ಹೊಸ ನಾಯಕನಿಗಾಗಿ ಮುಂಬೈ ಇಂಡಿಯನ್ಸ್ ಹುಟುಕಾಟ: ಹಾರ್ದಿಕ್ ಟ್ರೇಡ್ ಡೌಟ್!...ರೋಹಿತ್ ಕೈಯಲ್ಲಿದೆಯಂತೆ ಮುಂದಿನ ಕ್ಯಾಪ್ಟನ್ ಭವಿಷ್ಯ! | Mumbai Indians

Mumbai Indians | ಹೊಸ ನಾಯಕನಿಗಾಗಿ ಮುಂಬೈ ಇಂಡಿಯನ್ಸ್ ಹುಟುಕಾಟ
Mumbai Indians | ಹೊಸ ನಾಯಕನಿಗಾಗಿ ಮುಂಬೈ ಇಂಡಿಯನ್ಸ್ ಹುಟುಕಾಟ
Published on
ಮುಂಬೈ: ಅನೇಕ ತಿಂಗಳಿನಿಂದ ಹರಿದಾಡುತ್ತಿದ್ದ ಆಟಗಾರರ ವಿನಿಮಯ (ಟ್ರೇಡ್‌) ವದಂತಿಗಳ ನಂತರ, ಇದೀಗ ನಾಯಕತ್ವ ಇಲ್ಲದಿದ್ದರೂ ಸಹ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲೇ ಮತ್ತೊಂದು ವರ್ಷ ಮುಂದುವರಿಯುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಹಾರ್ದಿಕ್‌ಗೆ ಸಂಬಂಧಿಸಿದಂತೆ ಪ್ರಸ್ತಾಪವಾಗಿದ್ದ ಟ್ರೇಡ್ ಮಾತುಕತೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.
ಮುಂಬೈ ಇಂಡಿಯನ್ಸ್‌ಗೆ ಸೂಕ್ತವಾದ ಡೀಲ್ ಇನ್ನೂ ಸಿಕ್ಕಿಲ್ಲ. ಆದ್ದರಿಂದ, ಮುಂಬರುವ ಆವೃತಿಯ ಐಪಿಎಲ್​ಗೂ ಮುನ್ನ ಹಾರ್ದಿಕ್ ಅದೇ ಫ್ರಾಂಚೈಸಿಯಲ್ಲಿ ಉಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದಾಗ್ಯೂ, ಎಂಐ ನಾಯಕತ್ವದ ಬದಲಾವಣೆಗೆ ಸಜ್ಜಾಗಿದೆ ಎಂದು ವರದಿಯಾಗಿದ್ದು, ಈ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಯಾರು ಆ ಹೊಸ ನಾಯಕ...?

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯು ಹೊಸ ನಾಯಕನ ಅಡಿಯಲ್ಲಿ ವಿಭಿನ್ನ ದಾರಿಯಲ್ಲಿ ಸಾಗಲು ನೋಡುತ್ತಿದೆ. ಫ್ರಾಂಚೈಸಿಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಟ್ಟ ರೋಹಿತ್ ಶರ್ಮಾ ಮತ್ತೆ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ. ಬದಲಿಗೆ, ಫ್ರಾಂಚೈಸಿಯ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು ಎಂಬ ಚರ್ಚೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ತಿಲಕ್ ವರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ನಾಯಕತ್ವದ ರೇಸ್​​ನಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮತ್ತು ವರದಿಯ ಪ್ರಕಾರ ತಿಲಕ್ ವರ್ಮಾ ಅವರೇ ನಾಯಕತ್ವಕ್ಕೆ ನೆಚ್ಚಿನ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ ಟ್ರೇಡ್ ಡೌಟ್​!

ಹಾರ್ದಿಕ್ ಪಾಂಡ್ಯ ಅವರ ಸಂಭವನೀಯ ಟ್ರೇಡ್ ವಿಚಾರಕ್ಕೆ ಬಂದರೆ, ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಮಾತುಕತೆ ನಡೆಸಿತ್ತು ಎಂದು ವರದಿಗಳು ಹೇಳುತ್ತಿದ್ದು, ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್​, ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮೆರಾನ್ ಗ್ರೀನ್ ಅವರನ್ನು ಟ್ರೇಡ್ ಡೀಲ್‌ನಲ್ಲಿ ಪ್ರಸ್ತಾಪಿಸಿತ್ತು. ಆದಾಗ್ಯೂ, ಮುಂದಿನ ವರ್ಷ ಗ್ರೀನ್ ಅವರ ವರ್ಕ್‌ಲೋಡ್ ಮೇಲಿನ ಅನುಮಾನಗಳಿಂದಾಗಿ ಇದು ಮುಂಬೈ ಇಂಡಿಯನ್ಸ್‌ಗೆ ಮನವರಿಕೆಯಾಗಲಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದೊಂದಿಗೆ ಮಾತುಕತೆಗಳು ಅವರ ಹೊಸ ಮುಖ್ಯ ತರಬೇತುದಾರರನ್ನು ನಿಗದಿಪಡಿಸಿದ ನಂತರ ನಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಹಾರ್ದಿಕ್ ಟ್ರೇಡ್ ಆಗದೇ ಇದ್ದರೂ ಆಶ್ಚರ್ಯಪಡಬೇಡಿ. ಈ ನಿಟ್ಟಿನಲ್ಲಿ ಆಟಗಾರನೊಂದಿಗೂ ಚರ್ಚೆಗಳು ನಡೆದಿವೆ. ಟ್ರೇಡ್ ನಡೆಯಬೇಕಾದರೆ ಹಲವು ವಿಷಯಗಳು ಸರಿಯಾದ ಜಾಗಕ್ಕೆ ಬರಬೇಕಾಗುತ್ತದೆ. ಹಾಗಾಗಿ ಇದು ಅಷ್ಟು ಸರಳವಾಗಿಲ್ಲ ಎಂದು ಬೆಳವಣಿಗೆಗಳ ನಿಕಟ ಮೂಲವೊಂದು ವರದಿ ಮಾಡಿದೆ.

ಸೂರ್ಯಕುಮಾರ್ ಯಾದವ್ ಭವಿಷ್ಯವೇನು..?

ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರನ್ನು ಮುಂಬರುವ ಆವೃತ್ತಿಗೆ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಸೀಸನ್ ಕಳಪೆಯಾಗಿದ್ದರೂ, 35 ವರ್ಷದ ಆಟಗಾರನನ್ನು ಉಳಿಸಿಕೊಳ್ಳಲು ಎಂಐ ಮುಂದಾಗಿದೆ. ಕಳೆದ ಋತುವಿನಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಅದಕ್ಕೂ ಹಿಂದಿನ ಸೀಸನ್‌ಗಳ ಬಗ್ಗೆ ಏನು ಹೇಳ್ತೀರಿ..? ಮುಂಬೈ ಇಂಡಿಯನ್ಸ್ ಒಂದೇ ಒಂದು ಋತುವಿನ ಆಧಾರದ ಮೇಲೆ ಆಟಗಾರನನ್ನು ಕೈಬಿಡುವುದಿಲ್ಲ ಮತ್ತು ಅವರ ಕಾರ್ಯವೈಖರಿ ಹಾಗಿಲ್ಲ. ಅವರು ತಮ್ಮ ಒನ್ ಫ್ಯಾಮಿಲಿ ಟ್ಯಾಗ್ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಅದನ್ನೇ ನಂಬುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮಹೇಲ ಜಯವರ್ಧನೆ ಅವರು 2+1 ವರ್ಷಗಳ ಒಪ್ಪಂದ ಮಾಡಿಕೊಂಡಿರುವುದರಿಂದ, ಇನ್ನೂ ಒಂದು ಋತುವಿಗೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ತರಬೇತುದಾರರಾಗಿ ಮುಂದುವರಿಯಲಿದ್ದಾರೆ. 2028 ರಲ್ಲಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ 2027 ರ ಐಪಿಎಲ್ ಕೊನೆಯ ಸೀಸನ್ ಆಗಿರಲಿದೆ. ಹೀಗಾಗಿ, ಸದ್ಯಕ್ಕೆ ತಂಡದಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡದಿರಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net