುಖ ಆಟಗಾರರು ಇದೀಗ ತಂಡಕ್ಕೆ ಮರಳಿದ್ದಾರೆ.
ತಂಡಕ್ಕೆ ಪುನರಾಗಮನ ಮಾಡಿರುವ ಪ್ರಮುಖ ಆಟಗಾರ ಜಸ್ಪ್ರೀತ್ ಬುಮ್ರಾ. ಅವರು ಕೊನೆಯದಾಗಿ ಜುಲೈ 16 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಆಡಿದ್ದರು. ಆ ಪಂದ್ಯದಲ್ಲಿ ಅವರ ಎಡಮೊಣಕಾಲಿಗೆ ಗಾಯವಾಗಿದ್ದು, ಅಂದಿನಿಂದಲೂ ಅವರು ತಂಡದಿಂದ ಹೊರಗುಳಿದಿದ್ದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದ ಉಳಿದ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ನಾಲ್ಕೂ ಆಟಗಾರರ ಅಂತಿಮ ಲಭ್ಯತೆಯು ಅವರ ಫಿಟ್‌ನೆಸ್ ಕ್ಲಿಯರೆನ್ಸ್ ಆಧಾರದ ಮೇಲೆ ನಿರ್ಧಾರವಾಗಲಿದೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಿಂದಲೂ ಬುಮ್ರಾ ಹೊರಗುಳಿದಿದ್ದರು, ಆ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಮೂರು ಮಾದರಿಯ ಪ್ರಮುಖ ಆಟಗಾರರಾಗಿರುವ ಸುಂದರ್, ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಸಂಭವಿಸಿದ ಹ್ಯಾಮ್‌ಸ್ಟ್ರಿಂಗ್ ಇಂಜುರಿ ಕಾರಣದಿಂದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಅಫ್ಘಾನಿಸ್ತಾನ್ ವಿರುದ್ಧ ಕಣಕ್ಕಿಳಿಯಲಿರುವ ಈ ಪಡೆಯೇ ಈ ತಿಂಗಳ ಕೊನೆಯಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿದೆ.
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರೊಂದಿಗೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಸಂಜು ಹಾಗೂ ಇಶಾನ್ ವಿಕೆಟ್‌ಕೀಪರ್‌ಗಳಾಗಿಯೂ ಕಾರ್ಯನಿರ್ವಹಿಸಲಿದ್ದು, ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್, ಉಪನಾಯಕ ತಿಲಕ್ ವರ್ಮಾ ಮತ್ತು ಶಿವಂ ದುಬೆ ಬ್ಯಾಟಿಂಗ್​ಗೆ ಬಲ ತುಂಬಲಿದ್ದಾರೆ.
ಭಾರತ ತಂಡವು ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ರೂಪದಲ್ಲಿ ಮೂರು ಆಲ್ ರೌಂಡರ್ ಆಯ್ಕೆಗಳನ್ನು ಮಾಡಿಕೊಂಡಿದೆ. ಇನ್ನು ರವಿ ಬಿಷ್ಟೋಯ್ ಅವರೊಂದಿಗೆ ವರುಣ್ ಚಕ್ರವರ್ತಿ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಮುನ್ನಡೆಸಲಿದ್ದು, ಹರ್ಷಿತ್ ರಾಣಾ ಹೆಚ್ಚುವರಿ ಬೌಲಿಂಗ್ ಆಯ್ಕೆಯಾಗಿದ್ದಾರೆ(ಏಜೆನ್ಸೀಸ್​).

ಹೀಗಿದೆ ನೋಡಿ ಟೀಮ್​ ಇಂಡಿಯಾ!...

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್*, ವರುಣ್ ಚಕ್ರವರ್ತಿ, ರವಿ ಬಿಷ್ಟೋಯ್, ಜಸ್ಪ್ರೀತ್ ಬುಮ್ರಾ*, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ*.
(ಸೂಚನೆ: * ಗುರುತಿರುವ ಆಟಗಾರರ ಲಭ್ಯತೆಯು ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net